More

    ಕೈಗಾರಿಕೆಗಳಿಗೆ ರಾಜ್ಯ ಬಜೆಟ್ ಬೆಂಬಲಿಸಲಿ: ಸುರೇಶ್ ಕುಮಾರ್ ಜೈನ್

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಯೋಜನೆ, ರಿಯಾಯಿತಿ ಘೋಷಣೆ ಮಾಡುವಂತೆ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಪರವಾಗಿ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಮನವಿ ಮಾಡಿದ್ದಾರೆ.
    ಈ ಬಗ್ಗೆ ಸಿಎಂಗೆ ಶನಿವಾರ ಮನವಿ ಪತ್ರ ಬರೆದಿರುವ ಜೈನ್, 2003ರ ನಗರಸಭೆ ಕಾಯ್ದೆ ಅನ್ವಯ 100 ಕೋಟಿ ರೂಪಾಯಿ ಅನುದಾನ ಸಹಿತ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಬೇಕು. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕಾ ಆಸ್ತಿ ತೆರಿಗೆ ಏಕ ರೂಪವಾಗಿ ವಾಣಿಜ್ಯ ಆಸ್ತಿ ತೆರಿಗೆಗಿಂತ ಶೇ.50ಕ್ಕಿಂತ ಕಡಿಮೆ ದರ ನಿರ್ಧರಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ವಸೂಲಾದ ತೆರಿಗೆಯ ಶೇ.80ರಷ್ಟನ್ನು ಕೈಗಾರಿಕಾ ಪ್ರದೇಶಗಳ ಸೌಲಭ್ಯಗಳಿಗಾಗಿ ಬಳಕೆ ಮಾಡಲು ಕಾಯಿದೆ ತಿದ್ದಪಡಿಯಾಗಬೇಕು ಎಂದು ಕೋರಿದ್ದಾರೆ.
    ಹಾಲಿ ಇರುವ ವಿದ್ಯುತ್ ಬಳಕೆ ದರದ ಮೇಲಿನ ತೆರಿಗೆಯನ್ನು ಶೇ. 9ರಿಂದ ಶೇ. 2ಕ್ಕೆ ಇಳಿಸುವುದರ ಮೂಲಕ ಎಲ್ಲ ಗ್ರಾಹಕರ ನೆರವಿಗೆ ರಾಜ್ಯ ಸರ್ಕಾರ ಬರಬೇಕು, ಪ್ರಸ್ತುತ ಗೃಹ ಜ್ಯೋತಿ ಯೋಜನೆಯ ಶೇ. 97 ಗ್ರಾಹಕರಿಗೆ ಸರ್ಕಾರ ಎಸ್ಕಾಂ ಗಳಿಗೆ ಸಹಾಯಧನ ನೀಡುವುದರಿಂದ ಸರ್ಕಾರಕ್ಕೆ ಈ ತೆರಿಗೆ ಕಡಿತ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
    ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಶೇ.50 ರಿಯಾಯತಿ ದರದಲ್ಲಿ ಕೈಗಾರಿಕಾ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು, ಕೈಗಾರಿಕಾ ಕ್ಲಸ್ಟರ್‌ಗಳ ಸಾಮಾನ್ಯ ಸೌಲಭ್ಯ ಕೇಂದ್ರದ ನಿವೇಶನವನ್ನು ಸರ್ಕಾರ ಉಚಿತವಾಗಿ ನೀಡಬೇಕು. ಮೈಸೂರು ರಫ್ತು ಕೇಂದ್ರಕ್ಕೆ ರಾಜ್ಯ ಸರ್ಕಾರದ ಪಾಲಿನ 5 ಕೋಟಿ ರೂ. ಅನುದಾನ ಸಹಿತ ಕಟ್ಟಡ ನಿರ್ಮಾಣ ಕಾರ್ಯ ಪುನರಾರಂಭಿಸಲು ಮರು ಟೆಂಡರ್ ನೀಡಬೇಕು ಎಂದು ಮನವಿ ಮಾಡಿದ್ದಾರೆ.
    ಕೈಗಾರಿಕಾ ಪೂರಕ ನಿಗಮ, ಮಂಡಳಿ ಮತ್ತು ಕಾರ್ಪೊರೇಷನ್‌ಗಳಲ್ಲಿ ಕೈಗಾರಿಕಾ ಸಂಘಟನೆ ಗಳ ಪ್ರತಿನಿಧಿಗಳನ್ನು ಮಾತ್ರ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಬೇಕು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಉದ್ಯಮ ,ಕೈಗಾರಿಕಾ ಯೋಜನೆ ಅನುಮೋದನೆ ಉಪ ಸಮಿತಿ ಮತ್ತು ಏಕ ಗವಾಕ್ಷಿ ಸಮಿತಿಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಕೋರಿದ್ದಾರೆ.
    ಸ್ಥಳೀಯ, ವಲಸೆ ಕಾರ್ಮಿಕರು, ದಿನಕೂಲಿ ಕಾರ್ಮಿಕರು ಒಳಗೊಂಡಂತೆ ಎಲ್ಲ ವರ್ಗದ ಕಾರ್ಮಿಕರಿಗೂ ಆಧಾರ್ ಜೋಡಿತ ಗುರುತಿನ ಚೀಟಿ ಮತ್ತು ಕಾರ್ಮಿಕ ಸೌಲಭ್ಯ ವಿತರಣೆ, ಕೈಗಾರಿಕಾ ಪ್ರದೇಶದಲ್ಲಿನ ಕೆರೆ , ರಾಜ ಕಾಲುವೆ ಅಭಿವೃದ್ಧಿ, ಬೇಲಿ ಅಳವಡಿಸಬೇಕು, ಕನಿಷ್ಠ 20 ಎಕರೆ ಟ್ರಕ್ ಟರ್ಮಿನಲ್ ಆಭಿವೃದ್ಧಿ ಮತ್ತು 10 ಎಕರೆ ಕೈಗಾರಿಕಾ ತ್ಯಾಜ್ಯ ವಿಂಗಡನೆ, ವಿಲೇವಾರಿ ಕೇಂದ್ರ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts