More

    ಕುರಿಗಳಿಗೆ ರೋಗ ಬರದಂತೆ ಕುರಿಯೊಂದನ್ನು ಬೇವಿನ ಮರಕ್ಕೆ ನೇತು ಹಾಕಿದ್ರು!

    ಗಜೇಂದ್ರಗಡ: ಕುರಿಗಳಿಗೆ ರೋಗ ಬರದಂತೆ ಚಿಕಿತ್ಸೆಗೆ ಮುಂದಾಗುವ ಬದಲಿಗೆ ಜೀವಂತ ಕುರಿಯನ್ನು ಬೇವಿನ ಮರಕ್ಕೆ ನೇತು ಹಾಕುವ ಮೌಢ್ಯ ಇನ್ನೂ ಜೀವಂತವಾಗಿದೆ.

    ತಾಲೂಕಿನಾದ್ಯಂತ ಬೀಡುಬಿಟ್ಟಿರುವ ಬೆಳಗಾವಿ, ನಿಪ್ಪಾಣಿ, ಹಾವೇರಿ, ವಿಜಾಪುರ, ಚಿಕ್ಕೊಡಿ, ಬೈಲಹೊಂಗಲ, ಬಾಗಲಕೋಟೆ, ಕೊಪ್ಪಳ ಮುಂತಾದ ಜಿಲ್ಲೆಗಳ ಸಂಚಾರಿ ಕುರಿಗಾರರು ತಮ್ಮ ಬದುಕಿಗೆ (ಕುರಿಗೆ) ಯಾವುದೇ ಸಾಂಕ್ರಾಮಿಕ ರೋಗ ತಗುಲಬಾರದೆಂಬ ಉದ್ದೇಶದಿಂದ ಜೀವಂತ ಕುರಿಯನ್ನು ಬೇವಿನ ಮರಕ್ಕೆ ನೇತು ಹಾಕುತ್ತಿದ್ದಾರೆ. ಕುರಿಗಾರರು ಮೂರು ರಸ್ತೆ ಕೂಡುವ ಜಾಗದಲ್ಲಿರುವ ಬೇವಿನಮರಕ್ಕೆ ಕುರಿಯನ್ನು ಜೋತು ಬಿಡುತ್ತಾರೆ. ಆ ಕುರಿ ಎರಡ್ಮೂರು ದಿನ ಚಡಪಡಿಸುತ್ತ, ನರಳಿ ಸಾಯುತ್ತದೆ.

    ಏತಕ್ಕಾಗಿ ಮರಕ್ಕೆ ನೇತು ಹಾಕುತ್ತಾರೆ? ಕುರಿಗಳಿಗೆ ರೋಗ-ರುಜಿನಗಳು ಬಾರದಿರಲಿ ಎಂಬ ಕಾರಣಕ್ಕೆ ಹುಣ್ಣಿಮೆಯ ಮಾರನೇ ದಿನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುವಾಗ ಮೂರು ರಸ್ತೆ ಕೂಡುವ ಸ್ಥಳದಲ್ಲಿನ ಬೇವಿನಮರಕ್ಕೆ ಜೀವಂತ ಕುರಿಯೊಂದನ್ನು ತಲೆ ಕೆಳಗೆ ಮಾಡಿ ತೂಗು ಬಿಟ್ಟು ತಿರುಗಿ ನೋಡದಂತೆ ಹೋಗುತ್ತಾರೆ.

    ನಾಟಿ ಔಷಧ, ಮೂಢನಂಬಿಕೆ: ಕುರಿಗಳಲ್ಲಿ ರೋಗ ಕಾಣಿಸಿಕೊಂಡ ಕೂಡಲೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಬಿಟ್ಟು ನಾಟಿ ಔಷಧ, ಪೂಜೆ, ಮಂತ್ರ ಹಾಕಿಸುವುದು ಇತ್ಯಾದಿ ಮೂಢನಂಬಿಕೆಯತ್ತ ಕುರಿಗಾಹಿಗಳು ವಾಲುತ್ತಾರೆ. ಹೀಗಾಗಿ ರೋಗ ತೀವ್ರಗೊಂಡು ಕುರಿ, ಮೇಕೆಗಳು ಸಾಯುವ ಸಂಖ್ಯೆ ಹೆಚ್ಚುತ್ತಿದೆ. ಜೀವಂತ ಅಥವಾ ಸತ್ತ ಕುರಿಗಳನ್ನು ಬೇವಿನ ಮರಕ್ಕೆ ನೇತು ಹಾಕುವುದರಿಂದ ಮಾರಿ ಅಥವಾ ಇನ್ನಾವುದೋ ರೋಗ ಗ್ರಾಮದಿಂದ ನಿಮೂಲನೆ ಯಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

    ಕುರಿಗಾರರು ಪಶು ವೈದ್ಯರನ್ನು ಸಂರ್ಪಸದೆ ತಾವೇ ಔಷಧ ಹಾಕುವುದರಿಂದ ಕುರಿಗಳು ಸಾಯುತ್ತಿವೆ. ಸರ್ಕಾರ ಸಾಕಷ್ಟು ಲಸಿಕೆ, ಔಷಧ ಸೌಲಭ್ಯಗಳನ್ನು ಕಲ್ಪಿಸಿದೆ. ಸಂಚಾರಿ ಕುರಿಗಾರರು ಕುರಿಗಳಲ್ಲಿ ಅನಾರೋಗ್ಯ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣವೇ ಪಶುವೈದ್ಯರನ್ನು ಸಂರ್ಪಸಬೇಕು. ಕುರಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು.

    | ಜಯಶ್ರೀ ಪಾಟೀಲ

    ತಾಲೂಕು ಪಶುವೈದ್ಯಾಧಿಕಾರಿ, ಗಜೇಂದ್ರಗಡ

    ಮೂಢನಂಬಿಕೆಗಳ ಹೆಸರಿನಲ್ಲಿ ಜೀವಂತ ಪ್ರಾಣಿಗಳನ್ನು ಮರಕ್ಕೆ ನೇತು ಹಾಕುವ ಕುರಿಗಾರರು ಅನಿಷ್ಟ ಪದ್ಧತಿಯಿಂದ ದೂರ ಉಳಿಯಬೇಕು. ಮುಗ್ಧ ಪ್ರಾಣಿ ಬಲಿಯಿಂದ ಕುರಿಗಳ ರೋಗ ನಿವಾರಣೆಯಾಗುವುದಿಲ್ಲ. ಕುರಿಗಾರರಲ್ಲಿನ ಮೌಢ್ಯತೆ ದೂರ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಸಂಬಂಧಿಸಿದ ಇಲಾಖೆಯವರು ಕೈಗೊಳ್ಳಬೇಕು.

    | ಅಂದಪ್ಪ ಬಿಚ್ಚೂರ

    ಹಾಲುಮತ ಸಮಾಜದ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts