More

    ಕೆಡಿಸಿಸಿ ಬ್ಯಾಂಕ್​ನಿಂದ ಬೆಳೆ ಸಾಲದ ಮಿತಿ ಹೆಚ್ಚಳ

    ಶಿರಸಿ: ಕರೊನಾ ಹಾಗೂ ಲಾಕ್​ಡೌನ್ ಕಾರಣಕ್ಕೆ ಸಂಕಷ್ಟ ಅನುಭವಿಸಿದ ರೈತರ ಅನುಕೂಲಕ್ಕಾಗಿ ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ 2021-22ನೇ ಆರ್ಥಿಕ ವರ್ಷದಲ್ಲಿ ರೈತರಿಗೆ ವಿತರಿಸಲ್ಪಡುವ ಬೆಳೆ ಸಾಲದ ಮಿತಿಯಲ್ಲಿ ಹೆಚ್ಚಳ ಮಾಡಲು ಕ್ರಮ ವಹಿಸಿದೆ.

    2021-22ನೇ ಸಾಲಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಭತ್ತ, ಅಡಕೆ, ಕಬ್ಬು, ಗೋವಿನ ಜೋಳ, ಹತ್ತಿ ಬೆಳೆಗಳಿಗೆ ಬೆಳೆ ಸಾಲದ ಮಿತಿ ನಿರ್ಧರಿಸಲಾಗಿದೆ. ಪ್ರತಿ ವರ್ಷದಂತೆ ಬೆಳೆಯ ಹಂಗಾಮು ಪೂರ್ವದಲ್ಲಿ ಬೆಳೆಗಳಿಗೆ ತಗಲುವ ಖರ್ಚು ಮತ್ತು ಆದಾಯ ಪರಿಗಣಿಸಿ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಸಭೆಯಲ್ಲಿ ಈ ಕುರಿತು ರ್ಚಚಿಸಿ ಆಯಾ ಬೆಳೆಗಳಿಗೆ ಸಾಲದ ಮಿತಿ ನಿರ್ಧರಿಸಿದೆ. ಕಳೆದ ಸಾಲಿನಲ್ಲಿ ಕರೊನಾ ಹೆಮ್ಮಾರಿಯಿಂದ ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ವಿುಕ ಸಚಿವ, ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ ಮುತುವರ್ಜಿ ವಹಿಸಿ ಈ ನಿರ್ಣಯ ಕೈಗೊಂಡಿದ್ದಾರೆ.

    ಪ್ರತಿ ಎಕರೆ ಭತ್ತಕ್ಕೆ 23 ಸಾವಿರ ರೂ. ನಿಂದ 25 ಸಾವಿರ ರೂ., ಅಡಕೆ 1 ಲಕ್ಷ ರೂ. ನಿಂದ 1.10 ಲಕ್ಷ ರೂ., ಗೋವಿನ ಜೋಳ 23 ಸಾವಿರ ರೂ.ನಿಂದ 25 ಸಾವಿರ ರೂ., ಕಬ್ಬು 35 ಸಾವಿರ ರೂ.ನಿಂದ 40 ಸಾವಿರ ರೂ., ಹತ್ತಿ 13 ಸಾವಿರ ರೂ. ನಿಂದ 20 ಸಾವಿರ ರೂ. ಗಳಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹೆಚ್ಚುವರಿ ಸಾಲದ ಮಿತಿಯನ್ನು ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಈ ಮಿತಿಯು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡು ಬಂದ ನಂತರ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

    ಜಿಲ್ಲೆಯ ರೈತರು ಸಾಲದ ಪ್ರಯೋಜನ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು. ಜತೆಗೆ ಪಡೆದ ಸಾಲವನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮರುಪಾವತಿಸಲು ಕೂಡ ಕಾಳಜಿ ವಹಿಸಬೇಕು.
    | ಶಿವರಾಮ ಹೆಬ್ಬಾರ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts