More

    ಕೈ ಪಾಳಯದಲ್ಲಿ ಅಸಮಾಧಾನ ಸ್ಫೋಟ

    ಯಲ್ಲಾಪುರ: ಯಲ್ಲಾಪುರ ಬ್ಲಾಕ್ ಕಾಂಗ್ರೆಸ್​ಗೆ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಕಾಏಕಿ ಹಿಂದಿನ ಅಧ್ಯಕ್ಷರ ರಾಜೀನಾಮೆ ಪಡೆದು, ಹೊಸ ಅಧ್ಯಕ್ಷರ ನೇಮಕ ಮಾಡಿ, ಪದಗ್ರಹಣವೂ ನಡೆದಿರುವ ಕುರಿತು ಅಸಮಾಧಾನ ಸ್ಪೋಟಗೊಂಡಿದೆ.

    16 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಎನ್. ಗಾಂವ್ಕಾರ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಹೊಸದಾಗಿ ವಿ.ಎಸ್. ಭಟ್ಟ ಅವರನ್ನು ಅಧ್ಯಕ್ಷರಾಗಿ ಘೊಷಿಸಿ, ಎರಡು ದಿನಗಳ ಹಿಂದೆ ಪದ ಗ್ರಹಣವನ್ನೂ ಮಾಡಲಾಗಿದೆ. ವಿಚಿತ್ರ ವೆಂದರೆ ನೂತನ ಅಧ್ಯಕ್ಷರಿಗೆ 2021ರ ಅಕ್ಟೋಬರ್ 15ರಂದೇ ನೇಮಕದ ಆದೇಶ ನೀಡಲಾಗಿದೆ. ಡಿ.ಎನ್. ಗಾಂವ್ಕಾರ 2022ರ ಜನವರಿ 30ರಂದು ರಾಜೀನಾಮೆ ನೀಡಿದ್ದಾರೆ. ಮೂರು ತಿಂಗಳವರೆಗೂ ಹೊಸ ಅಧ್ಯಕ್ಷರ ನೇಮಕ ಗುಟ್ಟಾಗಿ ಇಟ್ಟಿದ್ದೇಕೆ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

    ಸಾಮಾನ್ಯವಾಗಿ ಇರುವ ಅಧ್ಯಕ್ಷರ ಸ್ಥಾನ ತೆರವಾದ ನಂತರ ಹೊಸ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಆದರೆ, ಇಲ್ಲಿ ಹೊಸ ಅಧ್ಯಕ್ಷರ ನೇಮಕವಾಗಿ ಮೂರು ತಿಂಗಳ ನಂತರ ಹಾಲಿ ಅಧ್ಯಕ್ಷರ ರಾಜೀನಾಮೆ ಪಡೆಯಲಾಗಿದೆ. ಗಾಂವ್ಕಾರ ಅವರ ರಾಜೀನಾಮೆ ಪಡೆದ ನಂತರ ನೂತನ ಅಧ್ಯಕ್ಷರ ನೇಮಕದ ಆದೇಶವನ್ನು ಹಳೆಯ ದಿನಾಂಕ ನಮೂದಿಸಿ ಮಾಡಿರಬಹುದೇ ಎಂದು ಕಾರ್ಯಕರ್ತರಲ್ಲಿ ಚರ್ಚೆ ನಡೆಯುತ್ತಿದೆ. ಹಿಂದಿನ ಅಧ್ಯಕ್ಷ ಗಾಂವ್ಕಾರ್ ಕಳೆದ ಒಂದು ವರ್ಷದಿಂದಲೂ ಅಧ್ಯಕ್ಷ ಸ್ಥಾನ ಬಿಡುವ ವಿಷಯವನ್ನು ವರಿಷ್ಠರ ಗಮನಕ್ಕೆ ತರುತ್ತಲೇ ಇದ್ದರು. ಸದ್ಯ ಮುಂದುವರಿಯಿರಿ ಎಂದು ಹಿರಿಯರೇ ಹೇಳಿದ್ದರಿಂದ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದರು. ಹೊಸ ಅಧ್ಯಕ್ಷರನ್ನು ನೇಮಿಸುವ ಮುನ್ನ ಹಳೇ ಅಧ್ಯಕ್ಷರನ್ನು ಸ್ಥಾನದಿಂದ ತೆಗೆಯಲಾಗಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ತಾವಾಗಿಯೇ ಸ್ಥಾನ ಬಿಡಲು ಸಿದ್ಧರಾದವರನ್ನು ಏಕಾಏಕಿ ತೆಗೆದು ಹಾಕಿ, ಹೊಸ ಅಧ್ಯಕ್ಷರ ನೇಮಕ ಮಾಡಿದ್ದೇಕೆ? ಸ್ಥಾನದಿಂದ ಅವರನ್ನು ತೆಗೆದು ಮೂರು ತಿಂಗಳ ನಂತರ ರಾಜೀನಾಮೆ ಪಡೆದಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಾಗಿದೆ.

    ಹೊಸ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವೂ ಹೆಚ್ಚಿನ ಕಾರ್ಯಕರ್ತರ, ಮುಖಂಡರ ಗಮನಕ್ಕೆ ಬಾರದೆ ನಡೆದಿದೆ. ತಾಲೂಕಿನ 9ಕ್ಕೂ ಹೆಚ್ಚು ಗ್ರಾಮೀಣ ಘಟಕಗಳ ಅಧ್ಯಕ್ಷರೇ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲು ನಿಕಟಪೂರ್ವ ಅಧ್ಯಕ್ಷರಾಗಲಿ, ಜಿಲ್ಲಾಧ್ಯಕ್ಷರಾಗಲಿ ಬಂದಿರಲಿಲ್ಲ. ಹಾಗಾಗಿ ಅಧ್ಯಕ್ಷರ ಪದಗ್ರಹಣ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆದಿದೆ ಎಂದು ಚರ್ಚೆಯಾಗುತ್ತಿದೆ.

    ಹಿರಿಯ ಕಾರ್ಯಕರ್ತರ ಆತಂಕ: ಕಾಂಗ್ರೆಸ್​ನಲ್ಲಿನ ಈ ಗೊಂದಲದ ವಿರುದ್ಧ ಹಿರಿಯ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್​ಗೆ ಸಂಬಂಧಿಸಿದ ವಾಟ್ಸ ಆಪ್ ಗ್ರುಪ್​ಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹಲವು ವರ್ಷಗಳಿಂದ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಾಏಕಿ ಹೊಸ ಅಧ್ಯಕ್ಷರ ನೇಮಕ ಮಾಡಿದ್ದಾರೆ. ಈ ರೀತಿ ಪಕ್ಷದೊಳಗೇ ಭಿನ್ನಮತ ಹೆಚ್ಚಾದರೆ ಪಕ್ಷ ಇನ್ನಷ್ಟು ಅಧೋಗತಿಗೆ ಹೋಗಲಿದೆ ಎಂಬ ಆತಂಕವನ್ನು ಹಿರಿಯ ಮುಖಂಡರು ಜಾಲತಾಣಗಳಲ್ಲಿ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್​ನಿಂದ ಎರಡು ಬಾರಿ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗ ಅನೇಕರು ಅವರೊಂದಿಗೆ ಬಿಜೆಪಿ ಸೇರಿದ್ದಾರೆ. ಅದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ಕುಗ್ಗಿ ಹೋಗಿದ್ದು, ಇನ್ನೇನು ಸ್ವಲ್ಪ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಈ ರೀತಿ ಗೊಂದಲ ಶುರುವಾಗಿದೆ. ಬಿಜೆಪಿಗೆ ವಿರೋಧಿಗಳೇ ಇಲ್ಲದಂತಾಗಲು, ಬಿಜೆಪಿ ಅನಾಯಾಸವಾಗಿ ಬೆಳೆಯಲು ನಾವೇ ಕಾರಣರಾಗುತ್ತಿದ್ದೇವೆ. ಸಾರ್ವಜನಿಕವಾಗಿ ಮುಜುಗರ ಉಂಟಾಗುವಂತಾಗಿದೆ ಎಂಬ ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ.

    ಜಿಲ್ಲಾಧ್ಯಕ್ಷರಿಗೂ ಇಲ್ಲ ಪದಗ್ರಹಣ ಕಾರ್ಯಕ್ರಮ ಮಾಹಿತಿ !

    ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಕುರಿತು ಸ್ವತಃ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಅವರಿಗೆ ಮಾಹಿತಿ ಇಲ್ಲ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ನೂತನ ಅಧ್ಯಕ್ಷರ ಹೆಸರು ಘೊಷಣೆಯಾದದ್ದು ಮಾತ್ರ ಗೊತ್ತು. ಪದಗ್ರಹಣ ಕಾರ್ಯಕ್ರಮದ ಕುರಿತು ಮಾಹಿತಿಯೂ ಇಲ್ಲ, ಆಹ್ವಾನವೂ ಇರಲಿಲ್ಲ ಎಂದಿದ್ದಾರೆ. ಯುವ ಮುಖಂಡ ಪ್ರಶಾಂತ ದೇಶಪಾಂಡೆ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಯಾರೂ ಭಾಗವಹಿಸಿರಲಿಲ್ಲ.

    ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷರ ನೇಮಕವಾದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಿಂದಿನ ವಾರ ನೂತನ ಅಧ್ಯಕ್ಷರ ಹೆಸರು ಘೊಷಣೆಯಾದ ವಿಚಾರ ತಿಳಿದಿದೆ. ಅನಗತ್ಯವಾಗಿ ಗೊಂದಲ ಮಾಡಿಕೊಳ್ಳದೆ ಪಕ್ಷಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗುವುದು ಒಳ್ಳೆಯದು.

    | ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಪಕ್ಷದಲ್ಲಿ 17 ವರ್ಷಗಳ ಕಾಲ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಅಕ್ಟೋಬರ್ ತಿಂಗಳಲ್ಲೇ ನನ್ನನ್ನು ತೆಗೆದು ಹೊಸ ಅಧ್ಯಕ್ಷರ ನೇಮಕವಾದ ವಿಚಾರ ತಿಳಿದಿರಲಿಲ್ಲ. ಜನವರಿ 30 ರಂದು ಪಕ್ಷದ ಹಿರಿಯರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

    | ಡಿ.ಎನ್. ಗಾಂವ್ಕಾರ

    ನಿಕಟಪೂರ್ವ ಅಧ್ಯಕ್ಷ

    ಹಿಂದಿನ ಅಧ್ಯಕ್ಷ ಡಿ.ಎನ್. ಗಾಂವ್ಕಾರ ಅವರ ಪಕ್ಷನಿಷ್ಠೆ ಹಾಗೂ ಕಾರ್ಯಗಳು ನನಗೆ ಆದರ್ಶವಾಗಿವೆ. ಪಕ್ಷದ ಹಿರಿಯರು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತ ಪಕ್ಷ ಸಂಘಟನೆಯತ್ತ ಗಮನ ಹರಿಸುತ್ತೇನೆ.

    | ವಿ.ಎಸ್. ಭಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts