More

    ಕೋವಿಡ್ ಭೀತಿಯಲ್ಲೂ ಜೀವ ಉಳಿಸಿದ ದಾನಿಗಳು

    ಕಾರವಾರ: ಆಗಾಗ ನಡೆಯುತ್ತಿದ್ದ ರಕ್ತದಾನ ಶಿಬಿರಗಳು ಕರೊನಾ ಲಾಕ್​ಡೌನ್​ನಿಂದಾಗಿ ಬಂದಾದವು. ಇದರಿಂದ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದ ತೀವ್ರ ಕೊರತೆ ಉಂಟಾಗಿತ್ತು. ಆಸ್ಪತ್ರೆಗಳಿಗೆ ಹೋಗಲು ಜನ ಭಯಪಡುತ್ತಿದ್ದರು. ಇಂಥ ಸಂದರ್ಭದಲ್ಲಿ ತಾಲೂಕಿನ ವಿವಿಧ ಯುವ ರಕ್ತದಾನಗಳ ಗುಂಪಿನ ಸದಸ್ಯರು ನೆರವಾಗಿ ಹಲವು ಜೀವಗಳನ್ನು ಉಳಿಸಿದ್ದಾರೆ.

    ಕಾರವಾರದಲ್ಲಿ ಪ್ರಮುಖವಾಗಿ ಶೇರ್ ಬ್ಲಡ್ ಸೇವ್ ಲೈಫ್, ಬ್ಲಡ್ ಡೋನರ್ಸ್ ಕಾರವಾರ, ಪ್ರದೀಪ ಯುತ್ ಬ್ಲಡ್ ಗ್ರೂಪ್ ಎಂಬ ಮೂರು ಪ್ರತ್ಯೇಕ ಗುಂಪುಗಳ ಸದಸ್ಯರು ಕೋವಿಡ್ ಸಮಯದಲ್ಲಿ 200ಕ್ಕೂ ಅಧಿಕ ಯುನಿಟ್ ರಕ್ತ ದಾನ ಮಾಡಿದ್ದಾರೆ.

    ಯಾವುದೇ ಅಪೇಕ್ಷೆ ಇಲ್ಲದೆ ಯುವಕರು ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿದ್ದಾರೆ. ಪುಣ್ಯದ ಕಾರ್ಯದಲ್ಲಿ ಗುಂಪಿನ ನಡುವೆ ಪೈಪೋಟಿ ಇರುವುದು ಸಕಾರಾತ್ಮಕ ಬೆಳವಣಿಗೆ.

    ಕಾಲೇಜ್ ಯುವಕರು, ಸರ್ಕಾರಿ, ಖಾಸಗಿ ಉದ್ಯೋಗಿಗಳು ಸೇರಿ ವಾಟ್ಸ್ ಆಪ್, ಫೇಸ್ ಬುಕ್ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ರಕ್ತ ಬೇಕಾದಾಗ ತಮ್ಮ ಗುಂಪುಗಳ ಮೂಲಕ ಸಂದೇಶ ಹರಿಬಿಟ್ಟು ಜೀವ ಉಳಿಸುವ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ಎಷ್ಟೋ ಬಾರಿ ನಡು ರಾತ್ರಿಯೂ ಆಸ್ಪತ್ರೆಗಳಿಗೆ ತೆರಳಿ ರಕ್ತದಾನ ಮಾಡಿದ ಉದಾಹರಣೆಗಳಿವೆ. ಇವರ ಹೊರತಾಗಿಯೂ ಪೊಲೀಸರು, ನೌಕಾನೆಲೆ ನೌಕರರು… ಹೀಗೆ ಹಲವು ಸಂಘಟನೆಗಳು ನಿರಂತರವಾಗಿ ರಕ್ತದಾನ ಮಾಡುತ್ತ ಎಲೆ ಮರೆಯ ಕಾಯಿಯಂತೆ ಇದ್ದಾರೆ.

    ಇಂದು ಕಾರ್ಯಕ್ರಮ: ಅ. 1ರಂದು ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಡಿಎಚ್​ಒ ಕಚೇರಿಯಿಂದ ಬೆಳಗ್ಗೆ 10 ಗಂಟೆಗೆ ಆನ್​ಲೈನ್ ಮೂಲಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅ. 2ರಂದು ಕ್ರಿಮ್್ಸ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಕಾರ್ಯಕ್ರಮವನ್ನು ಆಜಾದ್ ಯುತ್ ಕ್ಲಬ್​ನಿಂದ ಆಯೋಜಿಸಲಾಗಿದೆ.

    54 ಬಾರಿ ರಕ್ತದಾನ ಮಾಡಿದ ಶಾನಭಾಗ
    ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ಶಿವಾನಂದ ಶಾನಭಾಗ ಇದುವರೆಗೆ 54 ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಅಪರೂಪದ ‘ಎ’ ನೆಗೆಟಿವ್ ಗ್ರೂಪ್​ನ ರಕ್ತವನ್ನು ಹೊಂದಿರುವ ಅವರು ಎಲೆಮರೆಯ ಕಾಯಿಯಂತೆ ತಮ್ಮ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ‘ಒಮ್ಮೆ ರಕ್ತ ಸಿಗದೇ ಗರ್ಭಿಣಿಯೊಬ್ಬಳು ಮೃತಪಟ್ಟಿದ್ದಳು. ನನಗೆ ರಕ್ತ ಎಂದರೆ ಭಯವಿತ್ತು. ಆದರೆ, ನನ್ನ ಕಾರ್ಯದಿಂದ ಒಂದು ಜೀವ ಉಳಿಯುತ್ತದೆ ಎಂದಾದರೆ ನಾನೇಕೆ ಈ ಕಾರ್ಯ ಮಾಡಬಾರದು ಎಂದು 31 ವರ್ಷಗಳ ಹಿಂದೆ ಅಕ್ಟೋಬರ್ 2ರಂದು ರಕ್ತದಾನ ಮಾಡಿದ್ದೆ. ಭಯದಿಂದ ಕಣ್ಮುಚ್ಚಿ ಕುಳಿತು ರಕ್ತ ತೆಗೆಸಿಕೊಳ್ಳುತ್ತಿದ್ದೆ’ ಎಂದು ಅವರು ತಮ್ಮ ಪ್ರಥಮ ರಕ್ತದಾನದ ಸನ್ನಿವೇಶವನ್ನು ನೆನೆಸಿಕೊಳ್ಳುತ್ತಾರೆ.ಇನ್ನೊಮ್ಮೆ ನಡು ರಾತ್ರಿ ಮನೆಯಲ್ಲಿ ಯಾರಿಗೂ ಹೇಳದೇ ಹೋಗಿ ಸಾವಿನ ಕೊನೆಯ ಹಂತದಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬಳಿಗೆ ರಕ್ತ ನೀಡಿದ್ದೆ. ಆಕೆಯ ಜೀವ ಉಳಿಯಿತು. ಪತಿ ನನ್ನನ್ನು ಕಂಡಾಗಲೆಲ್ಲ ನಿಮ್ಮಿಂದ ನನ್ನ ಪತ್ನಿ ಜೀವ ಉಳಿಯಿತು ಎಂದು ಇಂದಿಗೂ ನೆನೆಸಿಕೊಳ್ಳುತ್ತಾರೆ. ಇಂಥ ಸನ್ನಿವೇಶಗಳು ನನಗೆ ಸಾರ್ಥಕತೆಯ ಭಾವ ಮೂಡಿಸುತ್ತವೆ. 60 ವರ್ಷಗಳ ನಂತರ ರಕ್ತ ತೆಗೆಯಲು ಅವಕಾಶವಿಲ್ಲ. ಆದರೆ, ‘ಎ’ ನೆಗೆಟಿವ್ ಬ್ಲಡ್ ಗ್ರೂಪ್ ಹೊಂದಿದ ಹಲವರ ಸಂಪರ್ಕದಲ್ಲಿದ್ದೇನೆ. ಯಾರಾದರೂ ತುರ್ತು ಕರೆ ಮಾಡಿದರೆ, ಅವರನ್ನು ಸಂರ್ಪಸಿ ರಕ್ತದ ವ್ಯವಸ್ಥೆ ಮಾಡಿಕೊಡುತ್ತೇನೆ’ ಎನ್ನುತ್ತಾರೆ ಶಾನಭಾಗ.

    ನನಗೆ ಜನರ ಸೇವೆ ಮಾಡಬೇಕೆಂಬ ಆಸೆಯಿದೆ. ನಾನು ಹಣವಂತನಲ್ಲ. ತೊಂದರೆಯಲ್ಲಿದ್ದವರಿಗೆ ರಕ್ತ ನೀಡಿದರೆ ಎಷ್ಟೋ ಸಮಾಧಾನ ಸಿಗುತ್ತದೆ. ನಾನೂ ಹಲವು ಬಾರಿ ರಕ್ತದಾನ ಮಾಡಿದ್ದೇನೆ. 2019 ರಿಂದ ಪ್ರದೀಪ ಯುತ್ ಬ್ಲಡ್ ಗ್ರೂಪ್ ಹೆಸರಿನಲ್ಲಿ ಸ್ನೇಹಿತರ ಗುಂಪು ಆರಂಭಿಸಿದ್ದೇವೆ. 300ಕ್ಕೂ ಅಧಿಕ ಸದಸ್ಯರಿದ್ದಾರೆ. ಅವರು ನನ್ನ ಮನವಿಗೆ ಸ್ಪಂದಿಸಿ ಹಲವು ಬಾರಿ ರಕ್ತದಾನ ಮಾಡುತ್ತಿದ್ದಾರೆ.
    ನೂತನ ಜೈನ್, ಪತ್ರಿಕಾ ಏಜೆಂಟ್ ಹಾಗೂ ಪ್ರದೀಪ ಯುತ್ ಬ್ಲಡ್ ಗ್ರೂಪ್ ಅಡ್ಮಿನ್

    2013 ರಿಂದ ನಾನು ರಕ್ತದಾನ ಆರಂಭಿಸಿದೆ. 2016 ರಲ್ಲಿ ಶೇರ್ ಬ್ಲಡ್ ಸೇವ್ ಲೈಫ್ ಎಂಬ ವ್ಯಾಟ್ಸ್ ಆಪ್ ಹಾಗೂ ಫೇಸ್ ಬುಕ್ ಗುಂಪು ಮಾಡಿಕೊಂಡಿದ್ದೇವೆ. 550ಕ್ಕೂ ಅಧಿಕ ಸದಸ್ಯರಿದ್ದಾರೆ. ಗುಂಪಿನ ಸದಸ್ಯರು ಮಂಗಳೂರಿಗೂ ಹೋಗಿ ರಕ್ತದಾನ ಮಾಡಿದ ಉದಾಹರಣೆ ಇದೆ. ಶಿರಸಿ ಹಳಿಯಾಳದಲ್ಲೂ ನಮ್ಮ ಪ್ರತ್ಯೇಕ ಗುಂಪುಗಳಿವೆ. ಆದರೆ, ಜಿಲ್ಲೆಯ ಕುಮಟಾ, ಶಿರಸಿ ಕಾರವಾರ ಬಿಟ್ಟರೆ ಬೇರೆಡೆ ಬ್ಲಡ್ ಬ್ಯಾಂಕ್ ಇಲ್ಲ. ಎಲ್ಲ ತಾಲೂಕಿನಲ್ಲಿ ಬ್ಲಡ್ ಬ್ಯಾಂಕ್ ತೆರೆಯಬೇಕು ಎಂಬುದು ನಮ್ಮ ಆಗ್ರಹ.
    ಶುಭಂ ಕಳಸ ಯುವ ಮುಖಂಡ, ಶೇರ್ ಬ್ಲಡ್ ಸೇವ್ ಲೈಫ್ ಗ್ರೂಪ್ ಅಡ್ಮಿನ್

    ಅಂತಾರಾಷ್ಟ್ರೀಯ ರಕ್ತದಾನಿಗಳ ದಿನವಾದ ಜೂನ್ 14 ನನ್ನ ಹುಟ್ಟು ಹಬ್ಬ. ಅಂದು ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು 2016ರಲ್ಲಿ ರಕ್ತದಾನ ಮಾಡಿದೆ. ಆಗಿನಿಂದಲೇ ಐದು ವ್ಯಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡೆ. 800ಕ್ಕೂ ಅಧಿಕ ಸದಸ್ಯರಿದ್ದಾರೆ. ಕಾರವಾರ ಅಂಕೋಲಾದಲ್ಲಿ ಯಾರಿಗೇ ರಕ್ತದ ಅವಶ್ಯಕತೆ ಇದ್ದರೂ ನೆರವಾಗುತ್ತಿದ್ದೇವೆ.
    ವಿನಾಯಕ ನಾಯ್ಕ ಬ್ಲಡ್ ಡೋನರ್ಸ್ ಕಾರವಾರ ಗ್ರೂಪ್ ಅಡ್ಮಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts