More

    ಕೊಂಕಿಕೋಟೆಯಲ್ಲಿ ಭೂ ಕುಸಿತ

    ಶಿರಸಿ: ಇತಿಹಾಸದ ವಿಸ್ಮಯಗಳ ಆಗರವಾಗಿದ್ದ ತಾಲೂಕಿನ ಗಿರಿದುರ್ಗ ಕೊಂಕಿಕೋಟೆಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಇದು ಕೋಟೆಯ ಅಸ್ತಿತ್ವಕ್ಕೆ ಧಕ್ಕೆಯಾಗುವ ಜತೆಗೆ ಸಮೀಪದ ಗ್ರಾಮಗಳ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
    ಶಿರಸಿ, ಯಲ್ಲಾಪುರ, ಅಂಕೋಲಾ ತಾಲೂಕುಗಳು ಒಂದೆಡೆ ಸಂಧಿಸುವ ಪ್ರದೇಶ ಇದಾಗಿದ್ದು, ಈ ಕಾಡಿನ ನಡುವೆ ಚಿಕ್ಕ ಝುರಿಯ ಅಕ್ಕಪಕ್ಕ ಅಂದಾಜು ನೂರು ಮೀಟರ್​ಗೂ ಹೆಚ್ಚು ಅಗಲ, 10ರಿಂದ 15 ಅಡಿ ಆಳಕ್ಕೆ ಭೂಮಿ ಬಾಯ್ತೆರೆದುಕೊಂಡಿದೆ. ತೀರ ಇಳಿಜಾರಿನಿಂದ ಕೂಡಿರುವ ದಟ್ಟಾರಣ್ಯದಲ್ಲಿ ಕಿ.ಮೀ.ಗೂ ಹೆಚ್ಚು ಉದ್ದದವರೆಗೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಪಶ್ಚಿಮಘಟ್ಟದಲ್ಲಿ ಸಿಗುವ ಅಪರೂಪದ ಬೆತ್ತ, ಬೆಲೆಬಾಳುವ ತೇಗ, ಸಾಗವಾನಿ ಸೇರಿದಂತೆ ನೂರಾರು ದೊಡ್ಡಗಾತ್ರದ ಮರಗಳು ಮಣ್ಣಿನಡಿಯಾಗಿವೆ. ಬೇಡ್ತಿ, ಶಾಲ್ಮಲಾ ನದಿಗಳು ಸಂಧಿಸುವ ಪ್ರದೇಶ ಈ ಜಾಗಕ್ಕೆ ಕಿಲೋಮೀಟರ್ ಅಳತೆಯಲ್ಲಿದ್ದು, ಅಲ್ಲಿಯವರೆಗೂ ಕೊಚ್ಚಿಕೊಂಡು ಹೋಗಿರುವ ಮಣ್ಣು ಕಾಣಸಿಗುತ್ತಿವೆ. ನೀರು ಈವರೆಗೆ ತೊರೆಯಾಗಿ ಹರಿಯುತ್ತಿದ್ದುದು ಈಗ ಹಲವೆಡೆ ಕೃತಕ ಜಲಪಾತ ನಿರ್ವಣವಾಗಿದೆ. ಇದು ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಯಲ್ಲಾಪುರ ತಾಲೂಕಿನ ಜೇನುಕಲ್ಲು ಗುಡ್ಡದಿಂದ ಭೂಕುಸಿತದ ಪ್ರದೇಶ ಕಾಣುತ್ತಿರುವುದು ಭೂಕುಸಿತದ ಭೀಕರತೆ ಸಾಕ್ಷಿಯಾಗಿದೆ.
    ಸೋದೆ ಅರಸರ ಕಾಲದಲ್ಲಿ ಅಡಗುದಾಣವಾಗಿದ್ದ ಕೊಂಕಿಕೋಟೆಯ ಹಲವೆಡೆ ಶಿಥಿಲಗೊಂಡ ಮಣ್ಣಿನ ಇಟ್ಟಿಗೆಗಳು, ಗಿರಿದುರ್ಗದ ಕೆಳಭಾಗದಲ್ಲಿ ಅರೆ ಮುಚ್ಚಿದ ಸ್ಥಿತಿಯಲ್ಲಿ ಸುರಂಗಗಳು ಕಾಣುತ್ತವೆ. ಕಾಲಾಂತರದಲ್ಲಿ ಬಹುತೇಕ ಕೋಟೆ ಕಾಡಿನಿಂದ ಆವೃತವಾಗಿದ್ದು, ಇತ್ತೀಚೆಗೆ ಸುರಿದ ಅಬ್ಬರದ ಮಳೆಯ ಕಾರಣಕ್ಕೆ ಯಥೇಚ್ಛ ನೀರು ಇಂಗಿಸಿಕೊಂಡು ಭೂಕುಸಿತ ಉಂಟಾಗಿರಬಹುದು ಎಂಬುದು ಸ್ಥಳೀಯರು ಅಂದಾಜಿಸಿದ್ದಾರೆ.
    ಗ್ರಾಮಸ್ಥರಲ್ಲಿ ಆತಂಕ: ಭೂ ಕುಸಿತದಿಂದ ಕೊಂಕಿಕೋಟೆ ಅರಣ್ಯಕ್ಕೆ ತಾಗಿಕೊಂಡು ಹತ್ತಿರದಲ್ಲಿ ಗದ್ದೆಹಳ್ಳಿ, ಬಾಳಗಿಮನೆ, ಸಮ್ರಳ್ಳಿ, ಕೊಂಕಿಕೋಟೆ, ಗುಡ್ಡದ ಕೆಳಭಾಗದಲ್ಲಿನ ಹೊನ್ನೆಹಕ್ಲು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪರಿಸರಕ್ಕೆ ಧಕ್ಕೆ ತರಬಹುದಾದ ಚಟುವಟಿಕೆಯಿಂದ ದೂರವಿದ್ದ ಕಾಡಿನಲ್ಲಿ ಭೂಮಿ ಕೊಚ್ಚಿಕೊಂಡು ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ. ಬೆಳಕು ಕಾಣದ ದಟ್ಟ ಕಾಡಿನಲ್ಲಿ ಎಕರೆಗಟ್ಟಲೆ ಪ್ರದೇಶ ಬಯಲಾಗಿ ಮಾರ್ಪಟ್ಟಿರುವ ಜತೆ ಭೂಕುಸಿತಕ್ಕೆ ನಿಖರ ಕಾರಣ ತಿಳಿಯದಿರುವುದು ಇದಕ್ಕೆ ಕಾರಣವಾಗಿದೆ.


    ಐತಿಹಾಸಿಕ ಮೂಲದ ಕೊಂಕಿಕೋಟೆ ಪ್ರದೇಶ ಗ್ರಾಮಸ್ಥರ ಜತೆ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣ. ಆದರೆ, ಈಗ ಕೋಟೆಗೆ ತೆರಳಲು ಭಯವಾಗುವ ವಾತಾವರಣವಿದೆ. ಕೋಟೆ ಇರುವ ಗುಡ್ಡದ ಒಂದು ಪಾರ್ಶ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಈ ಹಿಂದೆ ಇದ್ದ ಪುಟ್ಟ ಝುರಿ ಭೂಕುಸಿತದಿಂದ ನದಿಯ ಗಾತ್ರಕ್ಕೆ ಹಿಗ್ಗಿದೆ. ಘಟನೆ ಮರುಕಳಿಸಿದರೆ ಸಮೀಪದ ಗ್ರಾಮಗಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಜತೆ, ಸೋದೆ ಅರಸರ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಕೋಟೆಗೂ ಕುತ್ತಾಗುವ ಸಾಧ್ಯತೆಯಿದೆ.
    | ಲಕ್ಷ್ಮೀಕಾಂತ ಹೆಗಡೆ ಗದ್ದೆಹಳ್ಳಿ- ಸ್ಥಳೀಯ


    ಕೊಂಕಿಕೋಟೆ ಸೋದೆ ಅರಸ ಮಧುಲಿಂಗ ನಾಯಕನ ನಿರ್ವಣವಾಗಿದೆ. ಇದೊಂದು ಗಿರಿದುರ್ಗವಾಗಿದ್ದು ಇದನ್ನು ಮಧುಲಿಂಗನಾಯಕನು 16ನೇ ಶತಮಾನದಲ್ಲಿ ನಿರ್ವಿುಸಿದ್ದ. ಇದು ಸೋದೆ ಅರಸರ ಅಡಗುತಾಣವಾಗಿತ್ತು. ಪ್ರಸ್ತುತ ಇದರ ಕೆಳ ಭಾಗ ಕುಸಿತ ಕಂಡದ್ದು ಬೇಸರ ಮೂಡಿಸಿದೆ. ಆ ಕಾಲದ ಅಂತರ್ಗತ ನಿರ್ಮಾಣ ಇದರ ಕುಸಿತಕ್ಕೊಂದು ಕಾರಣ ಇರಬಹುದಾಗಿದೆ.
    – ಲಕ್ಷ್ಮೀಶ ಸೋಂದಾ- ಇತಿಹಾಸ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts