More

    ಕುಣಿಗಲ್‌ನಲ್ಲಿ 45 ವಾಹನಗಳ ವಶ : ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಜಂಟಿ ಕಾರ್ಯಚರಣೆ

    ಕುಣಿಗಲ್ : ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ಜಂಟಿ ಕಾರ್ಯಚರಣೆ ನಡೆಸಿ ಅನವಶ್ಯಕವಾಗಿ ಸಂಚರಿಸುತ್ತಿದ್ದ 45ಕ್ಕೂ ಹೆಚ್ಚು ವಾಹನ ವಶಪಡಿಸಿಕೊಂಡಿದ್ದಾರೆ. ದಿನೇದಿನೆ ತಾಲೂಕಿನಲ್ಲಿ ಸೋಂಕಿತರ ಪ್ರಮಾಣ ಜಾಸ್ತಿಯಾಗುತ್ತಿದ್ದು, ಸಾವಿನ ಪ್ರಮಾಣವು ಹೆಚ್ಚಾಗಿದೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ಹಾಗೂ ಅಗತ್ಯ ಖರೀದಿಗೆ ನಿಗದಿಪಡಿಸಿದ ಸಮಯ ಮೀರಿ ಅನವಶ್ಯಕವಾಗಿ ವಾಹನ ಸಂಚಾರ ಮಾಡಬಾರದೆಂದು ಪೊಲೀಸರು ಹಾಗೂ ಸ್ಥಳೀಯ ಪುರಸಭೆಯು ಹಲವು ಬಾರಿ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು.

    ಮನವಿಗೆ ಕಿವಿಗೊಡದ ಜನ ತರಕಾರಿ, ದಿನಸಿ, ಮಾಂಸ ಹಾಗೂ ಮೀನಿನ ಅಂಗಡಿ ಮುಂದೆ ಜಮಾವಣೆಗೊಂಡು ವಸ್ತುಗಳು ಖರೀದಿಸುತ್ತಿದ್ದಾರೆ, ವಾಹನಗಳ ಓಡಾಟ ಮಿತಿಮೀರಿವೆ ಇದರಿಂದ ಸೋಂಕಿತ ಪ್ರಮಾಣ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಹಾಗೂ ಪುರಸಭಾ ಆಡಳಿತಕ್ಕೆ ತಲೆ ಬಿಸಿ ಮಾಡಿದೆ. ಇದರಿಂದ ರೋಸಿ ಹೋದ ಅಧಿಕಾರಿಗಳು ಮಂಗಳವಾರ ಡಿವೈಎಸ್‌ಪಿ ರಮೇಶ್, ಸಿಪಿಐಗಳಾದ ಡಿ.ಎಲ್.ರಾಜು, ಗುರುಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್ ನೇತೃತ್ವದ ಸಿಬ್ಬಂದಿ ಬೀದಿಗಿಳಿದು ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಹಣ್ಣು, ತರಕಾರಿ, ಸಣ್ಣ ಹೋಟೆಲ್, ಬೀಡಿ, ಸಿಗರೇಟು ಅಂಗಡಿಗಳನ್ನು ತೆರವುಗೊಳಿಸಿದರು. ವಾರ್ಡ್‌ಗಳಿಗೆ ತೆರಳಿ ತಳ್ಳುವ ಗಾಡಿಯಲ್ಲಿ ಹಣ್ಣು ಹಾಗೂ ತರಕಾರಿ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿದರು. ಪೊಲೀಸ್ ಠಾಣೆ ಎದುರು ಅನಾವಶ್ಯಕವಾಗಿ ಸಂಚರಿಸುತ್ತಿದ್ದ ಕಾರು, ಆಟೋ ರಿಕ್ಷಾ, ಬೈಕ್ ಸೇರಿ 45ಕ್ಕೂ ಹೆಚ್ಚು ವಾಹನ ವಶ ಪಡಿಸಿಕೊಂಡರು.

    ಮುಲಾಜಿಲ್ಲದೆ ಕಠಿಣ ಕ್ರಮ : 
    ವಾರಕ್ಕಾಗುವಷ್ಟು ತರಕಾರಿ ಖರೀದಿಸದೆ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಬೆಳ್ಳುಳ್ಳಿಗಾಗಿ ಬೈಕ್ ಒಂದರಲ್ಲಿ ಇಬ್ಬಿಬ್ಬರು ಬರುತ್ತಿದ್ದೀರ… ನಿಮಗೆ ಕರೊನಾ ಬಗ್ಗೆ ಅರಿವಿಲ್ಲವೆ ಎಂದು ವಾಹನ ಚಾಲಕರಿಗೆ ಛೀಮಾರಿ ಹಾಕಿದ ಡಿವೈಎಸ್‌ಪಿ ರಮೇಶ್, ನಿಮ್ಮ ಎದೆ ಮೇಲೆ ಕೈ ಇಟ್ಟುಕೊಂಡು ಆಣೆ ಮಾಡಿ ಹೇಳಿ ಆಸ್ಪತ್ರೆಗೆ ಬಂದಿದ್ದೀವಿ ಎಂದು ಸುಳ್ಳು ಹೇಳಬೇಡಿ. ಸೋಂಕು ನಿಯಂತ್ರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ. ಆದರೂ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಅನಾವಶ್ಯಕವಾಗಿ ಪಟ್ಟಣಕ್ಕೆ ಬರುತ್ತಿದ್ದೀರ… ನಿಮ್ಮ ಅಣ್ಣ-ತಮ್ಮ, ಅಕ್ಕ-ತಂಗಿ, ತಂದೆ-ತಾಯಿ, ಸ್ನೇಹಿತರಿಗೆ ಸೋಂಕು ತಗಲಿದರೆ ಏನು ಮಾಡುತ್ತೀರಾ? ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸುಮ್ಮನೆ ವಾಹನಗಳಲ್ಲಿ ಸಂಚರಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts