More

    ಕುರುಬ ಹೋರಾಟ ರಾಜಕೀಯ ಹಿನ್ನೆಲೆಯದ್ದಲ್ಲ ; ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ

    ಶಿರಾ : ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹಕ್ಕೊತ್ತಾಯ ಪಾದಯಾತ್ರೆ ರಾಜಕೀಯ ಹಿನ್ನೆಲೆಯದ್ದಲ್ಲ. ಯಾವೊಬ್ಬ ವ್ಯಕ್ತಿಯ ಪ್ರಭಾವಕ್ಕೂ ಅಲ್ಲ. ಇದು ಕುರುಬ ಪರಂಪರೆಯ ಉಳಿವಿಗಾಗಿ ಎಂದು ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

    ಎಸ್‌ಟಿ ಮೀಸಲು ಬೇಡಿಕೆ ಮುಂದಿಟ್ಟುಕೊಂಡು ಕಾಗಿನೆಲೆಯಿಂದ ಬೆಂಗಳೂರಿಗೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ 14ನೇ ದಿನವಾದ ಗುರುವಾರ ಜಿಲ್ಲೆಗೆ ಕಾಲಿಟ್ಟಿದೆ. ಗಡಿಭಾಗವಾದ ತಾವರೆಕೆರೆಯಲ್ಲಿ ಜಿಲ್ಲಾ ಕುರುಬರ ಸಂಘದಿಂದ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದ ವೇಳೆ ವೇದಿಕೆ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

    ಪಾದಯಾತ್ರೆ ಆರಂಭಿಸಿದಾಗ ನಮ್ಮಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಜನರನ್ನು ಸೇರಿಸಬೇಕು, ರೂಪುರೇಷೆ ಹೇಗಿರಬೇಕೆಂಬುದು ಕಾಡುತ್ತಿತ್ತು. ಆದರೆ ಮೀಸಲಿನಿಂದ ಇಷ್ಟು ವರ್ಷ ವಂಚಿತರಾಗಿದ್ದೇವೆಂಬ ಕಾರಣಕ್ಕಾಗಿಯೇ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಹೆಜ್ಜೆ ಹಾಕುತ್ತಿದ್ದಾರೆ. ಮತದಡಿ ಒಂದಾಗುತ್ತಿದ್ದ ಕುರುಬ ಸಮಾಜ ಇವತ್ತು ಕಾಗಿನೆಲೆ ಮಠದಡಿ ಒಗ್ಗೂಡಿ ಹೋರಾಟ ನಡೆಸುತ್ತಿದ್ದೇವೆ. ಕುರುಬರು ಒಂದಾದರೆ ಮೀಸಲಾತಿ ದಕ್ಕುತ್ತದೆ ಎಂಬ ಗೊರವಯ್ಯ ಕಾರ್ಣಿಕ ನುಡಿಯಂತೆ ಹೆಜ್ಜೆ ಹಾಕಿದ್ದೇವೆ. ಈ ಹೋರಾಟಕ್ಕೆ ಸದ್ಯ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಂಸತ್ ನಡುಗಿಸುತ್ತೇವೆ: ಈ ಹಿಂದಿನ ನಮ್ಮ ಸಮಾಜದ ಮುಖಂಡರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಇವತ್ತು ಪಾದಯಾತ್ರೆಯಂತಹ ಕಠಿಣ ಶ್ರಮದೊಂದಿಗೆ ಮೀಸಲಾತಿ ಹಕ್ಕೊತ್ತಾಯ ಮಾಡುವಂತಾಗಿದೆ. ನಮ್ಮ ಪಾದಯಾತ್ರೆಯ ಭಾಗವಾಗಿ ಫೆ.7ರಂದು ಬೆಂಗಳೂರಿನಲ್ಲಿ ಸಮಾಜದ 10ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯೊಂದಿಗೆ ಸಭೆ ನಡೆಸಿ ಸಂಸತ್ ನಡುಗಿಸುತ್ತೇವೆ ಎಂದು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

    ಕಳೆದ 50 -60 ವರ್ಷದಿಂದ ಅಧಿಕಾರ ನಡೆಸಿದ ಸರ್ಕಾರಗಳು ಕುರುಬ ಸಮಾಜಕ್ಕೆ ಮೀಸಲಾತಿ ನೀಡದೆ ವಂಚನೆ ಮಾಡುತ್ತ ಬಂದಿವೆ. ರಾಜ್ಯಾದ್ಯಂತ ಕುರುಬ ಸಮಾಜ ಒಕ್ಕೂಟ ವ್ಯವಸ್ಥೆಗೆ ಬಂದಿದ್ದು, ಉಗ್ರ ಹೋರಾಟ ಮಾಡಿಯಾದರೂ ಎಸ್‌ಟಿ ಮೀಸಲಾತಿ ಪಡೆಯುತ್ತೇವೆ ಎಂದು ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು.

    ಸರೂರು ಆಗತೀರ್ಥ ಶ್ರೀರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ಮಕಣಾಪುರ ಶ್ರೀ ಸೋಮಲಿಂಗೇಶ್ವರ ಸ್ವಾಮೀಜಿ, ಮೈಲಾರದ ರಾಮಪ್ಪಗೊರವಯ್ಯ, ಬೆಂಗಳೂರು ಶಾಖಾಮಠದ ಶ್ರೀ ಮುತ್ತೇಶ್ವರ ಸ್ವಾಮೀಜಿ, ತುರುವಿನಾಳ ಮಠದ ಅಮೋಘ ರೇವಣ್ಣಸಿದ್ದೇಶ್ವರ ಸ್ವಾಮೀಜಿ, ಸಂಬಯ್ಯ ಸ್ವಾಮೀಜಿ, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು, ಜಿಪಂ ಅಧ್ಯಕ್ಷೆ ಲತಾ, ಜಿಪಂ ಸದಸ್ಯ ಸಿದ್ದರಾಮಯ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಭಾಗ್ಯಮ್ಮ, ಟಿ.ಇ.ರಘುರಾಮ್ ಇದ್ದರು.

    ರಾಜಕೀಯ ಮುಖಂಡರ ದಂಡು: ಪಾದಯಾತ್ರೆ ಶಿರಾ ತಾಲೂಕಿಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಂಡೋಪತಂಡವಾಗಿ ಶ್ರೀಗಳ ದರ್ಶನದೊಂದಿಗೆ ಆಶೀರ್ವಾದ ಪಡೆದರು. ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಂಜಯ್ ಜಯಚಂದ್ರ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts