More

    ಕೊಪ್ಪರಸಿಕೊಪ್ಪದಲ್ಲಿ ಗಜಪಡೆ ದಾಳಿ

    ಹಾನಗಲ್ಲ: ತಾಲೂಕಿಗೆ ಮತ್ತೆ ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು ಕೊಪ್ಪರಸಿಕೊಪ್ಪ ಗ್ರಾಮದ ಹೊಲಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದೆ. ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ.

    ಮೂರು ದಿನಗಳಿಂದ ಮೂರು ಕಾಡಾನೆಗಳ ತಂಡ ಹೊಲಗಳಿಗೆ ದಾಳಿಯಿಟ್ಟು ಗೋವಿನಜೋಳ, ಮಾವಿನಗಿಡ, ಮೆಣಸಿನ ಗಿಡಗಳನ್ನು ತುಳಿದು, ತಿಂದು ನಾಶಪಡಿಸಿವೆ. ಕೊಪ್ಪರಸಿಕೊಪ್ಪ ಗ್ರಾಮದ ಸೈಯದ್​ಕರೀಂ ಹಂಚಿನಮನಿ, ಖುದ್ದುಸ್​ಸಾಬ್ ಹಂಚಿನಮನಿ, ಬಾಷಾಸಾಬ್ ಇನಾಂದಾರ ಅವರ ಹೊಲಗಳಲ್ಲಿನ ಗೋವಿನಜೋಳ, ಮಾವಿನಗಿಡ, ಮೆಣಸಿನಗಿಡಗಳು ನಾಶವಾಗಿವೆ. ಅಲ್ಲದೆ, ಗೋವಿನಜೋಳಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಪೈಪ್​ಗಳನ್ನೂ ತುಳಿದು ಮುರಿದು ಹಾಕಿವೆ.

    ಸೈಯದ್​ಕರೀಂ ಅವರ 2 ಎಕರೆ ಹೊಲದಲ್ಲಿ ಬೆಳೆದಿದ್ದ ಗೋವಿನಜೋಳ ಇನ್ನು ಕೆಲ ದಿನಗಳಲ್ಲೇ ಕೊಯ್ಲಿಗೆ ಸಿದ್ಧವಾಗಿತ್ತು. ಬೆಳೆಗೆ 50 ಸಾವಿರ ರೂ. ಖರ್ಚು ಮಾಡಿದ್ದರು. ಆದರೆ, ಗಜಪಡೆ ರಾತ್ರಿಯೆಲ್ಲ ಗೋವಿನಜೋಳದ ತೆನೆಗಳನ್ನು ತಿಂದುಹಾಕಿವೆ. ಗೋವಿನಜೋಳದ ಮಧ್ಯೆ ನೆಡಲಾಗಿದ್ದ 2 ವರ್ಷದ 30ಕ್ಕೂ ಅಧಿಕ ಮಾವಿನಗಿಡಗಳನ್ನೂ ತುಳಿದು ನಾಶಪಡಿಸಿವೆ. ಇನ್ನೆರಡು ವರ್ಷಗಳಿಗೆ ಮಾವು ಫಸಲು ಬಿಡಲು ಪ್ರಾರಂಭಗೊಳ್ಳುತ್ತಿತ್ತು. ಮಾವಿನಗಿಡಗಳಿಗಾಗಿ ರೈತ ಲಕ್ಷಾಂತರ ರೂ. ಖರ್ಚು ಮಾಡಿ, ನೀರಾವರಿ ಯೋಜನೆ ಅಳವಡಿಸಿದ್ದರು.

    ರಾತ್ರಿಯೆಲ್ಲ ನೀರು ಹಾಯಿಸಿದ್ದು ವ್ಯರ್ಥ: ಪ್ರತಿ ದಿನ ರೈತರು ಗೋವಿನಜೋಳಕ್ಕೆ ನೀರು ಹಾಯಿಸಲು ರಾತ್ರಿ 3 ಗಂಟೆಗೆ ಹೊಲಕ್ಕೆ ತೆರಳಿ ನಿದ್ರೆಗೆಟ್ಟು ಎರಡೂವರೆ ತಿಂಗಳು ನೀರುಣಿಸಿ ಬೆಳೆದಿದ್ದರು. ಆದರೆ, ಕಾಡಾನೆಗಳು ಮೂರು ದಿನಗಳಲ್ಲಿ ಅದನ್ನೆಲ್ಲ ನಾಶಪಡಿಸಿವೆ. ಆನೆಗಳು ಬಾರದಂತೆ ರಾತ್ರಿ ವೇಳೆ ಬೆಂಕಿ ಹಾಕಿ ಕಾಯುತ್ತಿದ್ದರೂ ಬಿಡದೇ ಬಂದು ಗೋವಿನಜೋಳ ತಿನ್ನುತ್ತಿವೆ. ಯಾವುದೇ ಹೆದರಿಕೆಗಳಿಗೂ ಕಾಡಾನೆಗಳು ಜಗ್ಗುತ್ತಿಲ್ಲ. ಬೇಲಿಗಳನ್ನು ಮುರಿದು ಎಲ್ಲೆಂದರಲ್ಲಿ ತಿರುಗಾಡುತ್ತಿವೆ.

    ಅರಣ್ಯ ಇಲಾಖೆ ಪ್ರಯತ್ನವೂ ವ್ಯರ್ಥ: ಕೊಪ್ಪರಸಿಕೊಪ್ಪ ಗ್ರಾಮದ ಬಿದಿರು ಹಾಗೂ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಒಂದು ಸಲಗ, ಒಂದು ಹೆಣ್ಣಾನೆ ಹಾಗೂ ಒಂದು ಮರಿಯಾನೆ ದಾಂಡೇಲಿ ಅರಣ್ಯ ಪ್ರದೇಶದಿಂದ ಆಗಮಿಸಿವೆ. ಇದು ರೈತರಿಗಲ್ಲದೆ, ಅರಣ್ಯ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿವೆ. ಎರಡು ದಿನಗಳಿಂದ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ರಾತ್ರಿಯೆಲ್ಲ ಕಾದು ಕುಳಿತು ಮದ್ದು ಸಿಡಿಸಿ ಹೆದರಿಸಿ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದಾವುದಕ್ಕೂ ಅವು ಹೆದರುತ್ತಿಲ್ಲ. ರಾಜಾರೋಷವಾಗಿ ಹೊಲದಲ್ಲಿ ಹಾದು ಕೆರೆಯಲ್ಲಿ ನೀರು ಕುಡಿದು ಬರುತ್ತವೆ. ನಂತರ ಗೋವಿನಜೋಳದ ತೆನೆಗಳನ್ನು ತಿಂದು ಉಳಿದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ.

    ಎರಡು ತಿಂಗಳ ಹಿಂದಷ್ಟೇ ತಾಲೂಕಿನ ಮಂತಗಿ, ಶಿವಪುರ, ಕಾಮನಹಳ್ಳಿ ಗ್ರಾಮಗಳಿಗೆ ಬಂದು ಅಲ್ಲಿನ ಭತ್ತ, ಕಬ್ಬು ಮತ್ತಿತರ ಬೆಳೆಗಳನ್ನು ನಾಶಪಡಿಸಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಹರಸಾಹಸ ಮಾಡಿ ವಾರದ ನಂತರ ಆನವಟ್ಟಿ ಅರಣ್ಯ ಪ್ರದೇಶದತ್ತ ಓಡಿಸಿದ್ದರು. ನಂತರ ಅವು ಶಿವಮೊಗ್ಗ ಜಿಲ್ಲೆಯತ್ತ ಪಯಣಿಸಿದ್ದವು. ಅವೇ ಆನೆಗಳು ಮರಳಿ ಬಂದಿವೆಯೋ ಅಥವಾ ಬೇರೆ ಆನೆಗಳೋ ಎನ್ನುವುದು ಅರಣ್ಯ ಇಲಾಖೆ ಸಿಬ್ಬಂದಿಗೂ ತಿಳಿಯುತ್ತಿಲ್ಲ.

    ಪ್ರತಿದಿನ ಹಗಲು-ರಾತ್ರಿ ಎನ್ನದೇ ನೀರುಣಿಸಿ ಬೆಳೆಸಿದ್ದ ಲಕ್ಷಾಂತರ ರೂ. ಆದಾಯ ತರಬೇಕಾದ ಗೋವಿನಜೋಳ ಆನೆಗಳಿಂದ ನಾಶವಾಗಿದೆ. ಅರಣ್ಯ ಇಲಾಖೆಯವರ ಪ್ರಯತ್ನವೂ ವ್ಯರ್ಥವಾಗುತ್ತಿದೆ. ಇನ್ನೂ ಹೆಚ್ಚಿನ ಪರಿಣತಿ ಹೊಂದಿದ ಸಿಬ್ಬಂದಿಯನ್ನು ಕರೆಸುವ ಅಗತ್ಯವಿದೆ. ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
    | ಸೈಯದ್ ಕರೀಂ ಹಂಚಿನಮನಿ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts