More

    ಕೆರೆಗಳಿಗೆ ನೀರು ಹರಿಸಿದ ಭಗೀರಥ, ಸತತ ಪ್ರಯತ್ನದಿಂದ ರಾಜಕಾಲುವೆಯಲ್ಲಿ ನೀರು, 50 ವರ್ಷಗಳ ಬಳಿಕ ತುಂಬುತ್ತಿವೆ ಕೆರೆಗಳು

    ಆನೇಕಲ್: ಸೇನೆಯಿಂದ ನಿವೃತ್ತರಾದ ಬಳಿಕ ಮಾಜಿ ಯೋಧರು ತಮ್ಮದೇ ಆದ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ಸಮಾಜದ ಏಳಿಗೆಗಾಗಿ ನಿಸ್ವಾರ್ಥ ಸೇವೆ ಮುಂದುವರಿಸಿ, ದೇಶ ರಕ್ಷಣೆಗೂ ಸೈ, ಜನರ ಸೇವೆಗೂ ಸೈ ಎನಿಸಿಕೊಳ್ಳುತ್ತಾರೆ. ಅಂಥವರ ಸಾಲಿಗೆ ಮುತ್ತಾನಲ್ಲೂರು ಗ್ರಾಮದ ಭಾರತೀಯ ಸೇನಾಪಡೆಯ ಮಾಜಿ ಕ್ಯಾಪ್ಟನ್ ಸಂತೋಷ್ ಕುಮಾರ್ ಸೇರುತ್ತಾರೆ.

    ಸೇವಾನಿವೃತ್ತಿ ಹೊಂದಿ ಮುತ್ತಾನಲ್ಲೂರಿಗೆ ಮರಳುವಾಗ ಬತ್ತಿದ ಕೆರೆಗಳ ಮೇಲೆ ಇವರ ದೃಷ್ಟಿ ಬೀಳುತ್ತದೆ. ಬಾಲ್ಯದಲ್ಲಿ ಸದಾ ತುಂಬಿ ತುಳುಕುತ್ತಿದ್ದ ಕೆರೆಗಳಿಗೆ ಏನಾಯಿತು ಎಂಬ ಆತಂಕದೊಂದಿಗೆ ಬರಿದಾದ ಅವುಗಳನ್ನು ತುಂಬಿಸಲು ಪಣತೊಟ್ಟರು. ಊರಿಗೆ ಮರಳಿದ ಒಂದು ದಶಕದ ಬಳಿಕ ಸಮಸ್ಯೆಯ ಬುಡದ ಶೋಧನೆಗೆ ಮುಂದಾಗಿ, ಒಂದರ ನಂತರ ಒಂದರಂತೆ ಸಮಸ್ಯೆಗಳ ಸಿಕ್ಕನ್ನು ಬಿಡಿಸುತ್ತಾ ಬಂದರು. ಅದರ ಪರಿಣಾಮ ಈಗ ಮುತ್ತಾನಲ್ಲೂರು ಸೇರಿ ಹಲವು ಗ್ರಾಮಗಳ ಕೆರೆಗಳು ಭರ್ತಿಯಾಗಿವೆ.

    ನಿರಂತರ ಹೋರಾಟ: ಭಾರತೀಯ ಸೇನಾಪಡೆಯಿಂದ 2008ರಲ್ಲಿ ನಿವೃತ್ತರಾಗಿ ಗ್ರಾಮಕ್ಕೆ ಹಿಂದಿರುಗಿದ ಸಂತೋಷ್‌ಕುಮಾರ್ ಸ್‌ಟಾವೇರ್ ಕಂಪನಿಯೊಂದರಲ್ಲಿ 10 ವರ್ಷ ಭದ್ರತಾ ಸಿಬ್ಬಂದಿಯಾಗಿದ್ದರು. 2017ರ ವೇಳೆಗೆ ಗ್ರಾಮಕ್ಕೆ ಹಾಗೂ ತಾಲೂಕಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದಾಗ ನೆನಪಾಗಿದ್ದೇ ಕೆರೆಗಳು. ಅಂದಿನಿಂದ ಅವರು ಕೆರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಕಚೇರಿಗಳಿಗೆ ಎಡತಾಕಲಾರಂಭಿಸಿದರು. ನಿರಂತರ ಹೋರಾಟದ ಮೂಲಕ ಜಲ ಮಾಫಿಯಾಕ್ಕೆ ಕಡಿವಾಣ ಹಾಕಿದರು. ಬಳಿಕ ಎಷ್ಟು ಕೆರೆಗಳಿವೆ, ಅವುಗಳ ವಿಸ್ತೀರ್ಣದ ಜತೆಗೆ ರಾಜಕಾಲುವೆ ಹಾದು ಹೋಗಿರುವ ಮಾರ್ಗಗಳ ಕುರಿತು ಮಾಹಿತಿ ಸಂಗ್ರಹಿಸಲು ಆರಂಭಿಸಿದರು. ವಿವಿಧ ಕಚೇರಿಗಳಿಗೆ ಎಡತಾಕಿ, ಮುತ್ತಾನಲ್ಲೂರು ಅಮಾನಿಕೆರೆ, ಮುತ್ತಾನಲ್ಲೂರು ದೇವರಕೆರೆ, ಸಿಂಗೇನ ಅಗ್ರಹಾರ ಕೆರೆ, ನಾರಾಯಣಘಟ್ಟ ಕೆರೆ, ಬತ್ತಲ ಕೆರೆ, ಕಾಚನಾಯಕನಹಳ್ಳಿ ಕೆರೆ ಸೇರಿ 14 ಕೆರೆಗಳ ಮಾಹಿತಿಯನ್ನು ನಕ್ಷೆ ಸಹಿತ ಸಂಗ್ರಹಿಸಿದರು. ನಕ್ಷೆಯ ಮಾಹಿತಿ ಆಧರಿಸಿ, ಎಲ್ಲೆಲ್ಲಿ, ಎಷ್ಟೆಷ್ಟು ಒತ್ತುವರಿ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡರು. ಅದರನ್ವಯ ಊರಿನ ಮುತ್ತಾನಲ್ಲೂರು ಕೆರೆಯಿಂದ ಬತ್ತಲ ಕೆರೆಯವರೆಗೆ ನಾಲ್ಕೂವರೆ ಕಿಲೋಮೀಟರ್ ರಾಜಕಾಲುವೆ ಒತ್ತುವರಿಯಾಗಿರುವುದನ್ನು ಕಂಡು, ಪ್ರಮುಖವಾಗಿ ಆ ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದರು.

    ಸಾಕಷ್ಟು ಅಡೆತಡೆಗಳು: ಒತ್ತುವರಿ ತೆರವುಗೊಳಿಸುವ ಹಂತದಲ್ಲಿ ಹಲವು ಅಡೆ-ತಡೆಗಳು ಎದುರಾಗಿದ್ದವು. ಆದರೂ ಎದೆಗುಂದದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅಧಿಕಾರಿಗಳ ಸಹಾಯದಿಂದ ರಾಜಕಾಲುವೆ ಮಾರ್ಗ ಗುರುತಿಸಿ ಗಿಡ-ಗಂಟಿ ತೆರವುಗೊಳಿಸಿದರು. ಇದರ ಪರಿಣಾಮ, ಮಳೆಯಾದಾಗ ರಾಜಕಾಲುವೆಗಳಲ್ಲಿ ನೀರು ಹರಿದು ಕೆರೆಗಳನ್ನು ಸೇರಲಾರಂಭಿಸಿತು. ಪ್ರತಿ ಬಾರಿ ಮಳೆ ಬಂದಾಗ ಮುತ್ತಾನಲ್ಲೂರು ಕೆರೆ ತುಂಬಿ, ರಾಜಕಾಲುವೆ ಇಲ್ಲದ ಪರಿಣಾಮ ನೇರವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಬತ್ತಲ ಕೆರೆ, ಬಿದರಗುಪ್ಪೆ ಕೆರೆಗೆ ಹರಿಸುತ್ತಿರುವುದರಿಂದ, ಅವುಗಳೂ ಭರ್ತಿಯಾಗಲಾರಂಭಿಸಿದೆ. 50 ವರ್ಷಗಳ ಬಳಿಕ ಕೆರೆಗಳು ತುಂಬಿರುವುದನ್ನು ಕಂಡು ಸಂತುಷ್ಟರಾದ ಗ್ರಾಮಸ್ಥರು ನಿವೃತ್ತ ಕ್ಯಾಪ್ಟನ್ ಸಂತೋಷ್‌ಕುಮಾರ್ ಸಾಧನೆಯನ್ನು ಶ್ಲಾಸುತ್ತಿದ್ದಾರೆ.

    ಕೋಟಿಗಟ್ಟಲೆ ಬೆಲೆ ಬಾಳುವ ಜಾಗ: ರಾಜಕಾಲುವೆ ಹಾದುಹೋಗಿರುವ ಮಾರ್ಗದಲ್ಲಿನ ಭೂಮಿಗೆ ಚಿನ್ನದ ಬೆಲೆ ಇದೆ. ಕೋಟ್ಯಂತರ ರೂಪಾಯಿ ಮೌಲ್ಯ ಇದೆ. ಅಂಥ ಕಡೆ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಸಣ್ಣ ಪ್ರಮಾಣದ ಒತ್ತುವರಿ ತೆರವುಗೊಳಿಸಲು ಮುಂದಾದರೂ, ಸಾಧ್ಯವಾಗುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸ್ವಲ್ಪವೂ ಎದೆಗುಂದದ ನಿವೃತ್ತ ಕ್ಯಾಪ್ಟನ್ ಸಂತೋಷ್‌ಕುಮಾರ್ ಅವರು, ಲಾಭದ ಲಾಪೇಕ್ಷೆ ಇಲ್ಲದೆ ಮೂರು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಮನೆಬಾಗಿಲಿಗೆ ಅಲೆದಾಡಿದರು. ಜತೆಗೆ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಸಂಗ್ರಹಿಸಿ ಎನ್‌ಜಿಒಗಳ ಸಹಾಯದೊಂದಿಗೆ ರಾಜಕಾಲುವೆ ಹಾದು ಹೋಗಿರುವ ಮಾರ್ಗ ಪತ್ತೆ ಮಾಡಿದರು. ಬಳಿಕ ಅದನ್ನು ತೆರವುಗೊಳಿಸಿದರು. ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇದೀಗ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿದು ಕೆರೆ ಸೇರುತ್ತಿದೆ. ಪರಿಣಾಮ ಕೆರೆಗಳು ತುಂಬಿಕೊಂಡಿದ್ದು, ಗುಂಪು ಗುಂಪಾಗಿ ಬರುತ್ತಿರುವ ಜನರು ತುಂಬಿದ ಕೆರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಉಳಿದ ಕೆರೆಗಳ ಒತ್ತುವರಿ ತೆರವಿಗೆ ಸಿದ್ಧತೆ: ಈಗಾಗಲೇ ಮುತ್ತಾನಲ್ಲೂರು ಕೆರೆಯ ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿರುವ ನಿವೃತ್ತ ಕ್ಯಾಪ್ಟನ್ ಸಂತೋಷ್‌ಕುಮಾರ್, ಉಳಿದ 14 ಕೆರೆಗಳ ಒತ್ತುವರಿ ತೆರವುಗೊಳಿಸಲು ಸಿದ್ಧರಾಗುತ್ತಿದ್ದಾರೆ. ಇದಕ್ಕಾಗಿ ಆನೇಕಲ್ ತಹಸೀಲ್ದಾರ್ ದಿನೇಶ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇವರೆಲ್ಲರ ಸಹಾಯದೊಂದಿಗೆ ಒತ್ತುವರಿ ತೆರವುಗೊಳಿಸುವುದು ಅವರ ಉದ್ದೇಶವಾಗಿದೆ.

    ನಿವೃತ್ತ ಕ್ಯಾಪ್ಟನ್ ಸಂತೋಷ್‌ಕುಮಾರ್ ಕೆರೆಗಳ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಬೆಂಬಲವೂ ಸಿಕ್ಕಿತು. ಅದರ ಪರಿಣಾಮ ಒತ್ತುವರಿ ಎಲ್ಲವೂ ತೆರವುಗೊಂಡು, ಕೆರೆಗೆ ನೀರು ಹರಿದುಬರುತ್ತಿದೆ.
    ವಿಶ್ವನಾಥ ರೆಡ್ಡಿ, ಗ್ರಾಪಂ ಅಧ್ಯಕ್ಷ, ಮುತ್ತಾನಲ್ಲೂರು

    ನಿವೃತ್ತಿ ನಂತರದಲ್ಲಿ ನನ್ನೂರು ಹಾಗೂ ತಾಲೂಕಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಕೆರೆಗಳನ್ನು ಉಳಿಸಲು ಮುಂದಾದೆ. 2017ರಿಂದ ನಿರಂತರವಾಗಿ ಶ್ರಮಿಸಿ, ಕೆರೆಯ ಆಕರಗಳನ್ನು ಕಲೆ ಹಾಕಿ, ನಂತರ ರಾಜಕಾಲುವೆ ಒತ್ತುವರಿ ಹೇಗಾಯಿತು? ಯಾರಿಂದ ಆಯಿತು ಎಂಬುದನ್ನು ಪರಿಶೀಲಿಸಿದೆ. ಬಳಿಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒತ್ತುವರಿ ತೆರವುಗೊಳಿಸಿದೆ. ಸದ್ಯ ಉತ್ತಮ ಲಿತಾಂಶ ದೊರಕಿದೆ.
    ಸಂತೋಷ್ ಕುಮಾರ್, ಸೇನಾಪಡೆಯ ನಿವೃತ್ತ ಕ್ಯಾಪ್ಟನ್

    ರಾಜಕಾಲುವೆಗಳು 50 ವರ್ಷಗಳ ಹಿಂದೆ ಮುಚ್ಚಿದ್ದವು. ಆ ಒತ್ತುವರಿಯನ್ನು ನಿವೃತ್ತ ಕ್ಯಾಪ್ಟನ್ ಸಂತೋಷ್‌ಕುಮಾರ್ ತೆರವುಗೊಳಿಸಿದ್ದಾರೆ. ಹೊಸದಾಗಿ ರಾಜಕಾಲುವೆ ನಿರ್ಮಿಸಿದ್ದಾರೆ. ಈಗ ಮಳೆಯಾಗುತ್ತಿದ್ದು ಹೊಳೆಯ ರೀತಿಯಲ್ಲಿ ರಾಜಕಾಲುವೆಯಲ್ಲಿ ನೀರು ಹರಿಯುತ್ತಿದೆ. ಕೆರೆ ತುಂಬಿಸಿದ ಅವರ ನಿಸ್ವಾರ್ಥ ಸೇವೆಯನ್ನು ಯಾರೂ ಮರೆಯುವಂತಿಲ್ಲ.
    ರಮೇಶ್ ರೆಡ್ಡಿ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts