More

    ಕುರುವಳ್ಳಿ ಬಂಡೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು 24 ಗಂಟೆ ಗಡುವು; ಇಲ್ಲವಾದರೆ ತಾಲೂಕು ಕಚೇರಿ ಎದುರು ಏಕಾಂಗಿ ಉಪವಾಸ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಕೆ

    ತೀರ್ಥಹಳ್ಳಿ: ಗಣಿ ಇಲಾಖೆಯ ಅಧಿಕಾರಿಗಳು ಕುರುವಳ್ಳಿ ಬಂಡೆಗೆ ಹೋಗುವ ಮಾರ್ಗದಲ್ಲಿ ಹೊಡೆದಿರುವ ಟ್ರಂಚ್ ಕೂಡಲೆ ಮುಚ್ಚಿ ಕಾರ್ಮಿಕರ ಉದ್ಯೋಗಕ್ಕೆ ಅವಕಾಶವನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಶುಕ್ರವಾರ ಬೆಳಗ್ಗೆಯಿಂದ 24 ಗಂಟೆ ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಕೆ ನೀಡಿದರು.
    ಬಂಡೆ ಕಾರ್ಮಿಕರ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೇಲಿನಕುರುವಳ್ಳಿ ಕಾರ್ಮಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಗುರುವಾರ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಹಸಿವಿಗೆ ಕಾನೂನು, ಕಾಯ್ದೆ ಯಾವುದರ ತಡೆಯೂ ಆಗಬಾರದು. ಶುಕ್ರವಾರ ಬೆಳಗ್ಗೆಯೊಳಗೆ ಸಮಸ್ಯೆ ಬಗೆಹರಿಯಬೇಕು ಎಂದು ಆಗ್ರಹಿಸಿದರು.
    ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರನ್ನು ವಂಚಿಸಿಕೊಂಡು ಬಂದಿದ್ದು ನ್ಯಾಯ ಕೊಡಿಸದಿರುವುದು ಖಂಡನೀಯ. ಶ್ರಮದ ದುಡಿಮೆಯಿಂದಲೇ ಬದುಕು ಸಾಗಿಸುತ್ತಿರುವ ಬಂಡೆ ಕಾರ್ಮಿಕರು ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಮರುದಿನ ಉಪವಾಸ ಇರಬೇಕಾದ ಅನಿವಾರ್ಯತೆಯಿದೆ. ಇದರ ಗಂಭೀರತೆಯನ್ನು ಸಂಭಂಧಿಸಿದ ಅಧಿಕಾರಿಗಳು ತಿಳಿದಿರಬೇಕು. ಬಡತನದಿಂದ ಬಂದ ನನಗೆ ಹಸಿವಿನ ಅರಿವಿದೆ ಎಂದು ಹೇಳಿಕೊಳ್ಳುತ್ತಿರುವ ಆರಗ ಜ್ಞಾನೇಂದ್ರ ಅವರು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಗಣಿ ಇಲಾಖೆಯ ಅಧಿಕಾರಿ ಇಲ್ಲಿನ ಕಾರ್ಮಿಕನೊಬ್ಬನಿಗೆ ಗಡಿಪಾರು ಮಾಡುವ ಬೆದರಿಕೆ ಹಾಕುವ ಮಟ್ಟಕ್ಕೆ ದರ್ಪ ತೋರುತ್ತಾನೆ ಎಂದರೆ ಯಾವ ಮಟ್ಟಕ್ಕೆ ಇವರು ಇಳಿದಿದ್ದಾರೆ ಎಂದು ಹೇಳಿದರು.
    ಮೇಲಿನಕುರುವಳ್ಳಿ ಗ್ರಾಪಂ ಸದಸ್ಯರಾದ, ನಾಗರಾಜ ಪೂಜಾರಿ, ನಿಶ್ಚಲ್ ಮಾತನಾಡಿ, ತಲೆತಲಾಂತರದಿಂದ ಇಲ್ಲಿ ಬದುಕು ಕಟ್ಟಿಕೊಂಡಿರುವವರಿಗೆ ಬಂಡೆ ಲೀಸ್ ದೊರೆಯಬೇಕಿದೆ. ಕಾರ್ಮಿಕರ ಸಂಕಷ್ಟವನ್ನೇ ಅರಿಯದ ಗಣಿ ಇಲಾಖೆಯ ಅಧಿಕಾರಿಗಳು ಬಾಲಿಶವಾಗಿ ವರ್ತಿಸುತ್ತಿದ್ದಾರೆ. ತಲಾ ಒಂದು ಸಾವಿರ ರೂ.ನಂತೆ 68 ಕಾರ್ಮಿಕರಿಂದ ಕಟ್ಟಿಸಿಕೊಂಡಿರುವ ಹಣ ಕೂಡ ಇಲಾಖೆ ವಾಪಸು ಕೊಟ್ಟಿಲ್ಲ. ಸಾಲದ್ದಕ್ಕೆ ಕಳೆದ 5 ವರ್ಷದಲ್ಲಿ 62 ಬಾರಿ ರೈಡ್ ಮಾಡಿ ಕಾರ್ಮಿಕರ ಉಳಿ ಸುತ್ತಿಗೆಯನ್ನೂ ಹೊತ್ತೊಯ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಭೆಗೂ ಮೊದಲು ಮೇಲಿನಕುರುವಳ್ಳಿಯಿಂದ ತೀರ್ಥಹಳ್ಳಿಯ ತಾಲೂಕು ಕಚೇರಿವರೆಗೆ ನೂರಾರು ಕಾರ್ಮಿಕರು ಪಾದಯಾತ್ರೆ ನಡೆಸಿದರು. ಕೆಲಕಾಲ ತಾಲೂಕು ಕಚೇರಿ ಮುಂಭಾಗ ಹೆದ್ದಾರಿ ತಡೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts