More

    ಕೆಸಿಸಿ ಬ್ಯಾಂಕ್ ಅಧ್ಯಕ್ಷ ಗದ್ದುಗೆಗೆ ಚುನಾವಣೆ

    ವಿಕ್ರಮ ನಾಡಿಗೇರ ಧಾರವಾಡ

    ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ (ಕೆಸಿಸಿ)ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ರಾಜೀನಾಮೆ ನೀಡಿದ್ದರಿಂದ ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಿರ್ದೇಶಕರು ತೆರೆಮರೆಯಲ್ಲೇ ಕಸರತ್ತು ನಡೆಸಿದ್ದಾರೆ.

    ವಿಭಜನಾಪೂರ್ವ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 11 ಜನ ಸೇರಿ ಒಟ್ಟು 20 ನಿರ್ದೇಶಕರಿದ್ದಾರೆ. ಬಾಪುಗೌಡರ ಪೂರ್ವದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಐ.ಎಸ್. ಪಾಟೀಲ ಅಧ್ಯಕ್ಷರಾಗಿದ್ದರು. 2018ರ ಚುನಾವಣೆ ಬಳಿಕ ಬಿಜೆಪಿ ಬೆಂಬಲಿತರಿಗೇ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಮಾತಿತ್ತು. ಆದರೆ, ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಾಪುಗೌಡ ಪಾಟೀಲ ಕೊನೇ ಘಳಿಗೆಯಲ್ಲಿ ಕಾಂಗ್ರೆಸ್​ಗೆ ಸೇರಿ ಅಧ್ಯಕ್ಷ ಗದ್ದುಗೆ ಏರಿ ಬಿಜೆಪಿಗೆ ನಿರಾಸೆ ಮೂಡಿಸಿದ್ದರು.

    2018ರಲ್ಲಿ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನವಲಗುಂದ ತಾಲೂಕು ಪ್ರತಿನಿಧಿಸಿ ಬಾಪುಗೌಡ ಪಾಟೀಲ ಕೆಸಿಸಿ ಬ್ಯಾಂಕ್​ಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆ ಆಗಿದ್ದರು. ಬಳಿಕ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿರ್ದೇಶಕರ ಸಹಕಾರದಿಂದ 2018ರ ನ. 9ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ನಡೆದ ಮಾತುಕತೆಯಂತೆ 30 ತಿಂಗಳ ಅವಧಿ ಬಳಿಕ ಮೇ 10ರಂದು ರಾಜೀನಾಮೆ ನೀಡಿದ್ದಾರೆ.

    ಹೀಗಾಗಿ ಮುಂದಿನ 30 ತಿಂಗಳ ಅವಧಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಜೂ. 18ರಂದು ದಿನಾಂಕ ನಿಗದಿಪಡಿಸಲಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೇರಲು ಆಕಾಂಕ್ಷಿ ನಿರ್ದೇಶಕರು ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಜಿ.ಪಿ. ಪಾಟೀಲ ಹಾಗೂ ಬಿಜೆಪಿ ಬೆಂಬಲಿತ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಜಿ.ಪಿ. ಪಾಟೀಲ ಅವರು ಹಿರಿಯ ಸಹಕಾರಿ ಧುರೀಣರು ಆಗಿರುವುದರಿಂದ ಅವರತ್ತ ಹೆಚ್ಚಿನ ಒಲವಿದೆ. ಅಲ್ಲದೆ, ಇವರ ತಂದೆ ಪಿ.ಎಲ್. ಪಾಟೀಲ ಅವರು ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಇನ್ನು ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಹೊರಕೇರಿ ಅವರಿಗೆ ಕೊನೆ ಕ್ಷಣದಲ್ಲಿ ಅಧಿಕಾರ ಕೈ ತಪ್ಪಿತ್ತು. ಹೀಗಾಗಿ, ಈ ಬಾರಿ ಹೇಗಾದರೂ ಅಧ್ಯಕ್ಷ ಸ್ಥಾನಕ್ಕೆ ಏರಲೇಬೇಕು ಎಂದು ಅವರು ಪ್ರಯತ್ನ ನಡೆಸಿದ್ದಾರೆ. ಪೈಪೋಟಿಯಲ್ಲಿರುವ ಆಕಾಂಕ್ಷಿಗಳನ್ನು ಬಿಟ್ಟು ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

    ಅವಿರೋಧ ಆಯ್ಕೆಗೆ ಯತ್ನ
    ನಿಯಮ ಪ್ರಕಾರ ಜೂ. 18ರಂದು ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಿರಿಯರು, ಎಲ್ಲ ನಿರ್ದೇಶಕರು ಜೂ. 17ರಂದು ಸಭೆ ನಡೆಸಲು ತೀರ್ವನಿಸಿದ್ದಾರೆ. ಈ ಸಭೆಯಲ್ಲಿ ಹಿರಿಯರ ಸಲಹೆ, ಸೂಚನೆ ಪಡೆದು ಒಮ್ಮತದ ಅಭ್ಯರ್ಥಿ ಹಾಗೂ ಅವಿರೋಧ ಆಯ್ಕೆ ಬಗ್ಗೆ ರ್ಚಚಿಸಲಿದ್ದಾರೆ. ಈ ಸಭೆ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts