More

    ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ

    ಕಾರವಾರ: ಜಿಲ್ಲೆಯಲ್ಲಿ ಒಂದೊಮ್ಮೆ ಲಾಕ್​ಡೌನ್ ಹೊರತಾಗಿ ಸೀಲ್​ಡೌನ್ ಜಾರಿಯಾದರೂ ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯ್ದ ಅಧಿಕಾರಿಗಳ ಸಭೆ, ಶಾಸಕರು, ತಾಲೂಕು ಹಂತದ ಅಧಿಕಾರಿಗಳ ಜತೆ ಶನಿವಾರ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಬೆಳೆದ 12 ಸಾವಿರ ಟನ್ ಅನಾನಾಸ್ ದೆಹಲಿಗೆ ಕಳಿಸಲು ಮಾತುಕತೆ ನಡೆಸಿದ್ದೇವೆ. ಅಡಕೆ ಹೊರ ರಾಜ್ಯಗಳಿಗೆ ಮುಕ್ತವಾಗಿ ಹೋಗುವ ವ್ಯವಸ್ಥೆ ಮಾಡಲಾಗುವುದು. ಪಪ್ಪಾಯ, ಕಲ್ಲಂಗಡಿ, ಬಾಳೆ ಕಾಯಿಗೂ ಬೆಲೆ ಇಲ್ಲದಂತಾಗಿದ್ದು, ಅದರ ಮಾರಾಟಕ್ಕೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಕೃಷಿ ಉತ್ಪನ್ನ ಸಾಗಣೆಗೆ ಯಾವುದೇ ಪಾಸ್ ಬೇಕಿಲ್ಲ. ಆದರೂ ಬೇಕಾದಲ್ಲಿ ಆಡಳಿತದಿಂದ ಪಾಸ್ ವಿತರಿಸಲು ಸೂಚಿಸಲಾಗಿದೆ ಎಂದರು.

    ರಾಜಕೀಯ ಇಲ್ಲ: ಈ ಕರೊನಾ ಮಹಾ ಮಾರಿಯನ್ನು ರಾಜಕೀಯ ಮುಕ್ತವಾಗಿ ಎದುರಿಸಬೇಕಿದೆ. ಈ ಸಂಬಂಧ ನಾನು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಜತೆ ಫೋನ್​ನಲ್ಲಿ ಮಾತನಾಡಿದ್ದೇನೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಎಲ್ಲ ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.

    ಪೊಲೀಸರಿಂದ ಪಾಸ್ ವಿತರಣೆ: ತುರ್ತು ಸಂದರ್ಭಕ್ಕೆ ಓಡಾಡುವವರಿಗೆ ತಹಸೀಲ್ದಾರರ ಬದಲು ಪೊಲೀಸರ ಮೂಲಕ ಪಾಸ್ ನೀಡುವ ವ್ಯವಸ್ಥೆ ಮಾಡಲಾಗುವುದು. ಹೊರ ಜಿಲ್ಲೆಗೆ ಹೋಗುವವರಿಗೆ ಎಸ್​ಪಿ, ಜಿಲ್ಲೆಯೊಳಗಿನ ಓಡಾಟಕ್ಕೆ, ಸಿಪಿಐ, ಡಿವೈಎಸ್​ಪಿ ಮಟ್ಟದಲ್ಲಿ ಪಾಸ್ ವಿತರಣೆಗೆ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು. ಆನ್​ಲೈನ್ ಮೂಲಕ ಪಾಸ್ ಪಡೆಯಲು ಜಿಲ್ಲಾಡಳಿತ, ಪೊಲೀಸ್, ಜಿಪಂ ವೆಬ್​ಸೈಟ್​ಗಳಲ್ಲಿ, ಗ್ರಾಪಂಗಳಲ್ಲಿ ಅರ್ಜಿ ನಮೂನೆ ಹಾಕಲಾಗುವುದು. ಆನ್​ಲೈನ್ ಮೂಲಕ ಭರ್ತಿಗೆ ವ್ಯವಸ್ಥೆ ಮಾಡಲಾಗುವುದು. ತೀವ್ರ ತೊಂದರೆ ಇರುವವರು ಫೋನ್ ಮಾಡಿದರೂ ಮನೆಗೇ ಪಾಸ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ತಿಳಿಸಿದರು.

    ಕಾರ್ವಿುಕರನ್ನು ತರುವ ದುಸ್ಸಾಹಸ ಬೇಡ: ಜಿಲ್ಲಾಧಿಕಾರಿಯಿಂದ ಹಿಡಿದು ಆಶಾ ಕಾರ್ಯಕರ್ತೆವರೆಗೆ ಎಲ್ಲರೂ ಮಾಡುತ್ತಿರುವ ಸೇವೆಯನ್ನು ಅಭಿನಂದಿಸಿದ ಹೆಬ್ಬಾರ. ಇವರೆಲ್ಲರ ಕಾರಣದಿಂದ ಜಿಲ್ಲೆ ಸೇಫ್ ಆಗಿದೆ. ಇನ್ನು ಕೆಲ ದಿನ ಹೊರ ರಾಜ್ಯದಲ್ಲಿರುವ ಜಿಲ್ಲೆಯವರನ್ನು ಕರೆತರುವ ಪ್ರಯತ್ನ ಮಾಡಬೇಡಿ. ಜಿಲ್ಲಾಡಳಿತಕ್ಕೆ ಇದಕ್ಕಾಗಿ ಒತ್ತಡ ಹಾಕಬೇಡಿ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಗೋವಾದಲ್ಲಿ ನನ್ನ ಕ್ಷೇತ್ರದ 2500 ಜನರಿದ್ದಾರೆ. ಹಾಗೇ ಎಲ್ಲ ಕಡೆಯವರೂ ಇದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಗೋವಾ ಸಿಎಂ ಜತೆಗೆ ನಮ್ಮ ಸಿಎಂ ಯಡಿಯೂರಪ್ಪ ಅವರು, ನಾನು ಮಾತನಾಡಿದ್ದೇನೆ. ಇನ್ನೆರಡು ದಿನದಲ್ಲಿ ನಾನು ಜಿಲ್ಲೆಯ ಅಧಿಕಾರಿಗಳ ಜತೆಗೆ ಗೋವಾಕ್ಕೆ ಹೋಗಿ ನೋಡಿಕೊಂಡು ಬರುತ್ತೇನೆ ಎಂದರು.

    ಸಚಿವರು ಹೇಳಿದ್ದು: ಕೃಷಿಕರಿಗೆ ತೆರಳಲು ಗ್ರೀನ್ ಕಾರ್ಡ್ ವಿತರಣೆ, ಗ್ರಾಪಂನಿಂದಲೇ ನೀರಿನ ಪಂಪ್​ಗಳಿಗೆ ಡೀಸೆಲ್ ವಿತರಣೆ ವ್ಯವಸ್ಥೆ, ಗ್ರಾಪಂಗಳಿಂದ ಅಗತ್ಯ ಔಷಧ ವಿತರಣೆಗೆ ವ್ಯವಸ್ಥೆ, ಹಾಲು ಉತ್ಪಾದಕ ಸಂಘದ ಆಯ್ದವರಿಗೆ (ರೂಟ್​ಗೆ ಒಬ್ಬರಂತೆ) ಪೆಟ್ರೋಲ್ ನೀಡಲು ವ್ಯವಸ್ಥೆ, ಮಂಗನ ಕಾಯಿಲೆಯ 4 ಪ್ರಕರಣ ಮಣಿಪಾಲದಲ್ಲಿ ಚಿಕಿತ್ಸೆ. ಪ್ರತಿ ವಾರ ಆ ಪ್ರದೇಶದಲ್ಲಿ ಸಭೆ ಮಾಡಿ, ರ್ಚಚಿಸುವಂತೆ ಶಿರಸಿ ಎಸಿಗೆ ಸೂಚನೆ, ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ 3427 ಜನರಿಗೂ ಮುಂದಿನ ಮೂರು ತಿಂಗಳು ಬಿಪಿಎಲ್ ಪಡಿತರ, ಪಾತಿ ದೋಣಿಗಳ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆಗೆ ಅನುಮತಿ, ಗ್ರಾಪಂಗಳಲ್ಲಿ ಸಾಮಾಜಿಕ ಅಂತರ ಕಾಯ್ದು ಎನ್​ಆರ್​ಇಜಿ ಕಾಮಗಾರಿ ಮಾಡಲು ಅನುಮತಿ.

    ಪಕ್ಷಾತೀತ ಹೋರಾಟಕ್ಕೆ ಆದ್ಯತೆ: ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಜವಾಬ್ದಾರಿ ನನ್ನ ಹೆಗಲಿಗೇರಿದ್ದು, ಕರೊನಾ ವಿರುದ್ಧ ಪಕ್ಷಾತೀತವಾಗಿ ಹೋರಾಡುವುದು ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಜನತೆ ಎಷ್ಟೇ ಹೇಳಿದರೂ ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ಬಿಡುತ್ತಿಲ್ಲ. ನಂತರ ಅವರನ್ನು ತಡೆದರೆ ಪೊಲೀಸರನ್ನು ದೂರಲಾಗುತ್ತಿದೆ. ಪೊಲೀಸರು ಜನರ ರಕ್ಷಣೆಯ ಸಲುವಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಎಂಬ ವಿಷಯವನ್ನು ಮೊದಲು ತಿಳಿಯಬೇಕು. ಮನೆಯಿಂದ ಹೊರಬರದೇ ಸಹಕರಿಸಬೇಕು ಎಂದು ವಿನಂತಿಸಿದರು.

    ಕೃಷಿ ಚಟುವಟಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡೆ ನಡೆಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಲಾಕ್​ಡೌನ್ ನಿಯಮವನ್ನೇ ಸರಿಯಾಗಿ ಪಾಲಿಸಿದರೆ ಸೀಲ್ಡ್ ಮಾಡುವ ಅಗತ್ಯ ಬರುವುದಿಲ್ಲ. ಅಂತಹ ಅನಿವಾರ್ಯತೆ ಎದುರಾದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಬೇಕಾಗುತ್ತದೆ ಎಂದರು.

    ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ನಿರ್ದೇಶಕರಾದ ಉಮೇಶ ಭಾಗ್ವತ, ಸುಬ್ಬಣ್ಣ ಬೋಳ್ಮನೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸಚಿವರ ಮಾಧ್ಯಮ ಸಲಹೆಗಾರ ರಾಮು ನಾಯ್ಕ, ಪ್ರಮುಖರಾದ ವಿಜಯ ಮಿರಾಶಿ, ಬಾಲಕೃಷ್ಣ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts