More

    ಕೃತಿಗಳು ಮಾಡಬೇಕು ನಮ್ಮ ದುರಸ್ತಿ  -ಡಾ.ಎಂ.ಜಿ.ಈಶ್ವರಪ್ಪ ಆಶಯ -ಸಣ್ಣ ಕತೆಗಳ ಸಂಕಲನ ಬಿಡುಗಡೆ 

    ದಾವಣಗೆರೆ: ಸಾಹಿತ್ಯ ಕೃತಿಗಳು ನಮ್ಮನ್ನು ದುರಸ್ತಿ ಮಾಡಬೇಕು. ನಮ್ಮಲ್ಲಿನ ಅಶುಭಗಳನ್ನು ನಿರ್ಮೂಲನೆ ಮಾಡಬೇಕು ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಆಶಯ ವ್ಯಕ್ತಪಡಿಸಿದರು.
    ಇಲ್ಲಿನ ಆರ್‌ಎಲ್ ಕಾನೂನು ಕಾಲೇಜು ಸಭಾಂಗಣದಲ್ಲಿ ಭಾನುವಾರ, ದಾವಣಗೆರೆ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಸಣ್ಣ ಕತೆಗಳ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸ್ವಾತಂತ್ರೃ ಸಿಕ್ಕು 75 ವರ್ಷವಾಗಿದೆ. ಪಠ್ಯಾಧರಿತ ಶಿಕ್ಷಣಕ್ಕೆ ಸೀಮಿತವಾದ ನಮ್ಮಲ್ಲಿ ಮಾನವೀಯತೆಯೇ ಮರೆಯಾಗಿದೆ. ಜಾತಿ-ಮತ-ಧರ್ಮ, ಅಸಮಾನತೆ ಮೀರಿ ಬೆಳೆಯಲು ಸಾಧ್ಯವಾಗಿಲ್ಲ. ನ್ಯಾಯ ಒದಗಿಸಲಿಕ್ಕಾಗಿಯೇ ನ್ಯಾಯಾಲಯಗಳಿವೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿಯೇ ಸಾಹಿತ್ಯವಿದೆ ಎಂದು ವಿಶ್ಲೇಷಿಸಿದರು.
    ಇಂದಿನ ವೃತ್ತ ಪತ್ರಿಕೆ, ಟೀವಿಗಳಲ್ಲಿ ಅಪರಾಧ ಕೃತ್ಯಗಳೇ ವಿಜೃಂಭಿಸಿದ್ದು, ಮನಸ್ಸನ್ನು ಮದುಡುವಂತಾಗಿದೆ. ಸಂತೋಷ ನೀಡಬೇಕಿದ್ದ ಬದುಕು ಹೀನಾಯವಾಗಿದೆ. ಕೃತಿಗಳ ಮೂಲಕ ಓದುಗರು ತಮ್ಮಲ್ಲಿನ ಅಮಂಗಳಗಳನ್ನು ನಿವಾರಿಸಿಕೊಳ್ಳಬೇಕು. ಪ್ರೀತಿ-ವಿಶ್ವಾಸ, ಧರ್ಮ-ಅಹಿಂಸೆ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
    ಸಾಹಿತ್ಯ ಕೃತಿಗಳು ಸುಶಿಕ್ಷಿತ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಸಮಾಜದ ತಳಮಳಗಳನ್ನು ಕೃತಿಕಾರರು ಮಾರ್ಮಿಕವಾಗಿ ಹೇಳಿದ್ದಾರೆ. ನಾವು ಎಚ್ಚರವಾಗಿರುವುದಲ್ಲದೆ ಸುತ್ತಲಿನ ಸಮಾಜವನ್ನೂ ಎಚ್ಚರ ಮಾಡುವ ಸಾಮರ್ಥ್ಯ ಕೃತಿಗಿದೆ ಎಂದರು.
    ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ಚಿಂತಕ ಕೆ.ಪಿ.ಸುರೇಶ ಮಾತನಾಡಿ ಲೇಖಕರು ಸಾಮಾಜಿಕ ಹಾಗೂ ನೈತಿಕ ಪ್ರಜ್ಞೆಯನ್ನು ಕಾಲಕಾಲಕ್ಕೆ ಉದ್ದೀಪನಗೊಳಿಸುತ್ತಲೇ ಬಂದಿದ್ದಾರೆ. ಸೈನಿಕರು ಯುದ್ಧ ಮಾಡುವುದಕ್ಕಿಂತ ಮುನ್ನ ಶಸ್ತ್ರಾಸ್ತ್ರ ಹರಿತಗೊಳಿಸುವಂತೆಯೇ ಲೇಖಕರು, ಸಾಹಿತಿಗಳು ಸಂವೇದನೆಯನ್ನು ಚುರುಕುಗೊಳಿಸಬೇಕು. ಅದುವೇ ಸಾಹಿತ್ಯದ ಜವಾಬ್ದಾರಿ ಎಂದರು.
    ಸಿನಿಮಾಗಳಿಗೆ ಉತ್ತಮ ಕತೆಗಳು ಸಿಗುತ್ತಿಲ್ಲ ಎಂದು ಚಿತ್ರ ನಿರ್ದೇಶಕರೊಬ್ಬರು ಇತ್ತೀಚೆಗೆ ಹೇಳಿದ್ದಾರೆ. ಅದು ಸತ್ಯವಲ್ಲ. ನಾವು ಕಣ್ಣು ತೆರೆದು ನೋಡಿದಷ್ಟು ಸಾವಿರಾರು ಕತೆಗಳು ಕಂಡುಬರಲಿವೆ. ಕೃತಿಗಳು ಬೀರುವ ಸಾಮಾಜಿಕ ಪರಿಣಾಮದ ಬಗ್ಗೆಯೂ ಅಧ್ಯಯನ ಆಗಬೇಕಿದೆ ಎಂದರಲ್ಲದೆ ಶ್ರೀನಿವಾಸ ಅವರ ಸಣ್ಣ ಕತೆಗಳು ದೀರ್ಘತೆ ಪಡೆಯಬೇಕು ಎಂದು ಆಶಿಸಿದರು.
    ಕೃತಿ ಬಗ್ಗೆ ಶಿವಮೊಗ್ಗದ ಉಪನ್ಯಾಸಕಿ ಪಿ.ಭಾರತಿದೇವಿ, ಕೃತಿಕಾರ ಬಿ.ಶ್ರೀನಿವಾಸ ಮಾತನಾಡಿದರು. ಚಿತ್ರದುರ್ಗದ ಕವಿ ಚಂದ್ರಶೇಖರ ತಾಳ್ಯ, ಮೇ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾದ ಎಲ್.ಎಚ್.ಅರುಣಕುಮಾರ್, ಅನೀಸ್‌ಪಾಷಾ, ತಳಮಳ ಪ್ರಕಾಶನದ ಪ್ರಕಾಶಕ ಮಹೇಶ ಎನ್. ಬಳ್ಳಾರಿ ಇದ್ದರು. ಪೂಜಾ ಸಿಂೆ ಇತರರು ಸಣ್ಣ ಕತೆ ಓದಿದರು. ಡಿ.ಸನಾವುಲ್ಲ ನವಿಲೇಹಾಳ್ ಕಾರ್ಯಕ್ರಮ ನಿರೂಪಿಸಿದರು. ಮೇ ಸಾಹಿತ್ಯ ಸಂಘಟನೆ ಹಾಗೂ ಗದಗದ ಲಡಾಯಿ ಸಂಘಟನೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts