More

    ಕುಡುಕರ ತಾಣವಾದ ಹೊಸರಿತ್ತಿ ಬಸ್ ನಿಲ್ದಾಣ

    ಹಾವೇರಿ: ಕರೊನಾ ಹಾವಳಿ ಆರಂಭವಾದಾಗಿನಿಂದ ಇದು ಹೆಸರಿಗಷ್ಟೇ ಬಸ್ ನಿಲ್ದಾಣವಾಗಿದೆ. ಆದರೆ, ಇಲ್ಲಿಗೆ ಪ್ರಯಾಣಿಕರು ಬರುವುದಿಲ್ಲ ಮತ್ತು ಬಸ್​ಗಳು ಇಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಇದು ಕುಡುಕರ ವಿಶ್ರಾಂತಿ ತಾಣವಾಗಿ ಪರಿಣಮಿಸಿದೆ.

    ಇದು ತಾಲೂಕಿನ ಹೊಸರಿತ್ತಿ ಗ್ರಾಮದ ಬಸ್ ನಿಲ್ದಾಣದ ದುಸ್ಥಿತಿ. ದಶಕದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ವಿುಸಿದ ಬಸ್ ನಿಲ್ದಾಣ ಈಗ ಕುಡುಕರ ಅಡ್ಡೆಯಾಗಿದೆ. ನಿಲ್ದಾಣದೆಲ್ಲೆಡೆ ಮದ್ಯ ಸೇವಿಸಿ ಬಿಸಾಕಿದ ಬಾಟಲಿ, ಪೌಚ್​ಗಳು ಕಾಣುತ್ತವೆ. ಇನ್ನು ಶೌಚಗೃಹದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ದುರ್ನಾತ ಬೀರುತ್ತಿದೆ.

    ಕರೊನಾ ಹಾವಳಿ ನಡುವೆಯೂ ಈಗ ಬಸ್​ಗಳ ಸಂಚಾರ ಎಂದಿನಂತೆ ಆರಂಭಗೊಂಡಿದ್ದರೂ ಈ ನಿಲ್ದಾಣದ ಅವ್ಯವಸ್ಥೆಯಿಂದ ಮಹಿಳೆಯರು ಇತ್ತ ಸುಳಿಯುತ್ತಿಲ್ಲ. ನಿಲ್ದಾಣ ಬಳಿ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಬಸ್ ಹಿಡಿಯಬೇಕಾದ ಸ್ಥಿತಿ ನಿರ್ವಣವಾಗಿದೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂವಾ.ಕ.ರಾ.ರ. ಸಾರಿಗೆ ಸಂಸ್ಥೆ ಅಧಿಕಾರಿಗಳು ಇತ್ತ ಗಮನಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

    ಈ ಬಸ್ ನಿಲ್ದಾಣದಿಂದ ಅಕ್ಕಪಕ್ಕದ ನೆಗಳೂರ, ಕೊಡಬಾಳ, ಅಕ್ಕೂರ, ಹಂದಿಗನೂರ, ಸವಣೂರ, ಲಕ್ಷ್ಮೇಶ್ವರದತ್ತ ಪ್ರಯಾಣಿಸಲು ನಿತ್ಯ ನೂರಾರು ಪ್ರಯಾಣಿಕರು ಬರುತ್ತಾರೆ. ನಿಲ್ದಾಣದ ಅವಸ್ಥೆ ನೋಡಿ ಹಿಡಿಶಾಪ ಹಾಕುವಂತಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಿಲ್ದಾಣದ ಅವ್ಯವಸ್ಥೆಯನ್ನು ಸುಧಾರಿಸಬೇಕು. ರಾತ್ರಿ ಇಲ್ಲಿ ಮದ್ಯ ಸೇವಿಸಲು ಬರುವವರನ್ನು ಹಿಡಿದು ಎಚ್ಚರಿಕೆ ನೀಡಬೇಕು. ಇದಕ್ಕೂ ಬಗ್ಗದಿರುವವರಿಗೆ ದಂಡ ವಿಧಿಸಿ, ಪೊಲೀಸ್ ವಶಕ್ಕೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಅಕ್ಕೂರ ಗ್ರಾಮದಿಂದ ಜಿಲ್ಲಾ ಕೇಂದ್ರ ಹಾವೇರಿಗೆ ತೆರಳಲು ಹೊಸರಿತ್ತಿ ಮಾರ್ಗದ ಮೂಲಕವೇ ಸಂಚರಿಸಬೇಕಾಗಿದೆ. ಆದರೆ, ಇಲ್ಲಿಯ ಬಸ್ ನಿಲ್ದಾಣದಲ್ಲಿ ಸರಿಯಾದ ಆಸನ ವ್ಯವಸ್ಥೆಯಿಲ್ಲ, ಶೌಚಗೃಹ ಅವ್ಯವಸ್ಥೆಯ ಆಗರವಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಬೇಕು.
    | ಲೋಕೇಶ ಕುಬಸದ, ಕೋಡಬಾಳ ಗ್ರಾಮಸ್ಥ

    ನಾನು ಆರೋಗ್ಯ ಸಮಸ್ಯೆಯಿಂದಾಗಿ ವಾರದಿಂದ ರಜೆಯಲ್ಲಿದ್ದೇನೆ. ನಿಲ್ದಾಣದ ಸ್ವಚ್ಛತೆ ಕೆಲಸ ಮಾಡುವವರು ಕೋವಿಡ್ ಹಿನ್ನೆಲೆಯಲ್ಲಿ ರಜೆಯಲ್ಲಿದ್ದಾರೆ. ಕೆಲಸಕ್ಕೆ ಹಾಜರಾದ ತಕ್ಷಣ ನಿಲ್ದಾಣದ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು. ರಾತ್ರಿ ವೇಳೆ ನಿಲ್ದಾಣದಲ್ಲಿ ಮದ್ಯಪಾನ ಮಾಡುವರನ್ನು ನಿಯಂತ್ರಿಸಲು ಕಾವಲುಗಾರರನ್ನು ನೇಮಿಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    | ವೀರಣ್ಣ ಕುಬಸದ, ಹೊಸರಿತ್ತಿ ಬಸ್ ನಿಲ್ದಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts