More

    ಕೃಷ್ಣಶರ್ಮ ಕಾವ್ಯದಲ್ಲಿದೆ ಅಪ್ಪಟ ದೇಸಿತನ

    ಬೆಳಗಾವಿ: ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದ ಜೀವಧಾತು ದೇಸಿತನ. ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ವಾಸನೆ ಅವರ ಕವಿತೆಯಲ್ಲಿದೆ. ನೆಲದ ಜನಪದ ಜೀವನವೇ ಅವರ ಕಾವ್ಯನುಸಂಧಾನವಾಗಿದೆ ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭೈರಮಂಗಲ ರಾಮೇಗೌಡ ತಿಳಿಸಿದರು.

    ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯಾನುಸಂಧಾನ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೃಷ್ಣಶರ್ಮ ಅವರ ಕಾವ್ಯವು ಉತ್ತರ ಕರ್ನಾಟಕದ ಬದುಕಿನ ವಿಶ್ವಕೋಶದಂತೆ ಅಭಿವ್ಯಕ್ತಿಯಾಗಿದೆ. ನವೋದಯದ ಎಲ್ಲ ಅಭಿವ್ಯಕ್ತಿಗಳನ್ನು ಒಳಗೊಂಡ ಸ್ವೋಪಜ್ಞ ಪ್ರತಿಭೆ ಅವರದ್ದು. ಅವರ ಕಾವ್ಯಗಳ ಕುರಿತು ಬಹುಶಿಸ್ತೀಯ ಅಧ್ಯಯನಗಳು ನಡೆಯಬೇಕಾಗಿದೆ. ಬೆಟಗೇರಿ ಕೃಷ್ಣಶರ್ಮ ಅವರ ಬರವಣಿಗೆಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಪ್ರಸ್ತುತವಾಗಲಿವೆ ಎಂದು ಅಭಿಪ್ರಾಯಪಟ್ಟರು.

    ವಿವಿ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಮಾತನಾಡಿ, ಕೃಷ್ಣಶರ್ಮ ಅವರು ಕನ್ನಡ ವಿಭಾಗದ ಮೂಲಕ ಬೆಳಗಾವಿ ಜಿಲ್ಲೆಯ ಎಲ್ಲ ಹೆಸರಾಂತ ಕವಿಗಳ ಹೆಸರಿನಿಂದ ಏಕೀಕೃತ ಅಧ್ಯಯನ ಪೀಠವೊಂದನ್ನು ಆರಂಭಿಸುವ ಪ್ರಸ್ತಾವನೆ ವಿಶ್ವವಿದ್ಯಾಲಯದ ಮುಂದಿದೆ ಎಂದು ತಿಳಿಸಿದರು.

    ಡಾ.ರಾಘವೇಂದ್ರ ಪಾಟೀಲ ಮಾತನಾಡಿ, ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಯುವಪೀಳಿಗೆಗೆ ವಿಶ್ವವಿದ್ಯಾಲಯವು ತಲುಪಿಸುವ ಮುಖ್ಯವಾದ ಕೆಲಸದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸರಜೂ ಕಾಟ್ಕರ್ ಮಾತನಾಡಿ, ಬೆಳಗಾವಿ ಜಿಲ್ಲೆಯ ಮಹತ್ವವನ್ನು ಇಲ್ಲಿನ ಭಾಷೆ, ಹವಾಮಾನ, ಬದುಕು ಅಲ್ಲದೇ ಹೋರಾಟದ ಮನೋಭಾವವು ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದಲ್ಲಿ ಅಭಿವ್ಯಕ್ತಿಗೊಂಡಿದೆ. ಅದನ್ನು ವ್ಯಾಪಕವಾಗಿ ಪ್ರಚುರಪಡಿಸುವಲ್ಲಿ ವಿಶ್ವವಿದ್ಯಾಲಯವು ಪಠ್ಯಗಳಲ್ಲಿ ಕಡ್ಡಾಯವಾಗಿ ಬೆಟಗೇರಿ ಕೃಷ್ಣಶರ್ಮ ಮತ್ತು ಬಸವರಾಜ ಕಟ್ಟಿಮನಿ ಅವರ ಸಾಹಿತ್ಯವನ್ನು ಸೇರಿಸಬೇಕು ಎಂದು ಸಲಹೆ ನೀಡಿದರು. ಡಾ.ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯಗಳಲ್ಲಿ ದೇಶೀಯತೆ ಎನ್ನುವ ವಿಷಯದ ಮೇಲೆ ಡಾ. ನಾಗರತ್ನಾ ವಿ. ಪರಾಂಡೆ, ಕೃಷ್ಣಶರ್ಮ ಅವರ ಕಾವ್ಯದಲ್ಲಿ ಗೇಯತೆ ಎನ್ನುವ ವಿಷಯದ ಮೇಲೆ ಡಾ. ಕವಿತಾ ಕುಸುಗಲ್, ಕಾವ್ಯಗಳಲ್ಲಿ ಪ್ರತಿಮೆ, ರೂಪಕ ಮತ್ತು ಉಪಮೆ ಎನ್ನುವ ವಿಷಯದ ಮೇಲೆ ಡಾ.ಗಜಾನನ ನಾಯ್ಕ, ಕಾವ್ಯಗಳ ವಸ್ತುವೈವಿಧ್ಯತೆ ಕುರಿತು ಡಾ. ಮಹೇಶ ಗಾಜಪ್ಪನವರ ಹಾಗೂ ಕಾವ್ಯ ಮತ್ತು ನವೋದಯ ಕುರಿತು ಡಾ. ಶೋಭಾ ನಾಯಕ ಅವರು ಪ್ರಬಂಧ ಮಂಡಿಸಿದರು.

    ಪ್ರೊ. ಎಸ್.ಎಂ. ಗಂಗಾಧರಯ್ಯ, ಡಾ.ಸಿ.ಕೆ. ನಾವಲಗಿ, ಡಿಸಿಪಿ ಸ್ನೇಹಾ ಪಿ. ವಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜೇಶ್ವರಿ ಜೈನಾಪುರೆ, ಡಾ.ಪಿ.ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts