More

    ಕೃಷಿಕ ಸಮಾಜದ ನೂತನ ಕಟ್ಟಡ ಉದ್ಘಾಟನೆ

    ಸಿಂದಗಿ: ಕಳೆದ ನಾಲ್ಕು ದಶಕಗಳಿಂದಲೂ ರಾಜ್ಯದ ವಿವಿಧೆಡೆ ಸರ್ಕಾರ ಮತ್ತು ರೈತರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷಿಕ ಸಮಾಜದ ಪದಾಧಿಕಾರಿಗಳು ಸಂಘಟಿತರಾಗಿದ್ದು ಸ್ಮರಣೀಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ನೂತನ ಕೃಷಿಕ ಸಮಾಜದ ಕಟ್ಟಡದ ಮೇಲಂತಸ್ತಿನಲ್ಲಿ ನಿರ್ಮಿಸಲಾಗುವ ಸಭಾಂಗಣ ಹಾಗೂ ಅತಿಥಿಗೃಹ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 2024-25 ಹಾಗೂ 2025-26ರ ಸಾಲಿನ ಎರಡು ಹಂತಗಳಲ್ಲಿ ತಲಾ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ವಾಗ್ದಾನ ನೀಡಿದರು. ಜಿಲ್ಲೆಯ ಎಲ್ಲ ಕೃಷಿಕ ಸಮಾಜದ ಅಧ್ಯಕ್ಷರು ಸೇರಿ ಸಭೆ ನಡೆಸಿ, ಪ್ರತಿ ತಾಲೂಕು ಕೇಂದ್ರದಲ್ಲೂ ಕಟ್ಟಡವನ್ನು ನಿರ್ಮಿಸಲು ಬೇಡಿಕೆಯಿತ್ತರೆ, ಅದನ್ನು ಸರ್ಕಾರದ ಗಮನಕ್ಕೆ ತಂದು ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

    ತಾಲೂಕಿನ ಕೃಷಿ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಕೃಷಿ ಪಂಡಿತರು, ವಿಜ್ಞಾನಿಗಳನ್ನು ಕರೆಯಿಸಿ ರೈತರಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನ ಹಾಗೂ ತಳಿಗಳ ವಿವರಣೆ ಮತ್ತು ಲಾಭದಾಯಕ ಕೃಷಿ ಕುರಿತ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೈತರು ಕೃಷಿಕ ಸಮಾಜದ ಕಟ್ಟಡಗಳಲ್ಲಿ ಸಭೆ, ಚಿಂತನ-ಮಂಥನ ನಡೆಸಬೇಕು ಎಂದರು.

    ಮುದ್ದೇಬಿಹಾಳ ಕೃಷಿಕ ಸಮಾಜದ ಅಧ್ಯಕ್ಷ ವೆಂಕನಗೌಡ ಪಾಟೀಲ, ಬಸವನಬಾಗೇವಾಡಿಯ ಅಧ್ಯಕ್ಷ ಶಿವನಗೌಡ ಪಾಟೀಲ, ಅಶೋಕ ವಾರದ ಮಾತನಾಡಿ, ಸಿಂದಗಿಯಲ್ಲಿ ಕೃಷಿಕ ಸಮಾಜದ ಕಟ್ಟಡ ಇತಿಹಾಸದಲ್ಲಿಯೇ ಪ್ರಥಮದ್ದಾಗಿದೆ. ಕಬ್ಬು ಬೆಳೆದ ರೈತರ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಿ ಲಗಾನಿ ಲೂಟಿಯನ್ನು ತಡೆಯಬೇಕು. ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ಅರಿತು, ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಸಿಂದಗಿ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಕಳೆದ ಹತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿ ನೂತನ ಕಟ್ಟಡವು ಸಂಸದರ ನಿಧಿಯಿಂದ 10 ಲಕ್ಷ ರೂ. ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವತಿಯಿಂದ 15 ಲಕ್ಷ ರೂ. ಸೇರಿದಂತೆ ಒಟ್ಟು 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

    ಇಂಡಿ ಉಪವಿಭಾಗದ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿದರು. ಸಿದ್ರಾಮಪ್ಪ ರಂಜಣಗಿ, ಉಮೇಶ ಜೋಗೂರ, ರಾಚಪ್ಪ ವಾರದ, ಸಂಗಾರೆಡ್ಡಿ ದೇಸಾಯಿ, ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಇತರರಿದ್ದರು. ಕೃಷಿ, ಪಶು, ಅರಣ್ಯ ಮತ್ತು ಮತ್ಸೃ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts