More

    ಕುಡಿಯುವ ನೀರಿಗೆ ಮೊದಲ ಆದ್ಯತೆ

    ಹಾವೇರಿ: ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಸೇರಿ 3 ಪ್ರಮುಖ ಯೋಜನೆಗಳನ್ನು ಸಮರ್ಪಕ ಅನುಷ್ಠಾನದ ಗುರಿ ಹೊಂದಿದ್ದೇನೆ. ಇದರಲ್ಲಿ ಕುಡಿಯುವ ನೀರಿಗೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಜಿಪಂನ ನೂತನ ಸಿಇಒ ಮಹ್ಮದ ರೋಶನ್ ತಿಳಿಸಿದರು.

    ನಗರದ ಜಿಪಂ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂನ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಕಾರ್ಯಗತಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದರು.

    ಜಿಲ್ಲೆಗೆ ಜಲಜೀವನ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳ ಟೆಂಡರ್ ಕರೆಯಲು ಈಗಾಗಲೇ ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ. ಈ ಯೋಜನೆಯಡಿ ಜಿಲ್ಲೆಯ 699 ಹಳ್ಳಿಗಳ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿಸಬೇಕಾಗಿದೆ. ಇದಕ್ಕಾಗಿ 492 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 275 ಗ್ರಾಮಗಳ ಸರ್ವೆ ಕಾರ್ಯಯೂ ಮುಕ್ತಾಯವಾಗಿದೆ. ಉಳಿದ ಗ್ರಾಮಗಳ ಸರ್ವೆ ಕಾರ್ಯಕ್ಕೆ ಬೇರೆ ಜಿಲ್ಲೆಯಿಂದ ಸರ್ವೆ ಏಜೆನ್ಸಿಯನ್ನು ಕರೆಸಿ 10ದಿನದೊಳಗಾಗಿ ಸರ್ವೆ ಪೂರ್ಣಗೊಳಿಸಲಾಗುವುದು. ಈ ಯೋಜನೆಯಡಿ 16 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಒಳಗೊಂಡಿರುತ್ತವೆ. ಈ ವರ್ಷ 8 ಬಹುಗ್ರಾಮ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

    ದೂರು ಬಂದ 72 ತಾಸಿನಲ್ಲಿ ದುರಸ್ತಿ: ಜಿಲ್ಲೆಯಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಸಹಾಯವಾಣಿ ಸಂಖ್ಯೆಗಳನ್ನು ನಮೂದಿಸಲಾಗುವುದು. ಯಾವುದೇ ಘಟಕಗಳು ದುರಸ್ತಿಗೆ ಬಂದಾಗ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ 72 ತಾಸಿನೊಳಗೆ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.

    15 ದಿನದಲ್ಲಿ ಶಾಲೆಗಳಿಗೆ ನೀರಿನ ಸಂಪರ್ಕ: ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯ 1,557 ಶಾಲೆಗಳಿಗೆ ಹಾಗೂ 1,108 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ನೇರ ಸಂಪರ್ಕವಿಲ್ಲ. ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಯಿಲ್ಲದ ಶಾಲೆಗಳಿಗೆ 15 ದಿನಗಳಲ್ಲಿ ಹಾಗೂ ಸರ್ಕಾರಿ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ 50 ದಿನಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.

    ನರೇಗಾದಲ್ಲಿ ಆಸ್ತಿ ಸೃಜನೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 40 ಲಕ್ಷ ಮಾನವ ದಿನಗಳ ಸೃಜಿಸುವ ಗುರಿಯಲ್ಲಿ ಈಗಾಗಲೇ 34 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆರೆ ಹೂಳೆತ್ತುವ ಜೊತೆಗೆ ಸಂಪನ್ಮೂಲ ಸೃಜನೆಗೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಿದ್ದೇನೆ. ಶೇ. 60-40ರ ಪ್ರಮಾಣದಲ್ಲಿ ಸಾಮಗ್ರಿ ಬಳಕೆಗೆ ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಈ ಪ್ರಮಾಣ ಶೇ. 18ರಷ್ಟಿದೆ. ಇದನ್ನು ಕನಿಷ್ಟ ಶೇ. 32ಕ್ಕೆ ಹೆಚ್ಚಿಸಿ ಆಸ್ತಿ ಸೃಜನೆ ಕಾಮಗಾರಿ ಕೈಗೊಳ್ಳಲಾಗುವುದು. ಇದೇ ಯೋಜನೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನ ತಲಾ 5 ಶಾಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿ ಕಾಂಪೌಂಡ್, ಆಟದ ಮೈದಾನ, ಮಳೆ ನೀರು ಕೊಯ್ಲು, ಕೈ ತೋಟ ನಿರ್ವಿುಸಿ ಮಾದರಿ ಶಾಲೆಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಗ್ರಾಪಂಗಳಲ್ಲಿ ಇನ್ಮುಂದೆ ಎಲ್ಲ ಅರ್ಜಿ ಸಕಾಲದಲ್ಲಿ: ಸಾರ್ವಜನಿಕರ ಕುಂದುಕೊರತೆ ಹಾಗೂ ದೂರುಗಳನ್ನು ಕಡ್ಡಾಯವಾಗಿ ಸಕಾಲ ಯೋಜನೆಯಡಿ ನೋಂದಾಯಿಸಬೇಕು. ಯಾವುದೇ ಕಾರಣಕ್ಕೂ ಬೈಪಾಸ್ ಮಾಡಬಾರದು ಎಂದು ಈಗಾಗಲೇ ಪಿಡಿಒಗಳಿಗೆ ಸೂಚಿಸಲಾಗಿದೆ. ದೂರುಗಳನ್ನು ಕಡ್ಡಾಯವಾಗಿ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಪ್ರತಿ ಗ್ರಾಪಂಗಳಿಗೆ ದೂರುಗಳು ಬರುತ್ತವೆ. ಆದರೆ, ಯಾವುದೇ ಸಾರ್ವಜನಿಕ ಸಮಸ್ಯೆ, ದೂರುಗಳು ಬಂದಿಲ್ಲ ಎಂಬ ಮಾಹಿತಿ ಲಭ್ಯವಾದರೆ ಅಂತಹ ಗ್ರಾಪಂಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಸಿಇಒ ಮಹ್ಮದ ರೋಶನ್ ತಿಳಿಸಿದರು.

    ಬಯೋಮೆಟ್ರಿಕ್ ಹಾಜರಾತಿ: ಗ್ರಾಪಂಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿ ಕಡ್ಡಾಯ ಹಾಜರಾತಿಗೆ ನಿಗಾವಹಿಸಲಾಗುವುದು. ಎಲ್ಲ ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಆಗಮಿಸಬೇಕು. ಹಳ್ಳಿಗಳಲ್ಲಿ ಅಧಿಕಾರಿಗಳು ಸಿಗದೇ ಇರುವ ದೂರು ಬಂದರೆ ಕ್ರಮ ನಿಶ್ಚಿತವಾಗಿದೆ. ನೌಕರರ ಕಾರ್ಯಕ್ಷಮತೆ ಹೆಚ್ಚಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಶ್ರಮಿಸುತ್ತೇನೆ ಎಂದು ಸಿಇಒ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts