More

    ಕೆಕೆಆರ್‌ಗೆ ಶುಭಾರಂಭದ ನಿರೀಕ್ಷೆ, ಮುಂಬೈಗೆ ಖಾತೆ ತೆರೆಯುವ ತವಕ

    ಅಬುಧಾಬಿ: ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಎದುರು ಸೋತಿರುವ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೇರುವ ತವಕದಲ್ಲಿದೆ. 2013ರಿಂದಲೂ ಮೊದಲ ಪಂದ್ಯದಲ್ಲಿ ಸೋಲು ಕಾಣುತ್ತಲೇ ಬಂದಿರುವ ರೋಹಿತ್ ಶರ್ಮ ಬಳಗ 2ನೇ ಪಂದ್ಯದಲ್ಲಾದರೂ ಪುಟಿದೇಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಯುವ ಹಾಗೂ ಅನುಭವಿ ಪಡೆ ಹೊಂದಿರುವ ಕೆಕೆಆರ್ ಶುಭಾರಂಭದ ನಿರೀಕ್ಷೆಯಲ್ಲಿದೆ.
    ದಿನೇಶ್ ಕಾರ್ತಿಕ್ ಸಾರಥ್ಯದ ಕೆಕೆಆರ್ ತಂಡ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೇಲುಗೈ ಸಾಧಿಸಿದ ಇತಿಹಾಸ ಹೊಂದಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್ ಮೇಲುಗೈ ಹೊಂದಿದೆ. 2014ರಲ್ಲಿ 2ನೇ ಬಾರಿಗೆ ಟ್ರೋಫಿ ಜಯಿಸಿದ ಬಳಿಕ ಮೂರು ಬಾರಿ ಪ್ಲೇಆಫ್ ಹಂತಕ್ಕೇರಿರುವ ಕೆಕೆಆರ್ ಒಮ್ಮೆಯೂ ಫೈನಲ್ ಪ್ರವೇಶಿಸಿಲ್ಲ. ಆಂಡ್ರೆ ರಸೆಲ್ ಹಾಗೂ ಸುನೀಲ್ ನಾರಾಯಣ್ ಜೋಡಿ ಇಂದಿಗೂ ತಂಡದ ಭಾಗವಾಗಿದ್ದು, ದಿನೇಶ್ ಕಾರ್ತಿಕ್ ಸಾರಥ್ಯದ ಕೆಕೆಆರ್ ತಂಡಕ್ಕೆ ಈ ಅನುಭವಿ ಜೋಡಿಯೇ ಶ್ರೀರಕ್ಷೆಯಾಗಿದೆ. ತಂಡಕ್ಕೆ ಉತ್ತಮ ಮಾರ್ಗದರ್ಶಕರಿದ್ದು, ಸದ್ಯ ಪ್ಲೇಆಫ್ ಹಂತದ ಮೇಲೆ ಕಣ್ಣಿಟ್ಟಿದೆ. ಸುನೀಲ್ ನಾರಾಯಣ್, ಕುಲದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ಮೋಡಿ ಮಾಡಲು ಅಣಿಯಾಗಿದ್ದರೆ, ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ತಂಡದ ಪ್ರಮುಖ ಅಸವಾಗಿದ್ದಾರೆ. ಕಳೆದ ಬಾರಿ ಆಂಡ್ರೆ ರಸೆಲ್‌ರನ್ನು ಕೆಳಕ್ರಮಾಂಕದಲ್ಲಿ ಇಳಿಸುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಕೆಕೆಆರ್ ಹಿಂದಿನ ತಪ್ಪನ್ನು ತಿದ್ದಿಕೊಳ್ಳಬೇಕಿದೆ.
    ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಖಾತೆ ತೆರೆಯಲು ಬಯಸಿದ್ದು, ಟ್ರೆಂಟ್ ಬೌಲ್ಟ್ ಬದಲಿಗೆ ನಥಾನ್ ಕೌಲ್ಟರ್ ನಿಲ್ ಆಡಬಹುದು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ನಿರಾಸೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಸೋಲಿನಿಂದ ಪಾಠ ಕಲಿತಿದೆ. ಸ್ಟಾರ್ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೈರಾನ್ ಪೊಲ್ಲಾರ್ಡ್ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ.

    ಟೀಮ್ ನ್ಯೂಸ್:
    ಕೋಲ್ಕತ ನೈಟ್‌ರೈಡರ್ಸ್‌: ಶುಭಮಾನ್ ಗಿಲ್ ಜತೆಗೆ ಸುನೀಲ್ ನಾರಾಯಣ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ನಿತೇಶ್ ರಾಣಾ, ದಿನೇಶ್ ಕಾರ್ತಿಕ್, ರಸೆಲ್‌ರಂಥ ಬಲಿಷ್ಠರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಆಲ್ರೌಂಡರ್ ಕೋಟಾಗೆ ರಾಹುಲ್ ತ್ರಿಪಾಠಿ ಹಾಗೂ ರಿಂಕು ಸಿಂಗ್ ನಡುವೆ ಪೈಪೋಟಿ ಏರ್ಪಟ್ಟರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ ಈ ಮೂವರಲ್ಲಿ ಇಬ್ಬರು ಯುವ ವೇಗಿಗಳು ಕಣಕ್ಕಿಳಿಬಹುದು. 4 ವಿದೇಶಿ ಆಟಗಾರ ಕೋಟಾದಲ್ಲಿ ರಸೆಲ್, ಸುನೀಲ್ ನಾರಾಯಣ್, ಮಾರ್ಗನ್ ಆಯ್ಕೆ ಪಕ್ಕಾ ಆಗಿದೆ. ಮತ್ತೊಂದು ಸ್ಥಾನಕ್ಕೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಅಂತಿಮವಾದರೂ ಬ್ಯಾಟಿಂಗ್‌ಗೆ ಒತ್ತು ನೀಡಿದರೆ ಟಾಮ್ ಬಾಂಟನ್‌ಗೂ ಅವಕಾಶ ಸಿಗಬಹುದು. ಅಲ್ಲದೆ, ಬಿಬಿಎಲ್, ಸಿಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ತೋರಿರುವ ಕ್ರಿಸ್ ಗ್ರೀನ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
    ಸಂಭಾವ್ಯ ತಂಡ: ಶುಭಮಾನ್ ಗಿಲ್, ಸುನೀಲ್ ನಾರಾಯಣ್, ನಿತೇಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ರಿಂಕು ಸಿಂಗ್/ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ/ಶಿವಂ ಮಾವಿ, ಪ್ರಸಿದ್ಧ್ ಕೃಷ್ಣ.

    ಮುಂಬೈ ಇಂಡಿಯನ್ಸ್: ಮೊದಲ ಪಂದ್ಯದಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಿನ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಚೆನ್ನೈ ವಿರುದ್ಧ ಸೌರಭ್ ತಿವಾರಿ ಮಿಂಚಿರುವ ಕಾರಣ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದು, ಇಶಾನ್ ಕಿಶನ್ ಹೊರಗುಳಿಯುವುದು ಅನಿವಾರ್ಯ. ವೇಗಿ ಟ್ರೆಂಟ್ ಬೌಲ್ಟ್ ಬದಲಿಗೆ ನಥಾನ್ ಕೌಲ್ಟರ್ ನಿಲ್‌ಗೆ ಅವಕಾಶ ನೀಡಬಹುದು. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.
    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್, ಸೌರಭ್ ತಿವಾರಿ/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್/ನಥಾನ್ ಕೌಲ್ಟರ್ ನಿಲ್, ಜಸ್‌ಪ್ರೀತ್ ಬುಮ್ರಾ.

    ಪಂದ್ಯ ಆರಂಭ: ರಾತ್ರಿ: 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಮುಖಾಮುಖಿ: 25
    ಮುಂಬೈ: 19
    ಕೆಕೆಆರ್: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts