More

    ಕುಡಿಯುವ ನೀರಿಗಾಗಿ ಸೇರುತ್ತದೆ ಗುಂಪು!

    ರಾಣೆಬೆನ್ನೂರ: ಕರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಕಡ್ಡಾಯ ಮಾಸ್ಕ್ ಧರಿಸುವುದು ಸೇರಿ ಹಲವಾರು ಮಾರ್ಗಸೂಚಿ ಹೊರಡಿಸಿದೆ. ಆದರೆ, ಇದನ್ನು ನಗರ, ಪಟ್ಟಣ ಪ್ರದೇಶದಲ್ಲಿ ವಿಸ್ತರಿಸುವಲ್ಲಿ ಯಶಸ್ವಿಯಾಗಿರುವ ಜಿಲ್ಲಾಡಳಿತ ಗ್ರಾಮೀಣರನ್ನು ಮರೆತಂತಿದೆ.

    ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮಂಗಳವಾರ ಶುದ್ಧ ಕುಡಿಯುವ ನೀರಿನ ಘಟಕದ ಎದುರು ಸೇರಿದ ಜನಜಂಗುಳಿ ಇಂಥದೊಂದು ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

    ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಬೇಸಿಗೆ ಕಾಲ ಇದಾಗಿದ್ದರಿಂದ ಬೋರ್​ವೆಲ್​ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಮರ್ಪಕವಾಗಿ ನೀರು ದೊರಕದ ಕಾರಣ ಬೆಳಗ್ಗೆ ಅಥವಾ ಸಂಜೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗುತ್ತಿದೆ. ಹೀಗಾಗಿ, ಒಂದೇ ಬಾರಿಗೆ ನೀರು ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಆದರೆ, ಇಲ್ಲಿ ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮ ಪಾಲನೆಯಾಗುತ್ತಿಲ್ಲ. ನೀರಿಗಾಗಿ ಚಿಕ್ಕಪುಟ್ಟ ಗಲಾಟೆಗಳು ನಡೆದಾಗ, ಅವುಗಳನ್ನು ಬಗೆಹರಿಸಲು ಬರುವ ಪೊಲೀಸರು ಕೂಡ ಮಾಸ್ಕ್ ಧರಿಸದೇ ಇರುವುದು ವಿಪರ್ಯಾಸವೇ ಸರಿ.

    ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ ಜನತೆಗೆ ತಿಳಿಹೇಳಬೇಕಾದ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ವಹಿಸಿದೆ. ಬರುವ ದಿನಗಳಲ್ಲಿ ತೊಂದರೆ ಅನುಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಮೂಲಕ ಒಂದೆಡೆ ಜನ ಸೇರದಂತೆ ತಡೆಯಬೇಕು. ಇಲ್ಲವೇ ಜನ ಸೇರಿದರೂ ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

    ಜಿಲ್ಲಾಡಳಿತ ಗ್ರಾಮೀಣ ಭಾಗವನ್ನು ಸಂಪೂರ್ಣ ನಿರ್ಲಕ್ಷಿ್ಯದೆ. ಜನತೆ ನೀರು ತುಂಬಿಕೊಳ್ಳುವ ಭರದಲ್ಲಿ ನಿಯಮ ಪಾಲಿಸುತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
    | ರವೀಂದ್ರಗೌಡ ಪಾಟೀಲ, ಮುಷ್ಟೂರು ಗ್ರಾಮದ ಮುಖಂಡ


    ಶುದ್ಧ ಕುಡಿಯುವ ನೀರಿನ ಘಟಕದಿಂದ ನಿರಂತರ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿಯಮ ಪಾಲನೆಗೆ ಕ್ರಮ ಜರುಗಿಸಲು ಪಿಡಿಒಗಳಿಗೆ ಸೂಚಿಸಲಾಗುವುದು.
    | ಎಸ್.ಎಂ. ಕಾಂಬಳೆ, ತಾ.ಪಂ. ಇಒ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts