More

    ಕೋವಿಡ್ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಿಸಿ

    ಹಾವೇರಿ: ಕರೊನಾ ನಿರ್ವಹಣೆಗೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದೆ. ಸಮರ್ಪಕ ನಿರ್ವಹಣೆಗೆ ಪ್ರತಿ ತಾಲೂಕಿಗೆ ಒಬ್ಬ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸುವಂತೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

    ಜಿಪಂ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ತ್ರೖೆಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ, ಸಕಾಲದಲ್ಲಿ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ನ್ಯೂನತೆಗಳ ಕುರಿತು ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಲೋಪವನ್ನು ತಕ್ಷಣವೇ ಪರಿಹರಿಸಬೇಕು. ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಹೊಣೆಗಾರಿಕೆ ನೀಡಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಜವಾಬ್ದಾರಿಯುತ ವೈದ್ಯರಿಗೆ ಮೇಲುಸ್ತುವಾರಿ ನೀಡಿ ಕೋವಿಡ್ ವಿಷಯಗಳನ್ನು ವ್ಯವಸ್ಥಿತ ನಿರ್ವಹಣೆ ಮಾಡಿಸಿ ಎಂದರು.

    ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ ಮಾತನಾಡಿ, ಕೋವಿಡ್ ನಿರ್ವಹಣೆಗೆ ಕೋಟ್ಯಂತರ ರೂ. ಹಣ ಬಿಡುಗಡೆಯಾಗಿದೆ. ಆದರೂ ಸ್ವಚ್ಛತೆ, ಸಕಾಲದಲ್ಲಿ ಆಂಬುಲೆನ್ಸ್ ನಿರ್ವಹಣೆ, ಕ್ವಾರಂಟೈನ್ ಮತ್ತು ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸೌಲಭ್ಯಗಳ ನಿರ್ವಹಣೆಯಲ್ಲಿ ಲೋಪವಿದೆ ಎಂದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಾತನಾಡಿ, ಕರೊನಾ ನಿರ್ವಹಣೆಗೆ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ವಹಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಅತ್ಯಂತ ಸಮಸ್ಯೆಯಿರುವ ಸೋಂಕಿತರ ಮಾಹಿತಿ ನನ್ನ ಗಮನಕ್ಕೆ ತರಬೇಕು. ಅಕ್ಕಪಕ್ಕದ ಜಿಲ್ಲೆಗಳ ವೈದ್ಯಕೀಯ ಕಾಲೇಜ್ ಆಸ್ಪತ್ರೆಗಳಿಗೆ ಸಂರ್ಪಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಡಿಎಚ್​ಒಗೆ ಸೂಚಿಸಿದರು.

    ಮೆಕ್ಕೆಜೋಳ ಬೆಳೆ ಹೊಡೆ ಬರುತ್ತಿವೆ. ಮಳೆಯೂ ಹೆಚ್ಚಾಗುತ್ತಿರುವ ಕಾರಣ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಯೂರಿಯಾ ಗೊಬ್ಬರದ ಕೊರತೆ ಕಾಡುತ್ತಿದೆ. ಗಂಭೀರವಾಗಿ ಸಮಸ್ಯೆಯನ್ನು ಪರಿಗಣಿಸಿ ತಕ್ಷಣವೇ ಅಗತ್ಯವಿರುವ ಯೂರಿಯಾ ಗೊಬ್ಬರ ಪೂರೈಕೆಗೆ ಕೃಷಿ ಸಚಿವರೊಂದಿಗೆ ರ್ಚಚಿಸಿ ಅಗತ್ಯ ದಾಸ್ತಾನು ತರಿಸಿಕೊಳ್ಳಿ. ಆದ್ಯತೆ ಮೇರೆಗೆ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಲು ಕೃಷಿ ಜಂಟಿ ನಿರ್ದೇಶಕರಿಗೆ ಸಂಸದ ಉದಾಸಿ ಸೂಚಿಸಿದರು.

    ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ರಹಿತ ನಗರವಾಸಿಗಳಿಗೆ ನಿವೇಶನಕ್ಕೆ ಜಮೀನು ಗುರುತಿಸುವುದು, ಹಂತ ಹಂತವಾಗಿ ವಸತಿ ಸೌಕರ್ಯ ಕಲ್ಪಿಸಬೇಕು. ಗ್ರಾಮೀಣ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳಾಗಿ ಪರಿವರ್ತಿಸಿ. ನರೇಗಾದಲ್ಲಿ ನೂರು ದಿನ ಪೂರೈಸಿದ ಕುಟುಂಬಗಳಿಗೆ 150 ದಿನಗಳ ಕೆಲಸಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ವರದಾಸಿರಿ ಯೋಜನೆಯಡಿ ವರದಾನದಿಯ ಹೊಳೆ ದಂಡೆಯ 500 ಮೀಟರ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪ್ಲಾಂಟೇಷನ್ ಕಾರ್ಯದಲ್ಲಿ ರೈತರಿಗೆ ಅನುಕೂಲಕರವಾದ ಸಸಿಗಳನ್ನು ಬೆಳೆಸಿ. ಅರಣ್ಯ ಇಲಾಖೆ ಮೂಲಕ ರಕ್ತಚಂದನ, ಶ್ರೀಗಂಧದಂತಹ ಸಸಿಗಳನ್ನು ಬೆಳೆಸಿ ರೈತರಿಗೆ ಪೂರೈಸಬೇಕು ಎಂದು ಸಂಸದ ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

    ಸಿಇಒ ರಮೇಶ ದೇಸಾಯಿ, ಜಲಜೀವನ, ಪ್ರಧಾನಮಂತ್ರಿ ಕೌಶಲ, ಸ್ವಚ್ಛಭಾರತ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ವಿವಿಧ ಯೋಜನೆಗಳ ಪ್ರಗತಿ ಮಾಹಿತಿ ನೀಡಿದರು.

    ಜಿಲ್ಲಾ ವಿದ್ಯುತ್ ಲೋಡ್ ಮ್ಯಾಪ್: ವಿದ್ಯುತ್ ಸರಬರಾಜಿನಲ್ಲಿ ಲೋಡ್ ವ್ಯತ್ಯಯ ಕುರಿತಂತೆ ಮ್ಯಾಪಿಂಗ್ ಮಾಡಿ ಜಿಲ್ಲಾ ವಿದ್ಯುತ್ ಲೋಡಿಂಗ್ ನಕ್ಷೆ ತಯಾರಿಸಿ ವರದಿ ಸಲ್ಲಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯವಾದ ಹೊಸ ಸ್ಟೇಷನ್​ಗಳ ಅಗತ್ಯತೆ ಕುರಿತು ಬೇಡಿಕೆಯ ವರದಿ ಸಲ್ಲಿಸುವಂತೆ ಹೆಸ್ಕಾಂ ಇಂಜಿನಿಯರ್​ಗೆ ಸಂಸದ ಉದಾಸಿ ಸೂಚಿಸಿದರು.

    ವಿಧವಾ ವೇತನ ಸಮಸ್ಯೆ ಬಗೆಹರಿಸಿ

    ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಸೇರಿ ಸಾಮಾಜಿಕ ಭದ್ರತೆ ಯೋಜನೆಯಡಿ ಕಳೆದ ಐದಾರು ತಿಂಗಳಿನಿಂದ ಕೆಲ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ. ಈ ಕುರಿತು ತಾಲೂಕಾವಾರು ಪರಿಶೀಲನೆ ನಡೆಸಿ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ವಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಸೀಲ್ದಾರ್​ಗಳಿಗೆ ಸಂಸದ ಉದಾಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts