More

    ಕೆಸರು ಗದ್ದೆಯಂತಾದ ತೋಟದ ರಸ್ತೆ ಬೆಳಗಾವಿ

    ಮೋಹನ ಪಾಟಣಕರ ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಸ್ತೆ ತುಂಬ ತಗ್ಗು-ಗುಂಡಿ ಸೃಷ್ಟಿಯಾಗಿ ವಾಹನ ಸವಾರರು ಹಾಗೂ ತೋಟದ ವಸತಿ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ.

    ವಾರದಿಂದ ಅಥಣಿ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ನಂದಗಾಂವ ಗ್ರಾಮದಿಂದ ಸವದಿ, ಘಟನಟ್ಟಿ ಗ್ರಾಮದಿಂದ ನಂದಗಾಂವ, ರಡ್ಡೇರಹಟ್ಟಿ ಗ್ರಾಮದಿಂದ ನಂದಗಾಂವ, ಕೊಕಟನೂರ ಗ್ರಾಮದಿಂದ ತುಬಚಿ ಕ್ರಾಸ್, ಬಡಚಿ ಗ್ರಾಮದಿಂದ ಐಗಳಿ, ಶಿರಹಟ್ಟಿ ಗ್ರಾಮದಿಂದ ಸವದಿ ಹಾಗೂ ಜೀರೋ ಪಾಯಿಂಟ್‌ನಿಂದ ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಡಾಂಬರ ಕಿತ್ತು ಹೋಗಿ ಅವುಗಳ ಸ್ವರೂಪವೇ ಬದಲಾಗಿದ್ದು, ತಗ್ಗು-ಗುಂಡಿ ನಿರ್ಮಾಣವಾಗಿವೆ.

    ಮಳೆ ನೀರು ಗುಂಡಿಯಲ್ಲಿ ಸಂಗ್ರಹವಾಗುತ್ತಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ತೋಟದ ವಸತಿ ಪ್ರದೇಶದಲ್ಲಿರುವ ಮಕ್ಕಳು ಸೈಕಲ್
    ಮೇಲೆ ಗ್ರಾಮದಲ್ಲಿರುವ ಶಾಲಾ-ಕಾಲೇಜಿಗೆ ಹೋಗುವುದು ಕೂಡ ದುಸ್ತರವಾಗಿದೆ. ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಯಾ ಗ್ರಾಮಗಳ ಜನರು ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹದಗೆಟ್ಟ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಸವಾರರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts