More

    ಕೊಚ್ಚಿಹೋದ ಹಿರೇಹಳ್ಳದ ಸೇತುವೆ

    ನರಗುಂದ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದ್ದು, ಕೆಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಮನೆಗಳು ಕುಸಿದು ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪಟ್ಟಣದ ಗುರ್ಲಕಟ್ಟಿ ರಸ್ತೆಯಲ್ಲಿರುವ ಹಿರೇಹಳ್ಳದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದ ಗುರ್ಲಕಟ್ಟಿ ಮತ್ತು ಕಣಕಿಕೊಪ್ಪ ಗ್ರಾಮಕ್ಕೆ ತೆರಳುವ ಎಲ್ಲ ವಾಹನಗಳ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

    ಕಲಕೇರಿ, ಸಿದ್ದಾಪೂರ, ಹಿರೇಕೊಪ್ಪ ಕ್ರಾಸ್​ನಿಂದ ಚಿಕ್ಕನರಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಸೇತುವೆಗಳು ಜಲಾವೃತಗೊಂಡು ಜನರು ಪರದಾಡುವಂತಾಗಿದೆ. ಪಟ್ಟಣದ ಅರ್ಭಾಣ ಬಡಾವಣೆಯ ಅಮ್ಜದ್ ಖಾಜಿ, ದಂಡಾಪೂರ ಕುರುಬಗೇರಿ ಬಡಾವಣೆಯ ಪ್ರವೀಣ ಯಲ್ಲಪ್ಪ ಮೊಕಾಶಿ, ಈಶ್ವರಪ್ಪ ಬಸಪ್ಪ ಕುರಿ, ಬಸಪ್ಪ ಯಲ್ಲಪ್ಪ ಹನಸಿ, ಬಸವರಾಜ ವಾಗಮೋಡಿ, ನಾಗಪ್ಪ ಕುರಿ, ಸಿದ್ದನಬಾವಿ ಓಣಿಯ ಕಲಾಲ ಎಂಬುವರ ಮನೆಗಳು ಬಿದ್ದಿವೆ. ನಿರಂತರ ಮಳೆಗೆ ಅಂಬೇಡ್ಕರ್ ನಗರ ಬಡಾವಣೆಯ ರುದ್ರವ್ವ ಚಲವಾದಿ ಎಂಬುವರ ಮನೆಯಲ್ಲಿ ನೀರು ಜಿನುಗುತ್ತಿದೆ. ಮೊಣಕಾಲುದ್ದ ನೀರು ನಿಂತ ಪರಿಣಾಮ ಕುಟುಂಬ ಸದಸ್ಯರಿಗೆ ದಿಕ್ಕು ತೋಚದಂತಾಗಿದ್ದು ಮನೆಯನ್ನು ತೊರೆದಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ಇರುವ ಮಣ್ಣಿನ ಮನೆಗಳು ನಿರಂತರ ಮಳೆಗೆ ಸೋರುತ್ತಿದ್ದು, ಕೆಲವರು ತಾಡಪತ್ರಿಗಳ ಮೊರೆ ಹೋಗಿದ್ದಾರೆ. ವಿವಿಧ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಯಿಂದಾಗಿ ರೈತರು ಹಿಂಗಾರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ. ನರಗುಂದ ಸೇರಿ ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆ 11 ಗಂಟೆವರೆಗೂ ಮಳೆ ಸುರಿದು ಮಬ್ಬುಗತ್ತಲು ವಾತಾವರಣವಿತ್ತು. ಹೀಗಾಗಿ ಜನರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಮಳೆಗೆ ನರಗುಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಪ್ರಮುಖ ರಸ್ತೆಗಳು ಕೇಸರುಗದ್ದೆಯಂತಾಗಿ, ಸಂಚಾರಕ್ಕೆ ತೊಂದರೆ ಉಂಟಾಗಿದೆ.

    ಹತ್ತಾರು ಮನೆಗಳಿಗೆ ಹಾನಿ, ಚೆಕ್ ಡ್ಯಾಂ ಭರ್ತಿ

    ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನಜಾವದವರೆಗೆ ಸುರಿದ ಮಳೆಯಿಂದ ಹಲವು ಮನೆಗಳು ಕುಸಿದಿವೆ. ಮಳೆಯಿಂದಾಗಿ ಹಳ್ಳಗಳು, ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ತ್ಯಾಜ್ಯವೆಲ್ಲ ರಸ್ತೆ ಮೇಲೆಲ್ಲ ಹರಿಯಿತು.

    ನಿರಂತರ ಮಳೆಗೆ ಮಣ್ಣಿನ ಮಾಳಿಗೆ ಇರುವ ಮನೆಗಳು ಸೋರುತ್ತಿವೆ. ಶಿವಾಜಿ ಪೇಟೆಯ ಉಸ್ಮಾನಸಾಬ ತಟ್ಟಿ ಎಂಬುವವರ ಮನೆ ಮೇಲ್ಛಾವಣಿ, ರಾಜೂರ ಗ್ರಾಮದ ಯಲ್ಲವ್ವ ಕಟ್ಟಿಮನಿ ಎಂಬುವವರ ಮನೆ ಗೋಡೆ ಕುಸಿದಿವೆ. ನಿರಂತರ ಮಳೆಗೆ ತಾಲೂಕಿನಾದ್ಯಂತ ಅಂದಾಜು 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಗೋವಿನಜೋಳ, ಹತ್ತಿ, ಸಜ್ಜೆ, ಶೇಂಗಾ ಬೆಳೆಗಳಿರುವ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗಳೆಲ್ಲ ಹಾಳಾಗುತ್ತಿವೆ.

    ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ

    ಹೊಳೆಆಲೂರ: ಮಲಪ್ರಭಾ ನದಿ ಮೇಲ್ಭಾಗದಲ್ಲಿ ಶುಕ್ರವಾರ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಸಂಪೂರ್ಣ ಮುಳುಗಿದೆ. ಇದರಿಂದಾಗಿ ಹೊಳೆಆಲೂರ- ಬದಾಮಿ ಸಂಪರ್ಕ ಕಡಿತವಾಗಿದೆ.

    ನಿತ್ಯ ಹೊಳೆ ಆಲೂರಿಗೆ ಬರುವ ಜನರು ಸೇತುವೆ ಮುಳುಗುವ ಭೀತಿಯಲ್ಲಿ ಮಧ್ಯಾಹ್ನವೇ ತಮ್ಮ ತಮ್ಮ ಗ್ರಾಮಗಳಿಗೆ ಧಾವಿಸಿದರು. ಸಂಜೆ 5.15ರ ಸುಮಾರಿಗೆ ಹೊಳೆಆಲೂರಿನಿಂದ ಹೆಬ್ಬಳ್ಳಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕರಿಬ್ಬರು ಕೊಚ್ಚಿ ಹೋಗುವ ಅಪಾಯ ಎದುರಾಗಿತ್ತು. ಆಗ, ಅಲ್ಲಿಯೇ ಇದ್ದ ಕುರುವಿನಕೊಪ್ಪ ಹಾಗೂ ನೀರಲಗಿ ಗ್ರಾಮಸ್ಥರು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ನದಿ ಪಾತ್ರದ ಬಹುತೇಕ ಹೊಲಗಳಿಗೆ ನೀರು ನುಗ್ಗಿರುವುದರಿಂದ ಉಳ್ಳಾಗಡ್ಡಿ, ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಬೆಳೆ ಹಾಳಾಗಿದೆ. ಜನಪ್ರತಿನಿಧಿಗಳ ಬಗ್ಗೆ ಸಾರ್ವಜನಿಕರ ಆಕ್ರೋಶ: ಹೊಳೆಆಲೂರ ಮಲಪ್ರಭಾ ಸೇತುವೆ ಅತಿ ತಳಮಟ್ಟದಲ್ಲಿದ್ದು ಹಾಗೂ ಬಹಳ ಶಿಥಿಲವಾಗಿದೆ. ಅದನ್ನು ಎತ್ತರಿಸಲು ಒಂದು ವರ್ಷದ ಹಿಂದೆ ಮಂಜೂರಾತಿ ದೊರಕಿದ್ದರೂ ಕೆಲ ಪ್ರಭಾವಿಗಳ ಕುತಂತ್ರದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಾರ್ವಜನಿಕರು ಹತ್ತಾರು ಬಾರಿ ಈ ಭಾಗದ ಶಾಸಕರು, ಲೋಕಸಭಾ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ತುಂಬಿ ಹರಿದ ಹಳ್ಳ-ಕೊಳ್ಳ

    ನರೇಗಲ್ಲ: ಪಟ್ಟಣ ಸೇರಿ ಹೋಬಳಿಯಾದ್ಯಂತ ಶುಕ್ರವಾರ ತಡ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೆ ಸುರಿದ ಮಳೆಯಿಂದಾಗಿ ಮಣ್ಣಿನ ಮನೆಗಳು ತಂಪು ಹಿಡಿದಿದ್ದು ಸೋರುತ್ತಿವೆ. ವರ್ಷಧಾರೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರಸ್ತೆಗಳು ಅಕ್ಷರಶಃ ಕೆಸರುಗದ್ದೆಯಂತಾಗಿವೆ. ಜಮೀನುಗಳಿಗೆ ಸಂರ್ಪಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಉಳ್ಳಾಗಡ್ಡಿ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಅತಿಯಾದ ತೇವಾಂಶದಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿವೆ. ಜಮೀನುಗಳಲ್ಲಿನ ತಗ್ಗು ಪ್ರದೇಶಗಳು ಕೆರೆಯಂತಾಗಿವೆ.

    ಮನೆ ಗೋಡೆ ಕುಸಿದು ಕುರಿಗಳು ಸಾವು

    ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೆ ಸುರಿದ ಮಳೆಯಿಂದಾಗಿ ಜನರು ಮನೆಯಿಂದ ಹೊರಗಡೆ ಬಾರದಂತಹ ವಾತಾವರಣ ನಿರ್ವಣವಾಗಿತ್ತು. ಪಟ್ಟಣದ ಕಡ್ಲೇಪೇಟೆ ಓಣಿ, ಕೋಟೆಭಾಗ ಮೊದಲಾದ ಕಡೆಗಳಲ್ಲಿ 6ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿವೆ. ಕಡ್ಲೆಪೇಟೆ ಓಣಿಯ ಸುರೇಶ ಮೆದಕನಾಳ ಎಂಬುವರ ಮನೆ ಗೋಡೆ ಕುಸಿದು ಕುರಿಗಳ ತಗಡಿನ ಶೆಡ್​ವೆುೕಲೆ ಬಿದ್ದಿದ್ದರಿಂದ ಶೆಡ್​ನಲ್ಲಿದ್ದ 3 ಕುರಿಗಳು ಮೃತಪಟ್ಟಿದ್ದು 12 ಕುರಿಗಳು ಗಾಯಗೊಂಡಿವೆ. ತಹಸೀಲ್ದಾರ್ ಆಶಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಉಳ್ಳಾಗಡ್ಡಿ, ಹತ್ತಿ, ಗೋವಿನಜೋಳ ಮೊದಲಾದ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಂಡು ಬೆಳೆಗಳು ಕೊಳೆಯುವ ಹಂತ ತಲುಪಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts