More

    ಕೆಎಫ್​ಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

    ಸಿದ್ದಾಪುರ: ಕರೊನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಂಡ ರೀತಿಯಲ್ಲೇ ಮಂಗನ ಕಾಯಿಲೆ ನಿಯಂತ್ರಣಕ್ಕೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

    ಸ್ಥಳೀಯ ತಾಪಂ ಸಭಾಭವನದಲ್ಲಿ ತಾಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಿಸುತ್ತಿರುವ ಕುರಿತು ಆರೋಗ್ಯ, ಅರಣ್ಯ, ಕಂದಾಯ, ಪಶುಸಂಗೋಪನೆ ಹಾಗೂ ತಾಪಂ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ಒಟ್ಟು 31 ಮಂಗನ ಕಾಯಿಲೆ ಪ್ರಕರಣ ದಾಖಲಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮಣಿಪಾಲದಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಪುನಃ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೇಯಸ್ ಆಸ್ಪತ್ರೆಯ ವೈದ್ಯರಲ್ಲೂ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

    ಕರೊನಾದಿಂದಾಗಿ ಸಂಚಾರ ಸ್ಥಗಿತಗೊಡಿದ್ದರಿಂದ ಕೆಲವೆಡೆ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂಬ ವದಂತಿಯಿದೆ. ಸ್ಥಳೀಯ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ, ಹಿರಿಯ ಅಧಿಕಾರಿಗಳ ಪರವಾನಗಿ ಪಡೆದು ಅಧಿಕಾರ ಬಳಸಿಕೊಂಡು ಮಂಗನ ಕಾಯಿಲೆ ಕುರಿತು ಗುರುತಿಸಿರುವ 71 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಅಶೀಸರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಹಸೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ. ಇಒ ಪ್ರಶಾಂತರಾವ್, ಎಸಿಎಫ್ ಅಜೀಜ್ ಶೇಖ್, ಕ್ಯಾದಗಿ ವಲಯ ಅರಣ್ಯಾಧಿಕಾರಿ ಹರೀಶ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಇತರರಿದ್ದರು.

    ಮಂಗನ ಕಾಯಿಲೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ: ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಕಳೆದ ವರ್ಷ ಮೃತಪಟ್ಟ 6 ಜನರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೀಡಲು ಸಿಎಂ ಕಾರ್ಯಾಲಯ ಒಪ್ಪಿಗೆ ಸೂಚಿಸಿದೆ.

    ಶಿವಮೊಗ್ಗ ಜಿಲ್ಲೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಆದರೆ, ಉತ್ತರ ಕನ್ನಡ ಜಿಲ್ಲೆಯವರಿಗೆ ಪರಿಹಾರ ದೊರಕಿರಲಿಲ್ಲ. ಈ ತಾರತಮ್ಯದ ಕುರಿತು ಆಕ್ಷೇಪವಿತ್ತು. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಈ ಸಂಬಂಧ ಸಿಎಂ ಅವಧಿಗೆ ಪತ್ರ ಬರೆದಿದ್ದರು. ಅದನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹಡಗಲಿ ಅರುಣ ಕುಮಾರ್ ಈ ಸಂಬಂಧ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಕಳೆದ ವರ್ಷ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ತಲಾ 2 ಲಕ್ಷದಂತೆ 12 ಲಕ್ಷ ರೂ.ಗಳನ್ನು ಬಿಡೆಗಡೆ ಧನಾದೇಶ ನೀಡಲಾಗಿದೆ. ಅದನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿ ಬಳಕೆ ಪ್ರಮಾಣಪತ್ರ ಕಳಿಸಿಕೊಡುವಂತೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts