More

    ಕೋವಿಡ್ ಕೇಂದ್ರಗಳಾಗಿ ವಸತಿ ಶಾಲೆಗಳು, ಸೋಂಕಿತರ ಸೇವೆಗೆ 13 ಆಂಬುಲೆನ್ಸ್, ಆಕ್ಸಿಜನ್, ಬೆಡ್ ಕೊರತೆ ಇಲ್ಲ!

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ತೀವ್ರಗೊಳ್ಳುತ್ತಿರುವ ನಡುವೆ ಹೈ ಆಲರ್ಟ್ ಆಗಿರುವ ಜಿಲ್ಲಾಡಳಿತ ಸೋಂಕಿತರ ತ್ವರಿತ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿನ ಎಲ್ಲ ವಸತಿ ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿದೆ. ಸಮಾಜ ಕಲ್ಯಾಣ ಇಲಾಖೆಯ 32 ಹಾಸ್ಟೆಲ್‌ಗಳು, ಬಿಸಿಎಂನ 30 ಹಾಸ್ಟೆಲ್‌ಗಳು ಸೇರಿ ಸುಮಾರು 65 ವಸತಿ ನಿಲಯಗಳನ್ನು ಕರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಭಯ ನೀಡಿದ್ದಾರೆ.

    ಕಳೆದ ವರ್ಷ ಇದೇ ಸಂದರ್ಭದಲ್ಲಿ ವಸತಿ ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗಿತ್ತು. ಬಳಿಕ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಏತನ್ಮಧ್ಯೆ ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ರೂಪದಲ್ಲಿ ತೀವ್ರಗೊಳ್ಳುತ್ತಿರುವುದರಿಂದ ವಸತಿ ಶಾಲೆಗಳನ್ನು ಮತ್ತೆ ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಐಸೋಲೇಷನ್ ಸೆಂಟರ್: ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ, ಹೊಸಕೋಟೆ ತಾಲೂಕು ಆಸ್ಪತ್ರೆ, ದೇವನಹಳ್ಳಿ ತಾಲೂಕು ಆಸ್ಪತ್ರೆ, ನೆಲಮಂಗಲ ತಾಲೂಕು ಆಸ್ಪತ್ರೆ, ನೆಲಮಂಗಲದ ರಾಮಯ್ಯ ಹರ್ಷ ಆಸ್ಪತ್ರೆ, ದೇವನಹಳ್ಳಿಯ ರಾಮಯ್ಯಲೀನಾ ಆಸ್ಪತ್ರೆ, ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ಹೊಸಕೋಟೆಯ ಎಂವಿಜೆ ಆಸ್ಪತ್ರೆ, ದೊಡ್ಡಬಳ್ಳಾಪುರದ ಕೊಲಂಬಿಯಾ ಏಷಿಯಾ, ನೆಲಮಂಗಲದ ವಿಪಿ ಮ್ಯಾಂಗ್ನುಸ್ ಆಸ್ಪತ್ರೆ ಹಾಗೂ ಸಿದ್ಧಾರ್ಥ ಆಸ್ಪತ್ರೆಗಳನ್ನು ಐಸೋಲೇಷನ್ ಕೇಂದ್ರಗಳಾಗಿ ಬಳಸುತ್ತಿದ್ದು, ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಕರೊನಾ ಸೋಂಕಿತರಿಗೆ ಮೀಸಲಿಸುವಂತೆ ಜಿಲ್ಲಾಡಳಿತ ನಿಗಾವಹಿಸಿದೆ.

    ಸೋಂಕಿತರ ಸಂಖ್ಯೆ 26,824: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ 26,824ಸೋಂಕಿತ ಪ್ರಕರಣ ದೃಢಪಟ್ಟಿದ್ದು, 1,233ಪ್ರಕರಣ ಬೇರೆ ಜಿಲ್ಲೆ ಹಾಗೂ ಹೊರರಾಜ್ಯದವರಾಗಿದೆ. 23,018 ಪ್ರಕರಣ ಗ್ರಾಮಾಂತರ ಜಿಲ್ಲೆ ನಿವಾಸಿಗಳದ್ದಾಗಿದೆ. 215 ಮಂದಿ ಇದುವರೆಗೆ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಬೆಂಗಳೂರು ಸೋಂಕಿತರು: ಗ್ರಾಮಾಂತರ ಜಿಲ್ಲೆ ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಬೆಂಗಳೂರಿನ ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಾಂತರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು, ಜಿಲ್ಲೆಯಲ್ಲಿನ ಕೋವಿಡ್ ಕೇಂದ್ರಗಳಲ್ಲಿ ಹಾಸಿಗೆ ಭರ್ತಿಯಾಗುತ್ತಿವೆ. ಇದರಿಂದ ಜಿಲ್ಲೆಯಲ್ಲಿನ ಸೋಂಕಿತರಿಗೆ ಸ್ಥಳೀಯವಾಗಿ ಬೆಡ್ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದನ್ನು ನಿರಾಕರಿಸಿರುವ ಜಿಲ್ಲಾಡಳಿತ ಪ್ರಸ್ತುತ ಅಂಥ ಯಾವುದೇ ಪರಿಸ್ಥಿತಿ ಇಲ್ಲ. ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇಲ್ಲ, ಆಕ್ಸಿಜನ್ ಸಮಸ್ಯೆಯೂ ಇಲ್ಲ. ಈ ಬಗ್ಗೆ ಯಾವುದೇ ಆಂತಕಪಡುವ ಅವಶ್ಯಕತೆ ಇಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ರಸ್ತೆಗಿಳಿದ ಆಂಬುಲೆನ್ಸ್: ಕಳೆದ ವರ್ಷ ಪ್ರತಿ ತಾಲೂಕಿಗೆ ಒಂದರಂತೆ ಹಾಗೂ ಜಿಲ್ಲಾಡಳಿತ ಭವನದ ಕೇಂದ್ರಸ್ಥಾನದಲ್ಲಿ ಮೂರು ಸೇರಿ 7 ಆಂಬುಲೆನ್ಸ್‌ಗಳನ್ನು ಜಿಲ್ಲಾ ವ್ಯಾಪ್ತಿಯ ಕರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ 13 ಆಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಿದೆ. ನೆಲಮಂಗಲ ತಾಲೂಕಿಗೆ 4 ಆಂಬುಲೆನ್ಸ್ ಮೀಸಲಿಟ್ಟಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ತಾಲೂಕುಗಳಿಗೆ ತಲಾ 3 ಆಂಬುಲೆನ್ಸ್ ಸೇವೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.

    ಸೋಂಕಿತರ ತ್ವರಿತ ಚಿಕಿತ್ಸೆಗಾಗಿ ವಸತಿ ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ, 13 ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಲಾಗಿದೆ, ಆಕ್ಸಿಜನ್, ಬೆಡ್ ಸೇರಿ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರು ಆತಂಕಪಡಬೇಕಿಲ್ಲ.
    ಕೆ.ಶ್ರೀನಿವಾಸ್
    ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts