More

    ಕೊಟ್ಟಿಗೇರಿಯಲ್ಲಿ ಬಿತ್ತನೆಗೆ ಅಡ್ಡಿಯಾದ ಸೀಲ್​ಡೌನ್

    ಬಂಕಾಪುರ: ಕರೊನಾ ಸೋಂಕಿತ ವ್ಯಕ್ತಿಯಿಂದಾಗಿ ಪಟ್ಟಣದ ಕೊಟ್ಟಿಗೇರಿ ಪ್ರದೇಶ ಸೀಲ್​ಡೌನ್ ಆಗಿರುವುದರಿಂದ ಬಿತ್ತನೆ ಮುಂದಾಗಿದ್ದ ರೈತರಿಗೆ ಆತಂಕ ಎದುರಾಗಿದೆ.

    ಸೀಲ್​ಡೌನ್​ಗೆ ಒಳಗಾಗಿರುವ ಕೊಟ್ಟಿಗೇರಿ ಪ್ರದೇಶ ಸಂಪೂರ್ಣ ಕೃಷಿಕ ಕುಟುಂಬಗಳು ವಾಸಿಸುವ ಪ್ರದೇಶವಾಗಿದೆ. ಇಲ್ಲಿನ ನಿವಾಸಿ ಲಾರಿ ಚಾಲಕನಿಗೆ ಸೋಕು ದೃಢಪಟ್ಟಿದ್ದರಿಂದ ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಬ್ರೇಕ್ ಬಿದ್ದಿದೆ. ನಿತ್ಯವೂ ಒಂದಿಲ್ಲೊಂದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದ ರೈತರನ್ನು ಸೀಲ್​ಡೌನ್​ನಿಂದ ಮನೆಯಲ್ಲಿಯೇ ಕಟ್ಟಿ ಹಾಕಿದಂತಾಗಿದೆ.

    ಈಗಾಗಲೇ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆಗೆ ಹೊಲ ಹದಗೊಳಿಸಿರುವ ರೈತರು, ಬೀಜ ಗೊಬ್ಬರ ಖರೀದಿಸಿದ್ದರು. ಇನ್ನೇನು ಒಂದು ಮಳೆ ಬಿದ್ದರೆ ಸಾಕು, ಬಿತ್ತನೆ ಮಾಡಬೇಕು ಎಂದುಕೊಂಡಿದ್ದ ರೈತರಿಗೆ ಸೀಲ್​ಡೌನ್​ನಿಂದ ಆಘಾತ ಉಂಟಾಗಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ಸಂಕಷ್ಟಕ್ಕಿಡಾಗಿದ್ದ ರೈತರು, ಈ ಬಾರಿ ಕರೊನಾ ಸೀಲ್​ಡೌನ್​ನಿಂದ ಸಕಾಲಕ್ಕೆ ಬಿತ್ತನೆ ಮಾಡುವುದು ಕಷ್ಟವಾಗಲಿದೆ ಎಂದು ಚಿಂತೆಗೀಡಾಗಿದ್ದಾರೆ.

    ಚೆಕ್​ಪೋಸ್ಟ್ ತಪ್ಪಿಸಿ ಲಾರಿಗಳ ಓಡಾಟ: ಪಟ್ಟಣ ಸೇರಿ ಹೋಬಳಿ ಭಾಗದಲ್ಲಿ ಹಸಿಮೆಣಸಿನಕಾಯಿ ಮತ್ತು ಮಾವು ಸಾಗಾಣಿಕೆ ಸರಾಗವಾಗಿ ಸಾಗಿದೆ. ರೈತರ ಹೊಲಗಳಿಂದಲೇ ಹಸಿಮೆಣಸಿನಕಾಯಿ ಮತ್ತು ಮಾವು ಲೋಡ್ ಮಾಡಿಕೊಂಡು ಚೆಕ್​ಪೋಸ್ಟ್​ಗಳನ್ನು ತಪ್ಪಿಸಿ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ತಾಲೂಕಿನ ಮುಗಳಿಕಟ್ಟಿ, ಚಂದಾಪುರ, ರಾಜೀವನಗರ ಕ್ರಾಸ್ ಸೇರಿ ಮಲೆನಾಡು ಭಾಗದಲ್ಲಿ ಲಾರಿ ಚಾಲಕರ ಓಡಾಟ ಜೋರಾಗಿದೆ. ಇದನ್ನು ಹತೋಟಿಗೆ ತರಲು ಜಿಲ್ಲಾಡಳಿತ ಮುಂದಾಗಬೇಕಾಗಿದೆ.

    ವಾರದ ಹಿಂದೆಯೇ ಮುಂಬೈಗೆ ಹೋಗಿ ಬಂದಿದ್ದಾನೆ ಎಂದು ಗೊತ್ತಿದ್ದರೂ, ಆತನನ್ನು ಸರ್ಕಾರಿ ಕ್ವಾರಂಟೈನ್​ಗೆ ಒಳಪಡಿಸದೇ ಮನೆಗೆ ಕಳುಹಿಸಿದ್ದರ ಪರಿಣಾಮ ನಾವೆಲ್ಲರೂ ಇಂದು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದ ಕೃಷಿಯನ್ನೇ ನಂಬಿರುವ ನಮ್ಮ ಪರಿಸ್ಥಿತಿ ಮುಂದೆ ಹೇಗೆ ಎಂದು ತಿಳಿಯದಂತಾಗಿದೆ.
    | ಮಧುಕುಮಾರ ಜಂಗಳಿ, ಯುವ ಕೃಷಿಕ (ಕೊಟ್ಟಿಗೇರಿ) ಬಂಕಾಪುರ

    ಬಫರ್ ಜೋನ್​ನಲ್ಲಿರುವವರು ಬಿತ್ತನೆ ಸೇರಿ ಇತರೆ ಕೆಲಸದಲ್ಲಿ ತೊಡಗಬಹುದು. ಆದರೆ, ಸೀಲ್​ಡೌನ್ ಪ್ರದೇಶದಲ್ಲಿರುವವರು 28 ದಿನ ಹೊರಗೆ ಹೋಗುವಂತಿಲ್ಲ. ಸರ್ಕಾರ ಈ ಕುರಿತು ಯಾವುದಾದರೂ ಹೊಸ ಮಾರ್ಗಸೂಚಿ ನೀಡಿದರೆ, ಪರ್ಯಾಯ ವ್ಯವಸ್ಥೆ ಕೈಗೊಳ್ಳಬಹುದಾಗಿದೆ.
    | ಅನ್ನಪೂರ್ಣ ಮುದಕಮ್ಮನವರ, ಉಪವಿಭಾಗಾಧಿಕಾರಿ ಸವಣೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts