More

    ಕೈಗಾರಿಕ ಹಬ್‌ಗೆ ಜಮೀನು ವಿಕ್ಷಣೆ

    ಕೆಜಿಎಫ್: ಕೆಜಿಎಫ್ ನಗರದಲ್ಲಿ ಕೈಗಾರಿಕ ಹಬ್ ನಿರ್ಮಿಸಲು ಉದ್ದೇಶಿಸಲಾಗಿರುವ ಜಮೀನುಗಳನ್ನು ಸೋಮವಾರ ಜಿಲ್ಲಾಧಿಕಾರಿ ಸೆಲ್ವಮಣಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಬಿಇಎಂಎಲ್ ಕಾರ್ಖಾನೆ ಹಾಗೂ ಬಿಜಿಎಂಎಲ್ ಕಾರ್ಖಾನೆಯ ಆಡಳಿತ ಮಂಡಳಿ ಬಳಕೆ ಮಾಡದ 970 ಎಕರೆ ಜಮೀನು ಲಭ್ಯವಿದೆ. ಕೆಜಿಎಫ್ ನಗರ ಬೆಂಗಳೂರು ನಗರದ ಸಮೀಪವೇ ಇರುವುದರಿಂದ ಈ ಭಾಗದಲ್ಲಿ ಕೈಗಾರಿಕೆ ಸ್ಪಾಪನೆ ಮಾಡುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಹಾಗೂ ಕೈಗಾರಿಕೆ ಸಚಿವರಿಗೆ ಶಾಸಕಿ ರೂಪಕಲಾ ವಿಧಾನಸಭೆ ಕಲಾಪದಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು.

    ಈ ಬಗ್ಗೆ ಪರಿಶೀಲನೆ ನಡೆಸಲು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಲಭ್ಯವಿರುವ ಜಮೀನಿನ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಸೆಲ್ವಮಣಿ ಭೇಟಿ ನೀಡಿ ಬಿಇಎಂಎಲ್ ಅಥಿತಿ ಗೃಹದಲ್ಲಿ ಬಿಇಎಂಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಲಭ್ಯವಿರುವ ಜಮೀನಿನ ನಕ್ಷೆಯೊಂದಿಗೆ 5 ಬ್ಲಾಕ್‌ಗಳಿಗೆ ಭೇಟಿ ನೀಡಿ ಕೈಗಾರಿಕೆ ಸ್ಥಾಪನೆ ಮಾಡಲು ಗುರುತಿಸಲಾಗಿರುವ ಅಜ್ಜಪಲ್ಲಿ ಸುತ್ತಮುತ್ತ ಹಾಗೂ ಇತರ ಜಮೀನುಗಳ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಲಭ್ಯವಿರುವ ಜಮೀನುಗಳ ವಿವರ ಪಡೆಯಲಾಗಿದ್ದು, ಕೆಐಯುಡಿಎ ಇಲಾಖೆಗೆ ಜಮೀನು ಹಸ್ತಾಂತರ ಮಾಡಲಾಗುವುದು. ಕೆಐಯುಡಿಎನಿಂದ ಜಮೀನು ಅಭಿವೃದ್ಧಿ ಪಡಿಸಿ ಕೈಗಾರಿಕೆ ಸ್ಥಾಪನೆ ಮಾಡಲು ಕ್ರಮವಹಿಸಲಾಗುವುದು ಎಂದರು.

    ಬಿಇಎಂಎಲ್ ಮೆಡಿಕಲ್ ಸೆಂಟರ್‌ಗೆ ಭೇಟಿ: ಬಿಇಎಂಎಲ್ ಮೆಡಿಕಲ್ ಸೆಂಟರ್‌ಗೆ ಭೇಟಿ ನೀಡಿದ ಡಿಸಿ ಉತ್ತಮ ವಾತಾವರಣದಲ್ಲಿ ಮೆಡಿಕಲ್ ಸೆಂಟರ್ ನಿರ್ಮಿಸಲಾಗಿದೆ. ಬಿಇಎಂಎಲ್ ಕಾರ್ಮಿಕರಿಗೆ ವ್ಯಾಕ್ಸಿನ್ ಹಾಕುವುದಾದರೆ ಉಚಿತ ವ್ಯಾಕ್ಸಿನ್ ಸರಬರಾಜು ಮಾಡಲಾಗುವುದು. ಪ್ರಥಮ ಹಂತದಲ್ಲಿ ಬಿಇಎಂಎಲ್ ಹಾಗೂ ಕುಟುಂಬ ವರ್ಗದವರಿಗೆ ವ್ಯಾಕ್ಸಿನ್ ಹಾಕಿ ಅಗತ್ಯವಾಗಿ ಬೇಕಾದ ಔಷಧ ಸರಬರಾಜು ಮಾಡಲಾಗುವುದು ಎಂದರು. ಬಿಇಎಂಎಲ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಇತರರು ಇದ್ದರು.

    ತಾಲೂಕು ಕಚೇರಿಗೆ ಭೇಟಿ: ಜಮೀನುಗಳ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು ನೇರವಾಗಿ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಮಾಹಿತಿ ಪಡೆದು ಸಾರ್ವಜನಿಕರ ಕೆಲಸ ಮಾಡಿಕೊಡುವ ಸಂದರ್ಭದಲ್ಲಿ ವಿನಾಕಾರಣವಾಗಿ ನಾಗರಿಕರನ್ನು ಕಚೇರಿಗೆ ಅಲೆದಾಡಿಸದೆ ಕಡತಗಳ ವಿಲೇ ಮಾಡಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts