More

    ಕೊಳೆಗೇರಿ ಜನರಿಗೆ ನಿವೇಶನ ಕಲ್ಪಿಸಲು ಆಗ್ರಹ -ಸ್ಲಂ ಜನಾಂದೋಲನ ಸಂಘಟನೆ ಪ್ರತಿಭಟನೆ

    ದಾವಣಗೆರೆ: ನಗರಪಾಲಿಕೆ ವ್ಯಾಪ್ತಿಯ ವಿವಿಧ ಕೊಳೆಗೇರಿಗಳ ನಿವೇಶನರಹಿತರಿಗೆ ಸರ್ಕಾರಿ ಭೂಮಿ ಗುರುತಿಸಿ, ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
    ದಾವಣಗೆರೆ ನಗರದಲ್ಲಿ ಸೂಕ್ತ ಜಾಗ ಗುರುತಿಸಿ ನಿವೇಶನ ಕಲ್ಪಿಸಬೇಕು. ಅದನ್ನು ಸ್ಲಂ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಎಚ್. ರೇಣುಕಾ ಯಲ್ಲಮ್ಮ ಮಾತನಾಡಿ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 72 ಸ್ಲಂಗಳಿವೆ. ಇದರಲ್ಲಿ 52 ಅಧಿಕೃತ ಘೋಷಣೆೆಯಾಗಿವೆ. ಸುಮಾರು 3 ಸಾವಿರಕ್ಕೂ ಹೆಚ್ಚು ಬಡವರು, ಕೂಲಿ ಕಾರ್ಮಿಕರು ಈ ಕೊಳೆಗೇರಿಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೆ ಭೂಮಿಯ ಹಕ್ಕು ಸಿಕ್ಕಿಲ್ಲ ಎಂದು ಹೇಳಿದರು.
    ನಿವೇಶನರಹಿತರಿಗೆ 41 ಎಕರೆ ಭೂಮಿ ಕಾಯ್ದಿರಿಸಿದ್ದು ಸ್ಲಂ ಜನರಿಗೆ ಆದ್ಯತೆ ನೀಡುವುದಾಗಿ ಹಿಂದಿನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರು ತಿಳಿಸಿದ್ದರು. ಆದರೆ ಈ ಭೂಮಿಯಲ್ಲಿ ಈಗಾಗಲೆ ನಿವೇಶನಗಳು ಮಾರ್ಪಾಡಾಗಿ ಹಂಚಿಕೆಯಾಗಿವೆ. ಒಬ್ಬ ಸ್ಲಂ ನಿವಾಸಿಗೂ ನಿವೇಶನ ದೊರೆತಿಲ್ಲ. ಇನ್ನಾದರೂ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
    ಸಂಘಟನೆಯ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಮಾತನಾಡಿ ಪಾಲಿಕೆ ವ್ಯಾಪ್ತಿಯ ಆಶ್ರಯ ಸಮಿತಿಗೆ ಕಳೆದೆರಡು ವರ್ಷದಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಿವೇಶನರಹಿತರಿಗೆ ಮಾರ್ಪಾಟಾಗಿದ್ದ ನಿವೇಶನಗಳು ಉಳ್ಳವರ ಪಾಲಾಗಿವೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ತನಿಖಾ ಸಂಸ್ಥೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಜಿಎಂಐಟಿ ಬಳಿ 25 ಎಕರೆ, ಸಾಲಕಟ್ಟೆ ಬಳಿ 50 ಎಕರೆ ಹಾಗೂ ಬಾತಿ ಕೆರೆ ಬಳಿ 15 ಎಕರೆ ಜಾಗ ನಿವೇಶನರಹಿತರಿಗೆ ಮೀಸಲಿಡಲಾಗಿತ್ತು. ಆದರೆ ನಿಜವಾದ ಫಲಾನುಭವಿಗಳಿಗೆ ಇದು ದಕ್ಕಿಲ್ಲ. ಬಡವರು, ಶೋಷಿತರು ಹಾಗೂ ನಿವೇಶನರಹಿತರ ಪರವಿದ್ದೇವೆ ಎನ್ನುವ ಸರ್ಕಾರ ಅರ್ಹರಿಗೆ ಸೂರು ಕಲ್ಪಿಸಬೇಕು. 2-3 ತಿಂಗಳಲ್ಲಿ ಸಮೀಕ್ಷೆ ನಡೆಸಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಕುಟುಂಬ ಸದಸ್ಯರೊಂದಿಗೆ ಧರಣಿ ನಡೆಸಲಿದ್ದೇವೆ ಎಂದು ಹೇಳಿದರು.
    ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಬ್ಬೀರ್‌ಸಾಬ್, ಮಂಜುಳಾ, ಜಂಶಿದಾ ಬಾನು, ಸಾವಿತ್ರಮ್ಮ, ರೇಷ್ಮಾ ಬಾನು, ರೇಖಾ, ಅಸ್ಮಾಬಾನು, ರಾಜೇಶ್ವರಿ, ಸಲ್ಮಾಬಾನು, ಸಿಕಂದರ್, ಯೂಸೂಫ್‌ಸಾಬ್, ಖಾಸಿಂಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts