More

    ಕೆಜಿಎಫ್​ನಲ್ಲಿ ರೂಪಕಲಾ ಹಾದಿ ಸುಗಮ? ಬಿಜೆಪಿಯಲ್ಲಿ ಅರ್ಧ ಡಜನ್​ ಆಕಾಂಕ್ಷಿಗಳು : ಅನುಮಾನದಿಂದ ಹೆಜ್ಜೆ ಇಡುತ್ತಿರುವ ಜೆಡಿಎಸ್​ ಅಭ್ಯರ್ಥಿ

    ಕೆಜಿಎಫ್​ನಲ್ಲಿ ರೂಪಕಲಾ ಹಾದಿ ಸುಗಮ? ಬಿಜೆಪಿಯಲ್ಲಿ ಅರ್ಧ ಡಜನ್​ ಆಕಾಂಕ್ಷಿಗಳು : ಅನುಮಾನದಿಂದ ಹೆಜ್ಜೆ ಇಡುತ್ತಿರುವ ಜೆಡಿಎಸ್​ ಅಭ್ಯರ್ಥಿ


    ಜೆ.ಜಿ.ಶ್ರೀನಿವಾಸಮೂರ್ತಿ, ಬೇತಮಂಗಲ
    ಕೆಜಿಎಫ್​ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಶಾಸಕಿ ಎಂ.ರೂಪಕಲಾ ಕಾಂಗ್ರೆಸ್​ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು, ಲವಲವಿಕೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅರ್ಧ ಡಜನ್​ ಆಕಾಂಕ್ಷಿಗಳನ್ನು ಹೊಂದಿರುವ ಬಿಜೆಪಿಯಲ್ಲಿ ಮತ್ತು ಜೆಡಿಎಸ್​ ಅಭ್ಯರ್ಥಿಯೆಂದು ರಮೇಶ್​ಬಾಬು ಹೆಸರು ಘೋಷಣೆಯಾಗಿದ್ದರೂ ಆ ಪಕ್ಷದಲ್ಲಿ ಸಾಕಷ್ಟು ಗೊಂದಲವಿದೆ. ಹೀಗಾಗಿ ಕಾಂಗ್ರೆಸ್​ ಗೆಲುವಿಗೆ ರಹದಾರಿಯಾದಂತಾಗಿದೆ.
    ಕ್ಷೇತ್ರದಲ್ಲಿ 40 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ 2018ರ ಚುನಾವಣೆಯಲ್ಲಿ ಬಿಜೆಪಿಯ ವೈ.ಸಂಪಂಗಿ ಪುತ್ರಿ ಅಶ್ವಿನಿ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ರೂಪಕಲಾ ಕಾಂಗ್ರೆಸ್​ ಬಾವುಟ ಹಾರಿಸಿದ್ದರು. ಕ್ಷೇತ್ರದಲ್ಲಿ ಇಲ್ಲಿ ತನಕ 2 ಬಾರಿ ಕಮ್ಯುನಿಸ್ಟ್​, 3 ಬಾರಿ ಎಐಡಿಎಂಕೆ, 2 ಸಲ ಆರ್​ಪಿಐ ಹಾಗೂ ಕ್ಷೇತ್ರ ಪುನರ್​ ವಿಂಗಡಣೆ ಬಳಿಕ ಎರಡು ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು.
    ಬಿಜೆಪಿ ಟಿಕೆಟ್​ಗೆ 6 ಮಂದಿ ಲಾಬಿ: 15 ವರ್ಷದಿಂದ ಕೆಜಿಎಫ್​ನಲ್ಲಿ ಬಿಜೆಪಿ ಸಾಮ್ರಾಟನಂತಿರುವ ಮಾಜಿ ಶಾಸಕ ವೈ.ಸಂಪಂಗಿ ಒಮ್ಮೆ ಗೆದ್ದಿದ್ದು, ಮತ್ತೊಮ್ಮೆಅವರ ತಾಯಿ ರಾಮಕ್ಕ ಅವರನ್ನು ಗೆಲ್ಲಿಸಿಕೊಂಡಿದ್ದರು. ಕಳೆದ ಬಾರಿ ಪುತ್ರಿ ಅಶ್ವಿನಿಗೆ ಟಿಕೆಟ್​ ಗಿಟ್ಟಿಸಿಕೊಂಡಿದ್ದರೂ ಜನತೆ ಸಂಪಂಗಿ ಕುಟುಂಬದ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಿದ್ದರು. ಈ ಬಾರಿ ವೈ.ಸಂಪಂಗಿ ಅಥವಾ ಪುತ್ರ ಟಿಎಪಿಎಂಸಿಸ್​ ಅಧ್ಯಕ್ಷ ಪ್ರವಿಣ್​ ಕುಮಾರ್​ಗೆ ಟಿಕೆಟ್​ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸಂಪಂಗಿ ಕುಟುಂಬಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬರೋಬ್ಬರಿ 6 ಮಂದಿ ಬಿಜೆಪಿ ಟಿಕೆಟ್​ಗೆ ಲಾಬಿ ಪ್ರಾರಂಭಿಸಿದ್ದಾರೆ.
    ಸಮಾಜಸೇವಕ ಮಹದೇವಪುರ ಮೋಹನಕೃಷ್ಣ, ಉಚಿತ ಕೊಡುಗೆ ಕೊಡುತ್ತಿರುವ ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಸುರೇಶ್​, ಅದೇ ಊರಿನ ಚಲಪತಿ, ಇತ್ತೀಚೆಗೆ ಬಿಜೆಪಿ ಸೇರಿರುವ ಕೆಜಿಎಫ್​ ಶ್ರೀನಿವಾಸ್​ ಟಿಕೆಟ್​ಗಾಗಿ ಯತ್ನಿಸಿದ್ದಾರೆ. ಇದೆಲ್ಲದರ ನಡುವೆ ಯಾರಿಗೂ ಬೇಡ, ಕಿತ್ತಾಟ ನಿಲ್ಲಬೇಕಾದರೆ ನನ್ನ ಪತ್ನಿ ಶೈಲಜಾಗೇ ಕೊಡಿ, ಎಲ್ಲರನ್ನೂ ಒಗ್ಗೂಡಿಸಿ ಗೆದ್ದು ಬರುತ್ತೇನೆ ಎಂದು ಹೈಕಮಾಂಡ್​ ಮುಂದೆ ಪ್ರಸ್ತಾಪ ಇಡಲು ಸಂಸದ ಎಸ್​.ಮುನಿಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.


    ಸಂಪಂಗಿಗೆ ಮುನಿರತ್ನ, ಉಳಿದವರಿಗೆ ಮುನಿಸ್ವಾಮಿ ಶ್ರೀರಕ್ಷೆ: ಪ್ರಬಲ ಆಕಾಂಕ್ಷಿ ವೈ.ಸಂಪಂಗಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಬೆನ್ನಿಗೆ ನಿಂತಿದ್ದು, ಬಹಿರಂಗವಾಗಿ ಸಂಪಂಗಿಯನ್ನು ಮತ್ತೆ ವಿಧಾನಸಭೆಗೆ ಕಳುಹಿಸಿಯೇ ತೀರುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಸಂಸದ ಮುನಿಸ್ವಾಮಿ ಮಾತ್ರ ಯಾರ ಪರ ಹೇಳಿಕೆ ನೀಡದಿದ್ದರೂ, 5 ಮಂದಿಗೂ ನಾನಿದ್ದೇನೆ, ನೀವು ಕೆಲಸ ಮಾಡಿ ಎಂದು ಎಲ್ಲರನ್ನು ಜತೆಯಲ್ಲಿಟ್ಟುಕೊಂಡು ಟಿಕೆಟ್​ ಆಸೆ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.


    ಜೆಡಿಎಸ್​ ಅಭ್ಯರ್ಥಿ ಕಥೆ ಏನು?: ಜೆಡಿಎಸ್​ನಲ್ಲಿ ಈಗಾಗಲೇ ಡಾ.ರಮೇಶ್​ ಬಾಬುಗೆ ಟಿಕೆಟ್​ ಘೋಷಣೆ ಮಾಡಿದ್ದರೂ, ಇನ್ನೂ ಅವರು ಅನುಮಾನದ ಹೆಜ್ಜೆ ಹಾಕುತ್ತಿದ್ದಾರೆ. ಆರ್ಥಿಕವಾಗಿ ಬಲಾಢ್ಯರು ಎಂದೇ ಹೇಳಲಾಗುತ್ತಿರುವ ರಮೇಶ್​ ಬಾಬು ಪ್ರಚಾರ ತಂತ್ರಗಳು ಇನ್ನೂ ಪ್ರಾರಂಭವಾಗಿಲ್ಲ.
    ನಗರಕ್ಕೆ ಸೀಮಿತ ರಾಜೇಂದ್ರನ್​: ಎರಡು ಬಾರಿ ಶಾಸಕರಾಗಿ ಮತ್ತೆರಡು ಬಾರಿ ಸೋತಿರುವ ಮಾಜಿ ಶಾಸಕ ಆರ್​ಪಿಐ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಎಸ್​.ರಾಜೇಂದ್ರನ್​ ಕೆಜಿಎಫ್​ ನಗರಕ್ಕೆ ಸೀಮಿತರಾದಂತಿದೆ. ಇದೇ ಕಾರಣಕ್ಕೆ ಕೆಜಿಎಫ್​ನಲ್ಲಿ ಮುಂಚೂಣಿಯಲ್ಲಿದ್ದರೂ ಹಳ್ಳಿಗಳಲ್ಲಿ ಅವರ ಹೆಸರು ಹೇಳುವವರು ಕಾಣುತ್ತಿಲ್ಲ.

    ರೂಪಕಲಾ ಎದುರು ಉಳಿದವರು ಮಂಕು


    ಕ್ಷೇತ್ರದಲ್ಲಿ ಪ್ರಸ್ತುತ ಇತರ ಪಕ್ಷಗಳಲ್ಲಿ ಹತ್ತು, ಹಲವು ಕವಲು ದಾರಿಗಳಿವೆ. ಆದರೆ ರೂಪಕಲಾ ಗೆಲುವು ಸುಲಭ ಎನ್ನಲಾಗುತ್ತಿದೆ. ಇವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ, ಡಿಸಿಸಿ ಬ್ಯಾಂಕ್​ನಿಂದ ಶೂನ್ಯ ಬಡ್ಡಿಯಲ್ಲಿ ಮಹಿಳೆಯರಿಗೆ ಮತ್ತು ರೈತರಿಗೆ ನೂರಾರು ಕೋಟಿ ರೂ. ಸಾಲ ಕೊಡಿಸಿರುವುದು, ಬೇತಮಂಗಲ ಮತ್ತು ರಾಮಸಾಗರ ಕೆರೆಗಳ ಸ್ವಚ್ಛತೆ ಮತ್ತು ಅಭಿವೃದ್ಧಿ, ರಸ್ತೆಗಳ ನಿಮಾರ್ಣ, ಮಿನಿ ವಿಧಾನಸೌಧ, ನೂತನ ಸರ್ಕಾರಿ ಕಚೇರಿ ಕಟ್ಟಡಗಳು, ವಿಶೇಷವಾಗಿ ಬೃಹತ್​ ಎಪಿಎಂಸಿ ಮಾರುಕಟ್ಟೆ ನಿಮಾರ್ಣಕ್ಕೆ ನಿವೇಶನ, 30 ವರ್ಷದಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ರೈತರಿಗೆ ಸಾಗುವಳಿ ಚೀಟಿ ವಿತರಣೆ ಸೇರಿ ಸಾಕಷ್ಟು ಕೆಲಸಗಳಾಗಿವೆೆ. ಮತದಾರರು ಮತ್ತು ಅಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ರೂಪಕಲಾ ಅವರ ಸರಳ ಸಜ್ಜನಿಕೆಯ ವರ್ತನೆ ಜನರಿಗೆ ಹತ್ತಿರವಾಗಲು ಕಾರಣವಾಗಿದೆ ಎಂಬುದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts