More

    ಕೋಳಿಕೆರೆ, ನವಲೂರಲ್ಲಿ ಜನಸಂಚಾರ ಬಂದ್

    ಧಾರವಾಡ: ನಗರದ ಹೊಸಯಲ್ಲಾಪುರದ ನವಲೂರ ಅಗಸಿ (ಕೋಳಿಕೆರೆ) ಹಾಗೂ ನವಲೂರ ಗ್ರಾಮದಲ್ಲಿ 2 ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಪ್ರದೇಶಗಳು ಶನಿವಾರ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಎರಡೂ ಕಡೆಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟ ವಿಷಯ ತಿಳಿದು ಜನ ಮುಂಜಾಗ್ರತೆ ಕ್ರಮವಾಗಿ ಹೊರಗಡೆ ಬರಲು ಹಿಂದೇಟು ಹಾಕಿದರು. ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಹಾಗೂ ಪಾಲಿಕೆಯಿಂದ ಎರಡೂ ಪ್ರದೇಶಗಳನ್ನು ಸಂರ್ಪಸುವ ಪ್ರಮುಖ ರಸ್ತೆಗಳಿಗೆ ನಾಕಾಬಂದಿ ಮಾಡಲಾಗಿದೆ. ಜಿಲ್ಲಾಡಳಿತದಿಂದ ಕಂಟೇನ್ಮೆಂಟ್ ಘೊಷಿಸಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪಾಲಿಕೆಯಿಂದ ಅಲ್ಲಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದೆ.

    ನೆರೆ ರಾಜ್ಯಗಳಿಂದ ಬಂದವರ ಮಾಹಿತಿ ನೀಡಿ: ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯ ಸಮಯದಲ್ಲಿ ಅಂತಾರಾಜ್ಯ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ಹೆಚ್ಚು ಕರೊನಾ ಪ್ರಕರಣಗಳಿರುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಿಂದ ಬರುವ ಜನರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಉಳಿದ ರಾಜ್ಯಗಳಿಂದ ಬರುವ ಜನರನ್ನು ಅವರ ಆರೋಗ್ಯ ಆಧರಿಸಿ ನಿರ್ಧರಿಸಲಾಗುವುದು. ಹೊರ ರಾಜ್ಯಗಳಿಂದ ಬರುವ ಜನರು ಕಡ್ಡಾಯವಾಗಿ ಕೃಷಿ ವಿಶ್ವವಿದ್ಯಾಲಯ ಆವರಣಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿ, ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯ ಜನರು ತಮ್ಮ ನೆರೆಹೊರೆ ಪ್ರದೇಶಗಳು, ಮನೆಗಳಿಗೆ ಯಾರಾದರೂ ನೆರೆ ರಾಜ್ಯಗಳಿಂದ ಆಗಮಿಸಿ ಕ್ವಾರಂಟೈನ್​ಗೆ ಒಳಪಡದಿದ್ದರೆ ಅಂಥವರ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ 1077ಗೆ ಕರೆ ಮಾಡಬೇಕು. ಅಥವಾ ಮೊ: 9449847646, 9449847641ಗೆ ವಾಟ್ಸ್​ಆಪ್ ಮೂಲಕ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

    ನಾಲ್ವರು ಶುಶ್ರೂಷಕರಿಗೆ ಹೋಂ ಕ್ವಾರಂಟೈನ್: ಹುಬ್ಬಳ್ಳಿ ಕಿಮ್ಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಶುಶ್ರೂಷಕರಿಗೆ ಹೋಂ ಕ್ವಾರಂಟೈನ್ ನೀಡಲಾಗಿದೆ. ಕರೊನಾ ಸೋಂಕಿತರ ಬಳಿ ತೆರಳಿ ಚಿಕಿತ್ಸೆ ನೀಡಿದ್ದರಿಂದ ಶುಶ್ರೂಷಕರಿಗೆಲ್ಲ ಹೋಂ ಕ್ವಾರಂಟೈನ್ ನೀಡಲಾಗಿದೆ. ಆದರೆ, ಕೆಲವರು ಇನ್​ಫೋಸಿಸ್ ಫೌಂಡೇಷನ್​ನ ಧರ್ಮಶಾಲೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಕೆಲ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿತ್ತು. ಶುಶ್ರೂಷಕರಿಗೆ ಕ್ವಾರಂಟೈನ್​ನಲ್ಲಿರಲು ಸೂಚಿಸಿಲ್ಲ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವರಿಗೆ ಕ್ವಾರಂಟೈನ್​ಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಜಿಲ್ಲೆಯಲ್ಲಿ ಮತ್ತೆ 111 ಶಂಕಿತರು ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಶಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದರೂ ಬಹುತೇಕ ವರದಿಗಳು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಜನರು ಕೊಂಚ ನಿರಾಳರಾಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 111 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ 4929 ನಿಗಾ ವಹಿಸಿದವರ ಸಂಖ್ಯೆ ಶನಿವಾರ 5049ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 4406 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 4242 ಜನರ ವರದಿ ನೆಗೆಟಿವ್ ಬಂದಿವೆ. 12 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, 5 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 159 ವರದಿಗಳು ಬರಬೇಕಿದೆ. ಶುಕ್ರವಾರ ಬಾಕಿ ಇದ್ದ 169 ವರದಿಗಳ ಪೈಕಿ 121 ವರದಿಗಳು ನೆಗೆಟಿವ್ ಬಂದಿವೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 5049 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 4129 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿ 7 ಜನ ದಾಖಲಾಗಿದ್ದಾರೆ. 94 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 819 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts