More

    ಕೋಡಬಾಳ ಗ್ರಾಮಕ್ಕೆ ತಹಸೀಲ್ದಾರ್ ಭೇಟಿ

    ಹಾವೇರಿ: ಜು. 22ರಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಕೋಡಬಾಳ ಗ್ರಾಮದ ಬಸವಣೆಯ್ಯ ನಾಗಯ್ಯ ಚರಂತಿಮಠ ಅವರ ಗ್ರಾಮಕ್ಕೆ ಗುರುವಾರ ತಹಸೀಲ್ದಾರ್ ಶಂಕರ ಜಿ.ಎಸ್. ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮನೆ ನಿರ್ಮಾಣ ಕುರಿತಂತೆ ಮಾತುಕತೆ ನಡೆಸಿದರು.

    ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಈ ಕುಟುಂಬವು ಮನೆ ಕಳೆದುಕೊಂಡಿತ್ತು. ಬಿದ್ದ ಮನೆಯನ್ನು ಜಿಲ್ಲಾಡಳಿತದಿಂದ ಸಿ ಕೆಟಗೆರಿಯಲ್ಲಿ ಪರಿಗಣಿಸಿ 50 ಸಾವಿರ ರೂ. ಗಳ ಪರಿಹಾರ ನೀಡಲಾಗಿತ್ತು. ಕುಟುಂಬದಲ್ಲಿ 3 ಜನ ಮಾನಸಿಕ ಅಸ್ವಸ್ಥತೆಯುಳ್ಳವರು, ವಯೋವೃದ್ಧರಿದ್ದಾರೆ. ಪೂರ್ಣ ಮನೆ ಬಿದ್ದರೂ ಎ ಕೆಟಗೆರಿಯಲ್ಲಿ ನಮೂದಿಸದೇ ಸಿ ಕೆಟಗೆರಿಯಲ್ಲಿ ನಮೂದಿಸಿದ್ದರಿಂದ ಬೇಸತ್ತ ಕುಟುಂಬದವರು ತಮಗೆ ನ್ಯಾಯ ಕೊಡಿಸುವಂತೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇವರ ಸಮಸ್ಯೆ ಆಲಿಸಿದ್ದ ತಹಸೀಲ್ದಾರ್ ಶಂಕರ ಜಿ.ಎಸ್., ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಗುರುವಾರ ಕೋಡಬಾಳ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್, ಚರಂತಿಮಠ ಕುಟುಂಬಸ್ಥರು ವಾಸವಾಗಿದ್ದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮನೆ ನಿರ್ವಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು. ಅಲ್ಲದೆ, ಈ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

    ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ತಹಸೀಲ್ದಾರ್ ಗಮನಕ್ಕೆ ತಂದರು. ಗ್ರಾಮಸ್ಥರಾದ ಲೋಕೇಶ ಕುಬಸದ, ರೇವಣಸಿದ್ದಪ್ಪ ಗಾಣಿಗೇರ, ಭರತ ಮೇಗಿಲಮನಿ, ಪರಶುರಾಮ ಕುಪ್ಪೇಲೂರ, ವೀರಣ್ಣ ಮುಪ್ಪಯ್ಯನವರ, ಈರಯ್ಯ ಹಿರೇಮಠ, ಮಹಾಲಿಂಗಪ್ಪ ಯತ್ನಳ್ಳಿ, ಚನ್ನಬಸಯ್ಯ ಚರಂತಿಮಠ ಇತರರಿದ್ದರು.

    ಚರಂತಿಮಠದ ಅವರ ಸಮಸ್ಯೆಯನ್ನು ಆಲಿಸಿ ಗ್ರಾಮಕ್ಕೆ ಹೋಗಿ ಪರಿಶೀಲಿಸಿದ್ದೇನೆ. ಹಿಂದೆ ಮನೆ ಹಾನಿ ಪರಿಶೀಲನೆಯ ವೇಳೆಯಲ್ಲಿ ಸಿ ಕೆಟಗೆರಿಯಲ್ಲಿ ಅವರ ಮನೆ ನಮೂದಾಗಿ ಪರಿಹಾರವೂ ಬಂದಿದೆ. ಹೀಗಾಗಿ ಈಗ ಅದನ್ನು ಬಿ ಕೆಟಗೆರಿಗೆ ಪರಿವರ್ತಿಸುವುದು ಕಷ್ಟ. ಅದರ ಬದಲಾಗಿ ಆಶ್ರಯ ಯೋಜನೆಯಲ್ಲಿ ಅವರ ಕುಟುಂಬಕ್ಕೆ ಮನೆ ಮಂಜೂರಾತಿಗೆ ಮೇಲಧಿಕಾರಿಗಳಿಗೆ ಇಲ್ಲಿನ ವಾಸ್ತವ ಸ್ಥಿತಿ ವಿವರಿಸಿ ವರದಿ ಸಲ್ಲಿಸುತ್ತೇನೆ.
    | ಶಂಕರ ಜಿ.ಎಸ್. ತಹಸೀಲ್ದಾರ್ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts