More

    ಕುಸಿದು ಬಿದ್ದ ನಿರ್ಮಾಣ ಹಂತದಲ್ಲಿದ್ದ ಕಾಲುವೆ

    ಎರಡು ತಿಂಗಳ ಹಿಂದೆಯಷ್ಟೇ ಆರಂಭ

    ಯಳಂದೂರು: ತಾಲೂಕಿನ ಗಣಿಗನೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾಲುವೆ ಕುಸಿದಿದ್ದು, ಇದು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.


    ಗಣಿಗನೂರು ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಕಾಲುವೆ ನಿರ್ಮಾಣ ಕಾಮಗರಿ ಕೈಗೆತ್ತಿಕೊಳ್ಳಲಾಗಿತ್ತು. ಕಾವೇರಿ ನೀರಾವರಿ ನಿಗಮದ ಕೊಳ್ಳೇಗಾಲ ವಿಭಾಗ ವತಿಯಿಂದ 30 ಲಕ್ಷ ರೂ.ವೆಚ್ಚದಲ್ಲಿ ಈ ಕಾಮಗರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಗ್ರಾಮದಲ್ಲಿನ ರೈತರ ಜಮೀನಿಗೆ ನೀರು ಸರಾಗವಾಗಿ ಹೋಗುಲು ಅನುಕೂಲವಾಗಬೇಕೆಂಬ ಉದ್ದೇಶದಿಂದ 2 ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಇತ್ತೀಚಿಗೆ ತರಾತುರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡದ ಪರಿಣಾಮ ಹಾಗೂ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ ಹಿನ್ನೆಲೆಯಲ್ಲಿ ಇದು ಕುಸಿದಿದೆ ಎಂಬುದು ಸಾರ್ವಜನಿಕರ ಆರೋಪ.


    ಮಕಾಡೆ ಮಲಗಿದ ಒಂದು ಬದಿಯ ಗೋಡೆ: ಕಾಲುವೆ ನೀರು ಹರಿಸಲು ನಿರ್ಮಾಣ ಮಾಡಲಾಗಿದ್ದ ಕಾಲುವೆಯ ಒಂದು ಬದಿಯ ಗೋಡೆಯು ಸಂಪೂರ್ಣವಾಗಿ ಒರಗಿದೆ. ಗುಣಮಟ್ಟದ ಕಬ್ಬಿಣವನ್ನು ಇದಕ್ಕೆ ಬಳಸದಿರುವುದು, ಕಾಲುವೆ ತಳಭಾಗಕ್ಕೆ ಕಾಂಕ್ರಿಟ್ ಸರಿಯಾಗಿ ಹಾಕದಿರುವುದು ಹಾಗೂ ಬದುಗಳಿಗೆ ಇಲ್ಲೇ ತೋಡಲಾಗಿದ್ದ ಮಣ್ಣನ್ನು ಸುರಿದಿರುವುದೇ ಘಟನೆಗೆ ಕಾರಣ ಎಂಬುದು ಈ ಭಾಗದ ರೈತರ ದೂರು.


    ಕಾಮಗರಿ ಹೊಣೆ ಹೊತ್ತವರು ಇದಕ್ಕೆ ಸಂಪೂರ್ಣ ಕಾರಣವಾಗಿದ್ದು, ಜನಪ್ರತಿನಿಧಿಗಳು ಸರ್ಕಾರದ ಹಣವನ್ನು ಈ ರೀತಿ ನೀರಿನಲ್ಲಿ ಪೋಲಾಗಲು ಬಿಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಲದೆ ಇದನ್ನು ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.


    ನೀರಾವರಿ ಇಲಾಖೆಯ ಕೆಲಸ ಆರಂಭವಾಗುವುದೇ ಮಳೆಗಾಲದಲ್ಲಿ: ನೀರಾವರಿ ಇಲಾಖೆ ವತಿಯಿಂದ ನಡೆಯುವ ಬಹುತೇಕ ಕಾಮಗಾರಿಗಳು ಮಳೆಗಾಲದಲ್ಲೇ ಆರಂಭಗೊಳ್ಳುತ್ತವೆ. ತಾಲೂಕಿನ ಎಳೆಪಿಳ್ಳಾರಿ ದೇಗುಲದ ಬಳಿ ನಿರ್ಮಾಣ ಹಂತದಲ್ಲಿರುವ ಕಾಲುವೆ ಹಾಗೂ ಪಾಲದ ಕಥೆಯೂ ಇದೆ ಆಗಿದೆ. ಇನ್ನೂ ಇದರ ಸೆಂಟ್ರಿಂಗ್ ತೆಗೆದೇ ಇಲ್ಲ. ಈಗಾಗಲೇ ಇಲ್ಲಿ ನೀರು ಬಿಡಲಾಗಿದ್ದು, ಇದು ಕೂಡ ಕುಸಿಯುವ ಸಂಭವವಿದೆ. ಅಲ್ಲದೆ ಹೊನ್ನೂರು, ದುಗ್ಗಹಟ್ಟಿ, ಮದ್ದೂರು, ಕೆಸ್ತೂರು ಸೇರಿದಂತೆ ವಿವಿಧೆಡೆ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ.

    ಗಣಿಗನೂರು ಗ್ರಾಮದಲ್ಲಿ ನೀರಾವರಿ ಇಲಾಖೆ ವತಿಯಿಂದ ಕೃಗೆತ್ತಿಕೊಳ್ಳಲಾದ ಕಾಲುವೆ ಕಾಮಗರಿ ಒಂದು ತಿಂಗಳೊಳಗೆ ಕುಸಿದು ಬಿದ್ದಿದೆ. ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕಾನೂನು ಕ್ರಮ ಆಗಬೇಕು.
    ಪ್ರಸಾದ್ ಗಣಿಗನೂರು ಗ್ರಾಮದ ನಿವಾಸಿ.

    ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದಲ್ಲಿನ ಕಾಲುವೆ ಕೆಲವು ಕಡೆ ಮುರಿದು ಬಿದ್ದಿರುವುದು ಗಮನಕ್ಕೆ ಬಂದಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರನಿಗೆ ಸೂಚಿಸಲಾಗಿದೆ.
    ರಮೇಶ್ ಎಇಇ ಕಾವೇರಿ ನೀರಾವರಿ ಇಲಾಖೆ ಕೊಳ್ಳೇಗಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts