More

    ಕೋಟೆನಾಡಿನ ದೇಗುಲಗಳಲ್ಲಿ ಸಂಭ್ರಮದ ಸಂಕ್ರಾಂತಿ

    ಚಿತ್ರದುರ್ಗ: ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಹಬ್ಬವಾದ ಸಂಕ್ರಾಂತಿ ಸಂಭ್ರಮವನ್ನು ನಗರ ಪ್ರದೇಶದ ಜನರು ಮನೆಗಳಿಗಿಂತಲೂ ದೇಗುಲಗಳಲ್ಲಿ ವಿಶೇಷ ಪೂಜೆಯೊಂದಿಗೆ ಸೋಮವಾರ ಆಚರಿಸಿದ್ದು, ಹಲವೆಡೆ ಕಂಡು ಬಂದಿತು.

    ಐತಿಹಾಸಿಕ ಕೋಟೆಯೊಳಗಿನ ದೇವರ ದರ್ಶನಕ್ಕಾಗಿ ಮುಂಜಾನೆಯಿಂದಲೇ ಭಕ್ತಸಾಗರವೇ ಹರಿದು ಬಂತು. ನಗರ ವ್ಯಾಪ್ತಿಯ ಪ್ರಸಿದ್ಧ ದೇಗುಲಗಳು ಇದಕ್ಕೆ ಹೊರತಾಗಿರಲಿಲ್ಲ. ಕಣ್ಣಾಯಿಸಿದ ಕಡೆಯಲೆಲ್ಲಾ ಜನವೋ ಜನ. ವೈವಿಧ್ಯಮಯವಾಗಿ ಸಿಂಗರಿಸಿದ್ದ ವಿದ್ಯುದೀಪಾಲಂಕಾರ, ದೇವರ ಚಿತ್ರಗಳುಳ್ಳ ಸ್ವಾಗತ ಕೋರುವ ಕಮಾನುಗಳು ಸ್ತ್ರೀಯರು, ಚಿಣ್ಣರನ್ನು ಆಕರ್ಷಿಸಿದವು.

    ಕೋಟೆನಗರಿಯ ನವದುರ್ಗೆಯರಾದ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಬರಗೇರಮ್ಮ, ರಾಜಮಾತೆ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ ಸೇರಿ ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಬುಡ್ಡಮ್ಮ, ಕಾಳಿಕಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಂಭೇಶ್ವರ ಸೇರಿ ಹಲವು ದೇಗುಲಗಳಲ್ಲಿ ವಿವಿಧ ವರ್ಣದ ಪುಷ್ಪಗಳಿಂದ ದೇವರ ಮೂರ್ತಿಗಳನ್ನು ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅರ್ಚಕರು ಅಲಂಕರಿಸಿ, ಪೂಜೆ ನೆರವೇರಿಸಿದರು.

    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬರುವ ನಿರೀಕ್ಷೆ ಹಿನ್ನ್ನಲೆಯಲ್ಲಿ ವೈಭವೋಪೇತ ಅಲಂಕಾರ ಸೇವೆಗಾಗಿ ಹಲವು ದೇಗುಲಗಳಲ್ಲಿ ಭಾನುವಾರ ರಾತ್ರಿಯಿಂದಲೇ ಸಿದ್ಧತೆಗಳು ಭರದಿಂದ ಸಾಗಿದವು. ಸೋಮವಾರ ಬೆಳಗ್ಗೆ 5ರಿಂದ ರಾತ್ರಿ 10ರವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಇಷ್ಟ ದೇವತೆಗಳ ದರ್ಶನ ಪಡೆದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಪಡೆದರು. ಹಲವೆಡೆ ಅನ್ನಸಂತರ್ಪಣೆ ಕೂಡ ಆಯೋಜಿಸಲಾಗಿತ್ತು.

    ಇನ್ನೂ ಮನೆಗಳ ಮುಂಭಾಗ ವರ್ಣಮಯ ರಂಗೋಲಿಗಳ ಚಿತ್ತಾರ ಆಕರ್ಷಿಸಿದವು. ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದ್ದವು. ತಳಿರು-ತೋರಣಗಳಿಂದ ಬಾಗಿಲು, ದೇವರ ಕೋಣೆ ಅಲಂಕಾರಗೊಂಡಿದ್ದವು.

    ದೇವರಿಗೆ ಎಡೆ ಸಮರ್ಪಿಸಿದ ಬಳಿಕ ಕುಟುಂಬ ಸಮೇತ ಸಿಹಿ ಮತ್ತು ಖಾರದ ಪೊಂಗಲ್ ಸೇರಿ ತರಹೇವಾರಿ ಖಾದ್ಯಗಳನ್ನು ಸವಿದು ಸಡಗರದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts