More

    ಕೋಟಿ ಒಡೆಯನ ಶ್ರೀಕ್ಷೇತ್ರದಲ್ಲಿ ಸೌಲಭ್ಯ ಸಿಗಲಿ

    ನಂಜನಗೂಡು: ವಿಶ್ವವಿಖ್ಯಾತ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾಸಿಕ ಹುಂಡಿ ಎಣಿಕೆಯಲ್ಲಿ ಸಂಗ್ರಹವಾಗುತ್ತಿರುವ ಕಾಣಿಕೆ ಇದಕ್ಕೆ ಸಾಕ್ಷಿ. ಐದಾರು ವರ್ಷಗಳಿಂದ ಮಾಸಿಕ ಒಂದು ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದು, ಪ್ರಸಕ್ತ ತಿಂಗಳು ನಡೆದ ಎಣಿಕೆಯಲ್ಲಿ 2.4 ಕೋಟಿ ರೂ. ಸಂಗ್ರಹವಾಗಿದ್ದು, ಆದಾಯ ದ್ವಿಗುಣಗೊಂಡಿದೆ.

    ಭಕ್ತರಿಂದ ಸಂಗ್ರಹವಾಗುವ ಈ ಹಣದಲ್ಲೇ ಮೂಲಸೌಕರ್ಯ ಹಾಗೂ ಬೇಡಿಕೆಗಳನ್ನು ಸಾಕಾರಗೊಳಿಸಬೇಕೆಂಬುದು ಭಕ್ತವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
    ಬೆಳ್ಳಿರಥ ನಿರ್ಮಾಣವಾಗಬೇಕೆಂಬುದು ಮೂರು ದಶಕಗಳ ಕನಸು. ದೂರದ ಊರುಗಳಿಂದ ಬರುವ ಭಕ್ತರಿಗೆ ವಾಸ್ತವ್ಯ ಹೂಡಲು ಅತಿಥಿಗೃಹ, ಹರಕೆ ಗೋವುಗಳ ರಕ್ಷಣೆಗೆ ಗೋಶಾಲೆ…ಹೀಗೆ ಹಲವಾರು ಬೇಡಿಕೆಗಳು ಆಡಳಿತ ಮಂಡಳಿ ಮುಂದಿವೆ. ಮಾಜಿ ಸಚಿವ ದಿ.ಎಂ.ಮಹದೇವ್ ಅವರು 22 ವರ್ಷಗಳ ಹಿಂದೆ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಯಾರೂ ಭಕ್ತರ ಕೂಗಿಗೆ ಧ್ವನಿಯಾಗಲೇ ಇಲ್ಲ.

    ಈ ದೇವಾಲಯ ಪುರಾತತ್ವ ಇಲಾಖೆ ಅಧೀನದಲ್ಲಿರುವುದರಿಂದ ಎಲ್ಲ ಅಭಿವೃದ್ಧಿ ಯೋಜನೆಗಳಿಗೂ ಅಡ್ಡಗಾಲು ಹಾಕುವ ಜತೆಗೆ ಇಲಾಖೆಯಿಂದ ಅನುಮತಿ ಪಡೆದು ಅನುಷ್ಠಾನಗೊಳಿಸುವುದು ಅಷ್ಟು ಸುಲಭವಲ್ಲ. ಆ ಕಾರಣಕ್ಕಾಗಿಯೇ ಯಾರೂ ದುಸ್ಸಾಹಸಕ್ಕೆ ಕೈ ಹಾಕುತ್ತಿಲ್ಲ.

    ಎಂ.ಮಹದೇವ್ ಅವರ ನಂತರ ಭಕ್ತರ ಬೇಡಿಕೆಗಳನ್ನು ಹಂತ ಹಂತವಾಗಿ ಸಾಕಾರಗೊಳಿಸಲು ಸಾಹಸಕ್ಕೆ ಮುಂದಾದ ಶಾಸಕ ಬಿ.ಹರ್ಷವರ್ಧನ್, 2.9 ಕೋಟಿ ರೂ. ವೆಚ್ಚದಲ್ಲಿ ಬೆಳ್ಳಿರಥ ನಿರ್ಮಾಣ, 16.52 ಕೋಟಿ ರೂ. ವೆಚ್ಚದಲ್ಲಿ 75 ಕೊಠಡಿಗಳ ಅತಿಥಿಗೃಹ, 8 ಕೊಠಡಿಗಳ ಡಾರ್ಮೆಟರಿ ಹಾಗೂ 6 ವಿಐಪಿ ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ಮಂಜೂರಾತಿ ತರುವ ಮೂಲಕ ಅಭಿವೃದ್ಧಿಯ ಸ್ಪರ್ಶ ನೀಡಿದ್ದಾರೆ. ಕಳೆದ ತಿಂಗಳು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.

    30 ವರ್ಷಗಳ ಹಿಂದೆಯೇ ಬೆಳ್ಳಿರಥ ನಿರ್ಮಾಣ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಆ ಸಂದರ್ಭದಲ್ಲಿ ದಾನಿಗಳು ದೇಣಿಗೆಯನ್ನೂ ಕೊಟ್ಟಿದ್ದರು. ಅದಕ್ಕಾಗಿ ಪ್ರತ್ಯೇಕ ಹುಂಡಿಯನ್ನೂ ಇಡಲಾಗಿತ್ತು. ಆದರೆ ಅನುಷ್ಠಾನಗೊಳಿಸುವಲ್ಲಿ ಯಾರೂ ಬದ್ಧತೆ ತೋರಿರಲಿಲ್ಲ. ಇನ್ನು ಭಕ್ತರು ಹರಕೆ ಮಾಡಿ ದೇಗುಲದಲ್ಲಿ ಬಿಡುವ ಗೋವುಗಳ ರಕ್ಷಣೆಗಾಗಿ ಗೋಶಾಲೆ ತೆರೆಯಬೇಕೆಂಬುದು ಸ್ಥಳೀಯರ ಆಗ್ರಹವಾ ಗಿತ್ತು. ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಶಾಸಕ ಬಿ.ಹರ್ಷವರ್ಧನ್ ಸ್ಥಳ ಗುರುತಿಸಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿ ಆ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ವಾಹನ ಪಾರ್ಕಿಂಗ್ ಆವರಣಕ್ಕೂ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.

    ಸದ್ಯದ ಮಟ್ಟಿಗೆ ದೇವಾಲಯದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿರುವುದು ಭಕ್ತರಲ್ಲಿ ಹಾಗೂ ಸ್ಥಳೀಯರಲ್ಲಿ ಸಮಾಧಾನ ತಂದಿದೆ. ಕಪಿಲಾ ನದಿ ಸ್ನಾನಘಟ್ಟ ಸ್ವಚ್ಛತೆ, ದಾಸೋಹ ಭವನದಲ್ಲಿ ನಿಲ್ಲುವ ಭಕ್ತರಿಗೆ ಶೆಲ್ಟರ್ ವಿಸ್ತರಣೆ, ರಾತ್ರಿವೇಳೆ ದಾಸೋಹ ಭವನದಲ್ಲಿ ಪ್ರಸಾದ… ಹೀಗೆ ಇನ್ನು ಹಲವು ಬೇಡಿಕೆಗಳು ದೇವಾಲಯ ಆಡಳಿತ ಮಂಡಳಿ ಮುಂದಿವೆ. ಒಟ್ಟಾರೆ ದೇಗುಲದಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಸ್ಥಳೀಯರು, ಅಧಿಕಾರಿಗಳು ಹಾಗೂ ಭಕ್ತರ ಅಭಿಪ್ರಾಯವನ್ನು ಲೌಡ್‌ಸ್ಪೀಕರ್‌ನಲ್ಲಿ ಸಂಗ್ರಹಿಸಲಾಗಿದೆ.

    ಗೋಶಾಲೆ ಆರಂಭ ಶೀಘ್ರ
    ಶ್ರೀಕಂಠೇಶ್ವರಸ್ವಾಮಿ ದೇವಾಲಯವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಇಂಗಿತ. ಚುನಾವಣೆ ಪೂರ್ವದಲ್ಲಿ ಬೆಳ್ಳಿರಥ, ಅತಿಥಿಗೃಹ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದಾಗ ಹಲವರು ಗೇಲಿ ಮಾಡಿದ್ದೂ ಉಂಟು. ಆದರೆ ಈಗ ಬೆಳ್ಳಿರಥ ಹಾಗೂ 75 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಯೋಜನೆಗಳನ್ನು ಸಾಕಾರಗೊಳಿಸಲು ನಾನು ಶ್ರಮಿಸಿದ ಪಾಡು ನನಗೆ ಗೊತ್ತಿದೆ. ಇನ್ನು ಗೋಶಾಲೆ ತೆರೆಯಬೇಕೆಂಬುದು ಸ್ಥಳೀಯರ ಆಗ್ರಹವಾಗಿದ್ದು, ಈಗಾಗಲೇ ಜಿಲ್ಲಾಡಳಿತ 20 ಎಕರೆ ಜಾಗ ಗುರುತಿಸುವ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಸಿದ್ಧತೆ ಕೈಗೊಂಡು ಶೀಘ್ರ ಗೋಶಾಲೆ ಆರಂಭಿಸಲಾಗುವುದು. ಭಕ್ತರು ಹಾಗೂ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಿದ ತೃಪ್ತಿಯಿದೆ.
    ಬಿ.ಹರ್ಷವರ್ಧನ್, ನಂಜನಗೂಡು ಶಾಸಕ

    ಬೆಳ್ಳಿರಥ ನಿರ್ಮಾಣ ಒಳ್ಳೆಯ ಬೆಳವಣಿಗೆ
    1993ರಲ್ಲೇ ಬೆಳ್ಳಿರಥ ನಿರ್ಮಾಣಕ್ಕೆ ದೇವಾಲಯ ವತಿಯಿಂದ ಮುಂದಾದಾಗ ಹಲವರು ದೇಣಿಗೆಯನ್ನೂ ಕೊಟ್ಟು ರಸೀದಿ ಪಡೆದಿದ್ದರು. ನಾನೂ ಕೊಟ್ಟಿದ್ದೆ. ಆದರೆ ಕಾರಣಾಂತರಗಳಿಂದ ಬೆಳ್ಳಿರಥ ನಿರ್ಮಾಣವಾಗಲೇ ಇಲ್ಲ. ರಥ ನಿರ್ಮಾಣ ಆಗಬೇಕೆಂಬ ಕೂಗು 3 ದಶಕಗಳಿಂದಲೂ ಕೇಳಿಬರುತ್ತಿತ್ತು. ಶಾಸಕ ಹರ್ಷವರ್ಧನ್ ಪ್ರಯತ್ನದ ಫಲವಾಗಿ ಈಗ ಬೆಳ್ಳಿರಥ ನಿರ್ಮಾಣ ಆಗುತ್ತಿರುವುದು ಸಮಾಧಾನ ತಂದಿದೆ.
    ಕೆ.ಎನ್.ವೆಂಕಟೇಶ್, ನಂಜನಗೂಡು

    ಒಂದು ಕೆಜಿ ಬೆಳ್ಳಿ ಸಮರ್ಪಣೆ
    30 ವರ್ಷಗಳ ಹಿಂದೆ ಬೆಳ್ಳಿರಥ ನಿರ್ಮಾಣ ಆಗಬೇಕೆಂಬ ಕೂಗು ಕೇಳಿಬಂದಾಗ ನಮ್ಮ ತಂದೆ ಕೆ.ಎ.ಗೋವಿಂದರಾಜ ಶೆಟ್ಟಿ ಧರ್ಮದರ್ಶಿಯಾಗಿದ್ದರು. ಬೆಳ್ಳಿರಥ ನಿರ್ಮಾಣವಾಗುವುದಾದರೆ ನಾನು ಒಂದು ಕೆಜಿ ಬೆಳ್ಳಿ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದರು. ಈಗ ಬೆಳ್ಳಿರಥ ನಿರ್ಮಾಣವಾಗುತ್ತಿದ್ದು ಈಗ ನಮ್ಮ ತಂದೆಯಿಲ್ಲ. ಅವರ ಹರಕೆಯಂತೆ ನಾನು ದೇಗುಲಕ್ಕೆ ಒಂದು ಕೆಜಿ ಬೆಳ್ಳಿಯನ್ನು ಸಮರ್ಪಣೆ ಮಾಡಬೇಕೆಂದುಕೊಂಡಿದ್ದೇನೆ.
    ಕೆ.ಜಿ.ರಮೇಶ್(ಬಾಬು), ನಂಜನಗೂಡು

    ಗೋವುಗಳ ರಕ್ಷಣಾ ಕಾರ್ಯ ಅತ್ಯಗತ್ಯ
    ಭಕ್ತರು ಹರಕೆ ಹೊತ್ತು ದೇಗುಲಕ್ಕೆ ಬಿಡುವ ಗೋವುಗಳ ರಕ್ಷಣೆಗಾಗಿ ದೇವಾಲಯದಲ್ಲಿ ಗೋಪಾಲಕರನ್ನು ನಾಮ್‌ಕೇ ವಾಸ್ತೆಗೆ ನೇಮಕ ಮಾಡಿಕೊಂಡಿದ್ದಾರೆ. ಆದರೆ ಗೋವುಗಳ ರಕ್ಷಣೆ ಮಾತ್ರ ಆಗುತ್ತಿಲ್ಲ. ರಸ್ತೆಯಲ್ಲೇ ಬಿಡುವುದರಿಂದ ಅವುಗಳನ್ನು ಕಟುಕರು ಸಾಗಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ದೇವಾಲಯ ವತಿಯಿಂದಲೇ ಗೋಶಾಲೆ ತೆರೆಯುವಂತೆ ಯುವ ಬ್ರಿಗೇಡ್ ವತಿಯಿಂದ ಸಹಿ ಸಂಗ್ರಹ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಶಾಸಕ ಹರ್ಷವರ್ಧನ್ ಭರವಸೆ ನೀಡಿದ್ದಾರೆ.
    ಎನ್.ಜೆ.ಸುನಿಲ್, ಯುವ ಬ್ರಿಗೇಡ್ ಕಾರ್ಯಕರ್ತ

    ಕಪಿಲಾ ಸ್ನಾನಘಟ್ಟದಲ್ಲಿ ಸ್ವಚ್ಛತೆ ಕಾಪಾಡಲಿ
    ನಿತ್ಯ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವ ಕಪಿಲಾ ಸ್ನಾನಘಟ್ಟದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ನದಿಯಲ್ಲಿ ಬಟ್ಟೆ, ತ್ಯಾಜ್ಯ ಬಿಡದಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮವಹಿಸಬೇಕಿದೆ. ಯುವ ಬ್ರಿಗೇಡ್ ಕಾರ್ಯಕರ್ತರು ಕಳೆದ 8 ವರ್ಷಗಳಿಂದ ಕಪಿಲಾ ನದಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಕಾಳಜಿ, ಕಳಕಳಿಯನ್ನು ಆಡಳಿತ ಮಂಡಳಿ ಅರ್ಥ ಮಾಡಿಕೊಂಡು ನದಿ ಸ್ವಚ್ಛತೆ ಕಾಪಾಡಲು ಮುಂದಾಗಲಿ.
    ನಿತಿನ್, ಯುವ ಬ್ರಿಗೇಡ್ ತಾಲೂಕು ಸಂಚಾಲಕ

    ದಾಸೋಹ ಭವನದ ಶೆಲ್ಟರ್ ವಿಸ್ತರಣೆಯಾಗಲಿ
    ವಿಶೇಷ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಆಗಮಿಸುವುದರಿಂದ ವಿಶೇಷ ದರ್ಶನಕ್ಕೆ ತೆರಳುವ ಭಕ್ತರಿಗೆ ಶೆಲ್ಟರ್ ಹಾಗೂ ದಾಸೋಹ ಭವನದಲ್ಲಿ ಈಗಿರುವ ಶೆಲ್ಟರ್ ವಿಸ್ತರಣೆ ಮಾಡುವ ಅಗತ್ಯವಿದೆ. 75 ಅತಿಥಿಗೃಹ ನಿರ್ಮಾಣ ಆಗುತ್ತಿರುವುದರಿಂದ ವಾಸ್ತವ್ಯ ಹೂಡಲು ಭಕ್ತರಿಗೆ ಅನುಕೂಲ ಆಗಲಿದೆ. ಬೆಳ್ಳಿರಥ ನಿರ್ಮಾಣವಾಗುತ್ತಿರುವುದರಿಂದ ಬಹುಕಾಲದ ಭಕ್ತರ ಕೋರಿಕೆ ಈಡೇರಿದಂತಾಗಿದೆ.
    ಎನ್.ಟಿ.ಗಿರೀಶ್ ಮಾಜಿ ಸದಸ್ಯ, ಶ್ರೀ ಕಂಠೇಶ್ವರಸ್ವಾಮಿ ವ್ಯವಸ್ಥಾಪನಾ ಸಮಿತಿ

    ರಾತ್ರಿ ವೇಳೆ ಪ್ರಸಾದ ವ್ಯವಸ್ಥೆ ಆಗಲಿ
    ಭಕ್ತರು ಕಾಣಿಕೆ ರೂಪದಲ್ಲಿ ನೀಡುವ ಬೆಳ್ಳಿ ಪದಾರ್ಥವನ್ನು ಬ್ಯಾಂಕ್‌ನಲ್ಲಿ ಇಡುವ ಬದಲಾಗಿ ಗರ್ಭಗುಡಿಯಲ್ಲಿ ಬೆಳ್ಳಿ ಹೊದಿಕೆ ಮಾಡಿಸಿ ಸದ್ಬಳಕೆ ಮಾಡಿಕೊಳ್ಳುವುದು ಒಳಿತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿ. ರಾತ್ರಿ ವೇಳೆ ವಾಸ್ತವ್ಯ ಹೂಡುವ ಭಕ್ತರಿಗಾಗಿ ದಾಸೋಹದಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಬೇಕು.
    ಶಶಿರೇಖಾ ಮಾಜಿ ಸದಸ್ಯ, ಜಿಲ್ಲಾ ಪಂಚಾಯಿತಿ

    ಕುಡಿಯುವ ನೀರಿನ ಪೂರೈಕೆ ಮಾಡಲಿ
    ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಸಾಮಾನ್ಯ ಸರತಿಯಲ್ಲಿ ನಿಲ್ಲುವ ಭಕ್ತರಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಬೇಕು. ಕಪಿಲಾ ಸ್ನಾನಘಟ್ಟ ಸೇರಿದಂತೆ ದೇಗುಲ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಾಹನ ನಿಲುಗಡೆ ನಿಗದಿತ ಸ್ಥಳದಲ್ಲಿ ಮಾಡಿದರೆ ಅನುಕೂಲವಾಗುತ್ತದೆ. ಬಿಸಿಲಿನಲ್ಲಿ ಬರಿಗಾಲಿನಲ್ಲಿ ಓಡಾಡುವ ಭಕ್ತರಿಗೆ ಅನುಕೂಲವಾಗಲು ಬಿಳಿಪಟ್ಟೆಗಳನ್ನು ಹಾಕಬೇಕು.
    ಲತಾ ಮುದ್ದುಮೋಹನ್, ಕಸಾಪ ತಾಲೂಕು ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts