More

    ಕುಡಿಯುವ ನೀರಿನ ಯೋಜನೆ’ಗೆ ಗ್ರಹಣ

    ಓರ್ವೆಲ್ ಫರ್ನಾಂಡೀಸ್ ಹಳಿಯಾಳ

    ತಾಲೂಕಿನ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಬಂದ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಗೆ ಗ್ರಹಣ ಹಿಡಿದಿದೆ. ಈ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮೂರು ವರ್ಷ ಕಳೆದಿದೆ. ಆದರೆ, ಈವರೆಗೂ ಕೆಲಸ ಆರಂಭವಾಗಲಿಲ್ಲ!

    ತಾಲೂಕಿನ ಗ್ರಾಮಾಂತರ ಭಾಗಕ್ಕೆ ಕೊಳವೆ ಬಾವಿಯೇ ಮುಖ್ಯ ಜಲಮೂಲ. ಬೇಸಿಗೆಯ ಸಮಯದಲ್ಲಿ ಈ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಕಾಳಿ ನದಿಯಿಂದ ಗ್ರಾಮಾಂತರ ಭಾಗಗಳಿಗೆ ನೀರನ್ನು ಪೂರೈಸುವ ಯೋಜನೆ ರೂಪಿಸಲಾಯಿತು. 50 ವರ್ಷಗಳ ಕಾಲಾವಧಿಯ ಗುರಿ ಇಟ್ಟುಕೊಂಡು ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯನ್ನು ಶಾಸಕ ಆರ್.ವಿ. ದೇಶಪಾಂಡೆ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿದ್ದರು.

    ತಾಂತ್ರಿಕ ಅಡಚಣೆ: ರಾಜ್ಯದಲ್ಲಿ ಬದಲಾದ ಸರ್ಕಾರ, ಲಾಕ್​ಡೌನ್ ಮೊದಲಾದ ಕಾರಣಗಳಿಂದ ಯೋಜನೆಯು ನನೆಗುದಿಗೆ ಬಿದ್ದಿತ್ತು ಎನ್ನಲಾಗಿದೆ. ಮೇಲಾಗಿ ಈ ಯೋಜನೆಯ ನಿರ್ವಹಣೆಯನ್ನು ಮಾಡುವ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗೆ ಎಇ ಹುದ್ದೆಯು ತೆರವಾಗಿದ್ದರಿಂದ ಯೋಜನೆಯ ಆಡಳಿತಾತ್ಮಕ ಪತ್ರ ವ್ಯವಹಾರಗಳು ವಿಳಂಬವಾಗುತ್ತಿದ್ದವು. ಡಿಸೆಂಬರ್​ನಿಂದ ಎಇಇ ಹುದ್ದೆಗೆ ಅಧಿಕಾರಿಯೊಬ್ಬರು ವರ್ಗವಾಗಿ ಬಂದಿದ್ದಾರೆ. ಈಗ ಯೋಜನೆಯ ಕಾಮಗಾರಿಗೆ ಸಿದ್ಧತೆಗಳು ಆರಂಭಗೊಂಡಿವೆ. ಆದರೆ, ಈಗ ಯೋಜನೆಗೆ ಅರಣ್ಯ ಇಲಾಖೆಯಿಂದ ಆಡಳಿತಾತ್ಮಕ ತಡೆ ಎದುರಾಗಿದೆ. ಕಾಳಿನದಿಯಿಂದ ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ನೀರು ಪೂರೈಸಲು ಬೇಕಾಗುವ ಪೈಪ್​ಲೈನ್​ಗಳನ್ನು ಅಳವಡಿಸುವಾಗ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಟ್ಟ ಜಮೀನು ಬಳಕೆ ಮಾಡಬೇಕಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯು ನೀಡಿದ ಮಾಹಿತಿಯಂತೆ 33 ಸಾವಿರ ಚ.ಮೀ. ಅರಣ್ಯ ಪ್ರದೇಶದಿಂದ ಪೈಪ್​ಲೈನ್ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಯೋಜನೆಗೆ ಬಳಕೆಯಾಗುವ ಅರಣ್ಯ ಪ್ರದೇಶದ ನಿಖರ ಮಾಹಿತಿಯನ್ನು ನೀಡುವಂತೆ ಇಲಾಖೆಗೆ ನೋಟಿಸ್ ನೀಡಿದೆ.

    119 ಕೋಟಿ ರೂ. ಯೋಜನೆ
    ತೇರಗಾಂವ ಸೇರಿ 113 ಗ್ರಾಮಗಳ ನೀರಿನ ಸಮಸ್ಯೆ ನಿವಾರಿಸಲು 119 ಕೋಟಿ ರೂ. ವೆಚ್ಚದಲ್ಲಿ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತರಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ನಡೆದು, ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. 2017ರ ಡಿಸೆಂಬರ್​ನಲ್ಲಿ ಹಳಿಯಾಳಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸುವ ಪೈಪ್​ಲೈನ್​ಗಳು ಅರಣ್ಯ ಪ್ರದೇಶದಿಂದ ಹಾದು ಹೋಗುತ್ತಿರುವುದರಿಂದ ಈ ಯೋಜನೆಯ ಜಿಯೋ ಮ್ಯಾಪಿಂಗ್ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿ ಅರಣ್ಯ ಇಲಾಖೆಗೆ ನೀಡಲಿದ್ದೇವೆ.
    | ಎಂ. ಜವರೇಗೌಡ ಎಇಇ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts