More

    ಕೋವಿಡ್ ಲ್ಯಾಬ್ ನಿರ್ಮಾಣ ಅನುಮಾನ

    ರಾಣೆಬೆನ್ನೂರ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಿುಸಲು ಉದ್ದೇಶಿಸಿದ್ದ ಕೋವಿಡ್-19 ಪ್ರಯೋಗಾಲಯ ಹಾಗೂ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

    ಜಿಲ್ಲೆಯಲ್ಲಿ ಕರೊನಾ ರೋಗಿಗಳ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಹಾಗೂ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕಳೆದ ಜುಲೈ 8ರಂದು ಅಂದಿನ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹಾಗೂ ಶಾಸಕ ಅರುಣಕುಮಾರ ಪೂಜಾರ ಭೂಮಿಪೂಜೆ ನೆರವೇರಿಸಿದ್ದರು.

    ಕಾಮಗಾರಿಯನ್ನು ನಿರ್ವಿುತಿ ಕೇಂದ್ರದವರಿಗೆ ವಹಿಸಿಕೊಡಲಾಗಿತ್ತು. ಆದರೆ, ಭೂಮಿ ಪೂಜೆ ನೆರವೇರಿಸಿ ಮೂರು ತಿಂಗಳು ಕಳೆಯುತ್ತ ಬಂದರೂ ಕಾಮಗಾರಿ ನಡೆಯುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ.

    ಅನುದಾನ ಬಂದಿಲ್ಲ: ಅಂದು ಭೂಮಿ ಪೂಜೆ ನೆರವೇರಿಸಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಾಲೂಕಿನಲ್ಲಿ 150 ಬೆಡ್​ನ ಕೋವಿಡ್-19 ಆಸ್ಪತ್ರೆ ಹಾಗೂ ಪ್ರಯೋಗಾಲಯ ನಿರ್ವಿುಸುವ ಅವಶ್ಯವಿದೆ. ಆದ್ದರಿಂದ ತುರ್ತಾಗಿ 1 ಕೋಟಿ ರೂ. ಬಿಡುಗಡೆ ಮಾಡಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಕಾಮಗಾರಿ ನಡೆಸಲು ನಯಾಪೈಸೆ ಸಹ ಜಿಲ್ಲಾಡಳಿತ ನೀಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ನಿರ್ವಿುತಿ ಕೇಂದ್ರದ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

    ರಾಜಕೀಯ ಒತ್ತಡ: ಭೂಮಿ ಪೂಜೆ ನೆರವೇರಿಸಿದ ಮರುದಿನವೇ ಆಸ್ಪತ್ರೆಯ ಸುತ್ತಲಿನ ನಿವಾಸಿಗಳು ಹಾಗೂ ನಗರಸಭೆ ಸದಸ್ಯರು, ‘ಇಲ್ಲಿ ಕೋವಿಡ್-19 ಆಸ್ಪತ್ರೆ, ಪ್ರಯೋಗಾಲಯ ನಿರ್ವಿುಸಬಾರದು’ ಎಂದು ಪಟ್ಟುಹಿಡಿದು ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಿದ್ದರು. ಅಲ್ಲದೆ, ರಾಜಕೀಯ ಒತ್ತಡ ಸಹ ಹಾಕಿಸಿದ್ದರು. ಇದಾದ ಬಳಿಕ ಕಾಮಗಾರಿ ನಡೆಯದ ಕಾರಣ ಪ್ರಯೋಗಾಲಯ ನಿರ್ಮಾಣ ಡೌಟು ಎನ್ನುವ ಮಾತುಗಳು ಕೇಳಿಬರತೊಡಗಿವೆ.

    ಆಸ್ಪತ್ರೆಗಿಂತ ಮನೆ ವಾಸಿ: ತಾಲೂಕಿನಲ್ಲಿ ಜುಲೈ ತಿಂಗಳಿನಲ್ಲಿ ಪ್ರತಿದಿನ ಸರಾಸರಿ 10-15 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ, ಸೆಪ್ಟೆಂಬರ್​ನಲ್ಲಿ 35ರಿಂದ-40ಕ್ಕೆ ಬಂದು ತಲುಪಿದೆ. ನಗರಸಭೆ ಕಟ್ಟಡದಲ್ಲಿ ನಡೆಯುತ್ತಿರುವ ಕೋವಿಡ್-19 ಪರೀಕ್ಷೆ ಕೇಂದ್ರದಲ್ಲೂ ನಿತ್ಯವೂ 8ರಿಂದ 10 ಪ್ರಕರಣ ಪಾಸಿಟಿವ್ ಬರುತ್ತಿವೆ. ಆದರೆ, 150 ಬೆಡ್ ಇರಬೇಕಾದ ತಾಲೂಕಿನಲ್ಲಿ ಸದ್ಯ ತಾಲೂಕು ಆಸ್ಪತ್ರೆಯಲ್ಲಿ 30 ಹಾಗೂ ಹಲಗೇರಿ ರಸ್ತೆಯ ಸರ್ಕಾರಿ ಹಾಸ್ಟೆಲ್​ನಲ್ಲಿ 75 ಸೇರಿ 105 ಬೆಡ್​ಗಳಿವೆ. ಹೀಗಾಗಿ ಕರೊನಾ ಸೋಂಕಿತ ರೋಗಿಗಳು ‘ಬೆಡ್ ಇಲ್ಲ, ಚಿಕಿತ್ಸೆ ಕೂಡ ಸರಿಯಾಗಿ ದೊರೆಯುತ್ತಿಲ್ಲ’ ಎನ್ನುವ ನಾನಾ ಕಾರಣಕ್ಕೆ ಬೇಸತ್ತು ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಅಧಿಕವಾಗತೊಡಗಿದೆ.

    ಕರೊನಾ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದ್ದ ಸಮಯದಲ್ಲಿ ಜನರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಹಾಗೂ ಶಾಸಕರು ಕೋವಿಡ್ ಆಸ್ಪತ್ರೆ ಹಾಗೂ ಪ್ರಯೋಗಾಲಯ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಸದ್ಯ ಕಟ್ಟಡದ ಅವಶ್ಯವಿದೆ. ಈಗ ಮಾಡದೇ ಮುಂದಿನ ದಿನದಲ್ಲಿ ಮಾಡಿದರೆ, ಯಾರಿಗೆ ಅನುಕೂಲವಾಗಲಿದೆ ಎಂಬುದನ್ನು ಯೋಚಿಸಬೇಕಿದೆ.
    | ಹನುಮಂತಪ್ಪ ಕೆ., ಸ್ಥಳೀಯ ನಿವಾಸಿ

    ರೋಗಿಗಳ ಹಿತದೃಷ್ಟಿಯಿಂದ ಕೋವಿಡ್-19 ಆಸ್ಪತ್ರೆ ಹಾಗೂ ಸದ್ಯ ಕೋವಿಡ್ ಪರೀಕ್ಷೆ ನಂತರದ ದಿನದಲ್ಲಿ ಎಚ್​ಐವಿ ಸೇರಿ ಇತರ ರೋಗಗಳ ಪತ್ತೆಗಾಗಿ ಅನುಕೂಲವಾಗಲಿ ಎಂಬ ದೃಷ್ಟಿಕೋನದಿಂದ ಕಟ್ಟಡ ನಿರ್ವಣಕ್ಕೆ ಅಂದಿನ ಜಿಲ್ಲಾಧಿಕಾರಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ಸ್ವಲ್ಪ ತಡವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗುವುದು.
    | ಅರುಣಕುಮಾರ ಪೂಜಾರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts