More

    ಕೈ ಹಿಡಿಯುತ್ತಾ ಹಿಂಗಾರು?

    ನವಲಗುಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆಗಳು ನಳನಳಿಸುತ್ತಿವೆ. ಆದರೆ, ಕೆಲವೆಡೆ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿದೆ. ಇನ್ನು ಹಿಂಗಾರು ಹಂಗಾಮಿನ ಬೆಳೆಗಳಾದರೂ ಕೈ ಹಿಡಿಯಲಿ ಎಂಬ ನಿರೀಕ್ಷೆಯಿಂದ ರೈತರು ಬಿತ್ತನೆಗೆ ಮುಂದಾಗಿದ್ದಾರೆ.

    ತಾಲೂಕಿನಲ್ಲಿ ವಾಡಿಕೆಯಂತೆ ಅಕ್ಟೋಬರ್​ನಲ್ಲಿ 538 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, ಅ. 8ರವರೆಗೆ 664 ಮಿ.ಮೀ. ಮಳೆಯಾಗಿದೆ. ಹೀಗಾಗಿ ಹಿಂಗಾರು ಬಿತ್ತನೆಗೆ ತೇವಾಂಶ ಕೊರತೆಯಿಲ್ಲ. ಮುಂಗಾರಿನಲ್ಲಿ ಬೆಳೆದ ಹೆಸರು, ಉಳ್ಳಾಗಡ್ಡಿ (ಒಂದೇ ಬೆಳೆ), ಗೆಜ್ಜೆ ಶೇಂಗಾ ಮೊದಲಾದ ಬೆಳೆಗಳು ಕಟಾವುಗೊಂಡಿದ್ದು, ಇನ್ನೂ ಕೆಲವೆಡೆ ಬೆಳೆಗಳ ಕಟಾವು ಕಾರ್ಯ ಬಾಕಿ ಇದೆ. ಈಗಾಗಲೇ ಬೆಳೆ ತೆಗೆದ ಹಾಗೂ ಹಿಂಗಾರಿಗಾಗಿ ಖಾಲಿ ಬಿಟ್ಟ ಹೊಲಗಳನ್ನು ಹದಗೊಳಿಸಿ ಬಿತ್ತನೆ ಮಾಡಲಾಗುತ್ತಿದೆ.

    ತಾಲೂಕಿನ ರೈತರು ಹಿಂಗಾರಿನಲ್ಲಿ ಕಡಲೆ, ಜೋಳ, ಕುಸುಬಿ, ಸೂರ್ಯಕಾಂತಿ ಮತ್ತಿತರ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ. ಅವರ ಬೇಡಿಕೆಗೆ ತಕ್ಕಂತೆ ಕೃಷಿ ಇಲಾಖೆ ತಾಲೂಕಿನ ಮೊರಬ ಹೋಬಳಿ, ನವಲಗುಂದ ಉಪ ಕೇಂದ್ರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ.

    ತಾಲೂಕಿನಲ್ಲಿ 22,792 ಹೆಕ್ಟೇರ್ ನೀರಾವರಿ, 54915 ಹೆಕ್ಟೇರ್ ಒಣಬೇಸಾಯ ಸೇರಿ 77,915 ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ಈ ಪೈಕಿ 9,349 ಹೆಕ್ಟೇರ್ ಜೋಳ, 35,495 ಹೆಕ್ಟೇರ್ ಕಡಲೆ, 5,723 ಹೆಕ್ಟೇರ್ ಕುಸುಬಿ, 5,304 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಲಾಗಿದೆ. ಮೊರಬ ಹೋಬಳಿಯಲ್ಲಿ 4,426 ಅತೀ ಸಣ್ಣ, 8,012 ಸಣ್ಣ, 8,690 ದೊಡ್ಡ ಹಿಡುವಳಿ ರೈತರಿದ್ದಾರೆ.

    ದಾಸ್ತಾನಿರುವ ಬೀಜಗಳೆಷ್ಟು?: ಕೃಷಿ ಇಲಾಖೆ ಅಧಿಕಾರಿಗಳು ಮೊರಬ ಹೋಬಳಿ ಹಾಗೂ ನವಲಗುಂದ ಉಪ ಕೇಂದ್ರದ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 800 ಕ್ವಿಂಟಾಲ್ ಕಡಲೆ, 30 ಕ್ವಿಂಟಾಲ್ ಜೋಳ, 3 ಕ್ವಿಂಟಾಲ್ ಕುಸುಬಿ ದಾಸ್ತಾನು ಮಾಡಿದ್ದಾರೆ. ಸರ್ಕಾರದ ಸಹಾಯಧನದಲ್ಲಿ ಕಡಲೆ 20 ಕೆಜಿ ಪ್ಯಾಕೆಟ್​ಗೆ 900 ರೂ., ಜೋಳ 3 ಕೆಜಿ ಪ್ಯಾಕೆಟ್​ಗೆ 111 ರೂ., ಕುಸುಬಿ 5 ಕೆಜಿ ಪ್ಯಾಕೆಟ್​ಗೆ 192.50 ರೂ. ದರವಿದೆ.

    ಈ ವರ್ಷ ಅತಿಯಾದ ಮಳೆಯಿಂದ ವಿಪರೀತ ಕಳೆ ಬಂದಿದ್ದು, ಹಿಂಗಾರಿನ ಬಿತ್ತನೆಗೆ ಕಷ್ಟವಾಗುತ್ತಿದೆ. ಹೊಲ ಪಾಳು ಬಿದ್ದರೆ ಬದುಕು ಸಾಗಿಸುವುದು ಕಷ್ಟ. ಹೇಗಾದರೂ ಮಾಡಿ ಹೊಲ ಹಸನುಗೊಳಿಸಿ ಕಡಲೆ ಬೀಜ ಬಿತ್ತುತ್ತಿದ್ದೇವೆ. ಹೊಲದಲ್ಲಿ ತೇವಾಂಶ ಸಾಕಷ್ಟಿದ್ದು, ಬಿತ್ತನೆ ಮಾಡಲು ಹುಮ್ಮಸ್ಸು ಬಂದಿದೆ. ಕೃಷಿ ಇಲಾಖೆಯವರು ಎಲ್ಲ ರೈತರಿಗೂ ಸಹಾಯಧನದಲ್ಲಿ ಬೀಜ ಪೂರೈಸಿದರೆ ಅನುಕೂಲವಾಗುತ್ತದೆ.

    | ಮಡಿವಾಳಪ್ಪ ಕೊಳಲಿನ , ನವಲಗುಂದ ರೈತ

    ಈ ಬಾರಿ ಮುಂಗಾರಿನಲ್ಲಿ ಮಳೆ ಚೆನ್ನಾಗಿ ಆಗಿದ್ದರಿಂದ ಹಿಂಗಾರು ಬಿತ್ತನೆಗೆ ಹೆಚ್ಚಿನ ತೇವಾಂಶವಿದೆ. ಹೀಗಾಗಿ ಪ್ರತಿವರ್ಷಕ್ಕಿಂತಲೂ ಈ ವರ್ಷ ಚೆನ್ನಾಗಿ ಬಿತ್ತನೆ ಕಾರ್ಯ ನಡೆಯುತ್ತದೆ. ಕೃಷಿ ಇಲಾಖೆ ಎಲ್ಲ ಬೀಜಗಳನ್ನು ಸಂಗ್ರಹಿಸಿಕೊಂಡಿದೆ. ರೈತರಿಗೆ ಬೀಜದ ಕೊರತೆಯಾಗದಂತೆ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. ರೈತರು ಬೀಜಕ್ಕಾಗಿ ಮುಗಿಬಿದ್ದು ಗದ್ದಲ, ಗಲಾಟೆ ಮಾಡದೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು.

    | ಶ್ರೀನಾಥ ಚಿಮ್ಮಲಗಿ ಕೃಷಿ ಇಲಾಖೆ ನವಲಗುಂದ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts