More

    ಕೊಡೇಕಲ್ ಜಾನುವಾರು ಸಂತೆ ಭಣ ಭಣ…

    ಕೊಡೇಕಲ್ : ಮಳೆ ಕೊರತೆಯಿಂದಾಗಿ ಎಲ್ಲೆಡೆ ಬರ ಆವರಿಸಿದ್ದರಿಂದ ಕೃಷಿ ಸಲಕರಣೆಗಳು ಮತ್ತು ರಸಗೊಬ್ಬರ ಅಂಗಡಿಯಲ್ಲಿನ ವಹಿವಾಟಿಗೆ ಹಿನ್ನಡೆಯಾಗಿದ್ದು, ಗ್ರಾಮದ ಜಾನುವಾರು ಸಂತೆಗೂ ಈ ಬಿಸಿ ತಟ್ಟಿದಂತಿದೆ.

    ಪ್ರತಿ ಮಂಗಳವಾರ ನಡೆಯುವ ಜಾನುವಾರು ಸಂತೆಗೆ ಎರಡು ವಾರದಿಂದ ನಿರೀಕ್ಷೆಯಂತೆ ಜಾನುವಾರುಗಳು ಬಾರದ ಕಾರಣ ಕಳೆಗುಂದಿದೆ. ತಾಲೂಕಿನಲ್ಲಿಯೇ ಏಕೈಕ ಜಾನುವಾರು ಸಂತೆ ಇದಾಗಿದೆ. ಹಲವು ವರ್ಷದಿಂದ ನಡೆಯುತ್ತಿರುವ ಮಂಗಳವಾರದ ಸಂತೆಗೆ ವಲಯ ಸೇರಿ ನೆರೆ ತಾಲೂಕುಗಳಿಂದ ರೈತರು ತಮ್ಮ ಜಾನುವಾರುಗಳ ಸಮೇತ ಆಗಮಿಸಿ ಕೊಡು-ಕೊಳ್ಳುವಿಕೆ ಮಾಡುತ್ತಾರೆ. ಅದರಲ್ಲೂ ಮುಂಗಾರು ಮತ್ತು ಹಿಂಗಾರು ಆರಂಭದ ದಿನಗಳಲ್ಲಿ ಸಂತೆ ಬಲು ಜೋರಾಗಿ ನಡೆಯುತ್ತದೆ.

    ಈ ವರ್ಷದ ಮುಂಗಾರು ಆರಂಭದಲ್ಲಿ ಜಾನುವಾರುಗಳಿಂದ ಸಂತೆ ತುಂಬಿ ತುಳುಕುತ್ತಿತ್ತು. ಆದರೆ ಅದೇ ಸಂತೆ ಮೈದಾನ ಹಿಂಗಾರು ಹಂಗಾಮಿನಲ್ಲಿ ಜಾನುವಾರುಗಳಿಲ್ಲದೆ ಬಿಕೋ ಎನ್ನುತ್ತಿದೆ.

    ಮುಂಗಾರು ಮತ್ತು ಹಿಂಗಾರು ಬಿತ್ತನೆ ವೇಳೆ ಯೋಗ್ಯವಾದ ಎತ್ತು, ಆಕಳು ಮತ್ತು ಎಮ್ಮೆ ಖರೀದಿಸಲು ಸಾವಿರಾರು ರೈತರು ಸಂತೆಗೆ ಆಗಮಿಸಿ ತಮಗೆ ಇಷ್ಟವಾದ ಜಾನುವಾರು ಖರೀದಿ ಮಾಡುತ್ತಿದ್ದರು. ಆದರೆ ಈ ವರ್ಷ ಸಮರ್ಪಕ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳಿಗೆ ಕೊಂಚ ಹಿನ್ನಡೆಯಾಗಿದೆ. ಅದರಲ್ಲೂ ರೈತರು ಅತಿ ಭರವಸೆ ಇಟ್ಟುಕೊಂಡು ಬಿತ್ತನೆ ಮಾಡಿದ್ದ ಹತ್ತಿ ಬೆಳೆ ಕೂಡ ರೋಗಕ್ಕೆ ತುತ್ತಾಗಿದೆ. ತೊಗರಿ ಮಳೆ ಕೊರತೆಯಿಂದ ಬಾಡುವಂತಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಹತ್ತಿ, ತೊಗರಿ ಬೆಳೆಗಳ ನಿರ್ವಹಣೆಗಾಗಿ ಮಾಡಿರುವ ಲಾಗೋಡಿ ಸಹ ಬಾರದಂತಹ ಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಸಹಜವೇ ರೈತರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದು, ಹೊಸ ಎತ್ತುಗಳ ಖರೀದಿ ಗೋಜಿಗೆ ಹೋಗದಿರುವುದೇ ಸಂತೆ ಸೊರಗುವಿಕೆಗೆ ಕಾರಣ ಎನ್ನಲಾಗುತ್ತಿದೆ. ಒಟ್ಟಾರೆ ವರುಣನ ಮುನಿಸು ಎಲ್ಲ ವ್ಯಾಪಾರ ವಹಿವಾಟುಗಳಿಗೆ ಬಿಸಿ ತಟ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts