More

    ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

    ಶ್ರೀನಿವಾಸಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯ್ಯುವ ಕೆಲಸ ಮಾಡೋಣ ಎಂದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ಶ್ರೀನಿವಾಸಪುರದಲ್ಲಿ ನಿರ್ಮಾಣಗೊಂಡಿರುವ ಪುರಸಭೆ ಕಚೇರಿಯ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಜಿಲ್ಲೆಗೆ ಅಭಿವೃದ್ಧಿ ಬಗ್ಗೆ ಚಿಂತಿಸುವ ಸಚಿವರು ಸಿಕ್ಕಿರುವುದು ನಮ್ಮ ಭಾಗ್ಯ. ಕೇಂದ್ರ ಸರ್ಕಾರ ಸಾವಿರ ಎಫ್‌ಪಿಒ ಸಂಘಟನೆಗಳನ್ನು ರಚಿಸಿ ಅವುಗಳ ಮೂಲಕ ಬೆಳೆಗಳಿಗೆ ಬೆಲೆ ಸಿಗುವ ವ್ಯವಸ್ಥೆ ಮಾಡಿದೆ. ಹಿರಿಯ ಶಾಸಕ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆದ್ಯತೆ ನೀಡಲಾಗುವುದು ಎಂದರು.

    ಸಚಿವ ಮುನಿರತ್ನ ಮಾತನಾಡಿ, ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿರುವುದು ನನ್ನ ಪುಣ್ಯ. ಹಿರಿಯರ ಮಾರ್ಗದರ್ಶನದಲ್ಲಿ ರೈತರ ಸಮಸ್ಯೆ ಪರಿಹರಿಸಿ, ಅವರಿಗೆ ಮೂಲಸೌಲಭ್ಯ ಒದಗಿಸುವುದು ನನ್ನ ಕರ್ತವ್ಯ ಎಂದರು.

    ಹಿರಿಯರ ಮಾರ್ಗದರ್ಶನದಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರ ಮುಖದಲ್ಲಿ ನಗು ಮೂಡುವಂತೆ ಮಾಡುವುದು ನನ್ನ ಉದ್ದೇಶ. ತೋಟಗಾರಿಕೆ ಬೆಳೆಗಳು ಈ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಶೀಥಿಲ ಗೃಹ, ತಿರುಳು ತೆಗೆಯುವ ಘಟಕ, ಮಾರುಕಟ್ಟೆ ವ್ಯವಸ್ಥೆ, ತರಕಾರಿ ರಫ್ತಿಗೆ ವ್ಯವಸ್ಥೆ ಸೇರಿ ಮುಂತಾದ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.

    ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕ ನಿರ್ಧಾರಗಳು ಬೇರೆ-ಬೇರೆಯಾಗಿರುತ್ತವೆ. ಆದರೆ, ವೈಯಕ್ತಿಕ ಜವಾಬ್ದಾರಿ ವಿಷಯ ಬಂದಾಗ ನಡೆದುಕೊಳ್ಳುವುದೇ ಬೇರೆಯಾಗುತ್ತದೆ. ಸಚಿವ ಮುನಿರತ್ನ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ತಲೆ ಬಾಗುತ್ತೇನೆ. ಜಿಲ್ಲೆಯಲ್ಲಿ ಈ ರೀತಿಯ ಯಾವುದೇ ಪುರಭವನ ನಿರ್ಮಾಣವಾಗಿಲ್ಲ. ಶ್ರೀನಿವಾಸಪುರ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಕಚೇರಿ ನಿರ್ಮಾಣ ಮಾಡಲಾಗಿದೆ ಎಂದರು.

    ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಅಯಿಷಾ ನಯಾಜ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್ಪಿ ಡೆಕ್ಕಾ ಕಿಶೋರ್‌ಬಾಬು, ಹಿರಿಯ ಸದಸ್ಯರಾದ ಬಿ.ವಿ. ರೆಡ್ಡಿ, ಅನೀಸ್ ಅಹಮದ್. ಮುಖ್ಯಾಧಿಕಾರಿ ಸತ್ಯನಾರಾಯಣ ಇತರರಿದ್ದರು.

    ಮೌನಕ್ಕೆ ಶರಣಾದ ಶಾಸಕ: ಸಚಿವ ಮುನಿರತ್ನ ಶಾಸಕ ರಮೇಶ್ ಕುಮಾರ್ ಅವರ ರಾಜಕೀಯ ಜೀವನ ಮತ್ತು ಜ್ಞಾನ ಭಂಡಾರದ ಬಗ್ಗೆ ಹೊಗಳಿದಾಗ ಶಾಸಕರ ಕಣ್ಣಲ್ಲಿ ನೀರು ತುಂಬಿ ಮೌನಕ್ಕೆ ಶರಣಾಗಿದ್ದರು. ಇಡೀ ಶಾಸನ ಸಭೆಯನ್ನು ನಡುಗಿಸುವವರು ಈ ದಿನ ಮೌನಕ್ಕೆ ಶರಣಾಗಿದ್ದಾರೆ ಎಂದಾಗ ಮತ್ತಷ್ಟು ಗದ್ಗರಿತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts