More

    ಕುಮಾರೇಶ್ವರ ರಥ ಪುರಪ್ರವೇಶ

    ದಾವಣಗೆರೆ: ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನಾಧಾರಿತ ‘ವಿರಾಟಪುರ ವಿರಾಗಿ’ ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ರಾಜ್ಯದ ಆರು ಮಾರ್ಗಗಳಲ್ಲಿ ಡಿ.20ರಿಂದ ಶ್ರೀ ಕುಮಾರೇಶ್ವರ ರಥ ಸಂಚಾರ ಆರಂಭವಾಗಿದೆ.
    ಮೈಸೂರು ಕಡೆಯಿಂದ ಶರಣ ಮಾರ್ಗದ ರಥ ಯಾತ್ರೆ, ಚಿತ್ರದುರ್ಗ ಕಡೆಯಿಂದ ಶನಿವಾರ ಸಂಜೆ ದಾವಣಗೆರೆ ಪುರ ಪ್ರವೇಶಿಸಿತು. ಹೊರವಲಯದ ಆವರಗೆರೆ ಬಳಿ ಶ್ರೀ ಜಿಪಿಜಿಎಂ ಶಾಲೆ ಆವರಣಕ್ಕೆ ಆಗಮಿಸಿದ ರಥವನ್ನು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಅಥಣಿ ವೀರಣ್ಣ ಸ್ವಾಗತಿಸಿದರು.
    ನಂತರ ಪಿಬಿ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತದ ಬಳಿ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆವರಣದ ಬಳಿಕ, ಪುರಾಣ ಪ್ರವಚನ ಆಯೋಜನೆಯಾಗಿದ್ದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನ ತಲುಪಿತು. ವಿವಿಧೆಡೆ ಭಕ್ತರು ಹೂವಿನ ಹಾರ ಸಮರ್ಪಿಸಿದರು. ದೀಪಾರತಿಗಳೊಂದಿಗೆ ರಥವನ್ನು ಸ್ವಾಗತಿಸಿದರು.
    ರಥದೊಂದಿಗೆ ಆಗಮಿಸಿರುವ ಮೂಡಿಯ ಶ್ರೀ ಸದಾಶಿವ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಬಿ.ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದ ಟ್ರೇಲರ್‌ಗಳನ್ನು ಯಾತ್ರೆ ಸಂಚಾರದ ವಿವಿಧೆಡೆ ಪ್ರಸಾರ ಮಾಡಲಾಯಿತು. ಭಕ್ತರು ಕಣ್ತುಂಬಿಕೊಂಡರು.
    ರಥಯಾತ್ರೆಯು ಒಟ್ಟು 13 ದಿನದಲ್ಲಿ 7 ಸಾವಿರ ಕಿ.ಮೀ ಸಂಚರಿಸಲಿದೆ. ಡಿ.31ರಂದು ಗದಗದಲ್ಲಿ ಎಲ್ಲ ರಥಗಳು ಸಮಾಗಮಗೊಂಡು ಸಮಾರೋಪ ನಡೆಸಲಾಗುವುದು. ಶಿವಯೋಗ ಮಂದಿರ, ಆಯುರ್ವೇದ ಚಿಕಿತ್ಸಾಲಯ, ಗೋಶಾಲೆ, ವಿಭೂತಿ ಕಾರ್ಖಾನೆ ಸ್ಥಾಪನೆಯೊಂದಿಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ನೀಡಿದ ಸಾಮಾಜಿಕ ಕೊಡುಗೆಗಳ ಕುರಿತಾಗಿ ಚಿತ್ರ ತಯಾರಾಗಿದ್ದು ಜ.13ರಂದು ಬಿಡುಗಡೆಯಾಗಲಿದೆ ಎಂದು ಶ್ರೀ ಸದಾಶಿವ ಸ್ವಾಮೀಜಿ ಮಾಹಿತಿ ನೀಡಿದರು.
    ಈ ಸಂದರ್ಭದಲ್ಲಿ ಎ.ಎಚ್.ಶಿವಮೂರ್ತಿಸ್ವಾಮಿ, ಎ.ಎಸ್.ವಿಜಯಕುಮಾರ್, ಜಿ.ಶಿವಯೋಗಪ್ಪ, ಕೆ.ಬಿ. ಕೊಟ್ರೇಶ್, ಟಿ.ಎಸ್. ಜಯರುದ್ರೇಶ್, ಟಿ.ಜೆ. ಸುರೇಶ್, ಅಡಿವೆಪ್ಪ, ವೀರಪ್ಪ ಎಂ. ಬಾವಿ, ಮಂಜುನಾಥ ಏಕಬೋಟೆ, ಕೋಗುಂಡಿ ಬಕ್ಕೇಶಪ್ಪ, ಸಿದ್ದೇಶ್, ಎಂ.ಪಿ.ರಮೇಶ್, ಆರ್.ಎಸ್. ಪ್ರಸನ್ನ, ಬೃಂದಾ ಪಾಟೀಲ್, ವೀರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts