More

    ಕೋಟೆ ಬನಶಂಕರಮ್ಮ ರಥೋತ್ಸವ ಅದ್ದೂರಿ

    ಚಿತ್ರದುರ್ಗ: ರಥದೊಳಗೆ ಪ್ರತಿಷ್ಠಾಪಿಸಿದ್ದ ತಾಯಿ ಬನಶಂಕರಿ ದೇವಿಯ ಅಲಂಕೃತ ಮೂರ್ತಿ ಕಂಗೊಳಿಸಿತು. ಸೂರ್ಯಾಸ್ತದ ಸಮಯ ಸಮೀಪಿಸಿತು. ಇದೇ ವೇಳೆ ತೇರನ್ನು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ಮೇಲುದುರ್ಗದ ಕಾಮನಬಾಗಿಲು ಬಳಿಯ ಐತಿಹಾಸಿಕ ಕೋಟೆ ಆವರಣ ಇದಕ್ಕೆ ಸಾಕ್ಷಿಯಾಯಿತು.

    ಇಲ್ಲಿಯ ಬನಶಂಕರಿ ದೇವಿ ದೇಗುಲ ಮುಂಭಾಗ ಗುರುವಾರ ಜರುಗಿದ ದೇವಿಯ ಮಹಾರಥೋತ್ಸವಕ್ಕೆ ನಗರ ಸೇರಿ ತಾಲೂಕಿನ ಹಲವೆಡೆಗಳಿಂದ ಭಕ್ತರ ದಂಡೆ ಹರಿದು ಬಂದಿತ್ತು. ಗಂಟೆಗೂ ಮುನ್ನವೇ ಆಗಮಿಸಿದ್ದ ಅನೇಕರು ಕಾತುರದಿಂದ ಕಾದು ರಥ ಮುಂದೆ ಸಾಗುವ ಕ್ಷಣ ಕಣ್ತುಂಬಿಕೊಂಡರು.

    ರಥೋತ್ಸವಕ್ಕೂ ಮುನ್ನ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ದೇವಿಯ ಉತ್ಸವ ಮೂರ್ತಿಯನ್ನು ಉರುಮೆ, ತಮಟೆ, ನಗಾರಿ ಸೇರಿ ಮಂಗಳವಾದ್ಯದೊಂದಿಗೆ ರಥದ ಬಳಿಗೆ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ದೇವಿಗೆ ಎಡೆ ಸಮರ್ಪಿಸಿ, ರಥ ಎಳೆಯಲು ಅನುವು ಮಾಡಿಕೊಡಲಾಯಿತು. ಸಾವಿರಾರು ಮಂದಿ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಉತ್ಸವದಲ್ಲಿ ಭಕ್ತರಿಂದ ಮುಗಿಲು ಮುಟ್ಟಿದ ಹರ್ಷೋದ್ಘಾರ ಮೊಳಗಿತು.

    ಬನದ ಹುಣ್ಣಿಮೆ ದಿನದಂದೇ ಪ್ರತಿ ವರ್ಷ ಇಲ್ಲಿಯೂ ರಥೋತ್ಸವ ನೆರವೇರಿಸಲಾಗುತ್ತಿದ್ದು, ಕೋಟೆ ಆವರಣದೊಳಗೆ ನಡೆಯುವ ವೈಭವೋಪೇತ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ದೇವಿಯನ್ನು ಆರಾಧಿಸುವವರ ಸಂಖ್ಯೆ ಕೋಟೆನಾಡಿನಲ್ಲೂ ಅಧಿಕವಾಗಿದ್ದು, ತಾಯಿಯ ಕೃಪಾಶೀರ್ವಾದ ಪಡೆಯಲು ಭಕ್ತರು ಕಿಕ್ಕಿರಿದು ಸೇರಿದ್ದರು. ದರ್ಶನ ಪಡೆದು ಪಾವನರಾದರು.

    ರಥಕ್ಕೂ ವಿಶೇಷಾಲಂಕಾರ: ರಥದ ಸುತ್ತಲೂ ವಿವಿಧ ವರ್ಣದ ಬಾವುಟಗಳಿಂದ, ಹೂವಿನ ಹಾರಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿ ವಿಶೇಷ ಪೂಜೆಗಳು ಜರುಗಿದವು.

    ದೇಗುಲಕ್ಕೂ ಭೇಟಿ ನೀಡಿದ ಅನೇಕ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿ, ದೇವಿಯ ಮೂರ್ತಿಯನ್ನು ಕಣ್ತುಂಬಿಕೊಂಡರು. ಅಲ್ಲದೆ, ಹೊಂಡದ ಬಾಗಿಲು ಬಳಿ ಇರುವ ಬನಶಂಕರಿ ದೇಗುಲದಲ್ಲಿಯೂ ವಿಶೇಷ ಪೂಜೆ ನೆರವೇರಿದವು.

    ಇನ್ನೂ ರಥೋತ್ಸವದ ಅಂಗವಾಗಿ ಬುರುಜನಹಟ್ಟಿಯ ಬನಶಂಕರಿ ದೇವಿಗೆ ವಿಶೇಷ ಅಲಂಕಾರ ಸೇವೆ ನೆರವೇರಿತು. ಅಲ್ಲದೆ, ಇಲ್ಲಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಸುಸಜ್ಜಿತ ಉಚ್ಚಾಯದಲ್ಲಿ ಕೂರಿಸಿ, ಕೋಟೆಗೆ ಮೆರವಣಿಗೆ ಮೂಲಕ ಭಕ್ತರು ಕರೆತಂದರು. ಉತ್ಸವದ ನಂತರ ಬುರುಜನಹಟ್ಟಿಯ ದೇವಾಂಗ ಸಮಾಜ, ಅನುಪಮ ವಿದ್ಯಾಸಂಸ್ಥೆಯಿಂದ ನೆರೆದಿದ್ದ ಭಕ್ತಗಣಕ್ಕೆ ಪ್ರಸಾದ ವಿತರಿಸಲಾಯಿತು.

    ಬುಧವಾರ ದೇವಿಗೆ ಕಂಕಣಧಾರಣೆ, ರಥಕ್ಕೆ ತೈಲಾಭಿಷೇಕ ಸೇವೆ ನೆರವೇರಿತ್ತು. ಜ. 27ರಂದು ಕಂಕಣ ವಿಸರ್ಜನೆಯೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts