More

    ಕುಂಬಾರನ ಮಣ್ಣಿನ ಹಣತೆಗಿಲ್ಲ ಬೇಡಿಕೆ

    ಚಿಕ್ಕೋಡಿ ಗ್ರಾಮೀಣ, ಬೆಳಗಾವಿ: ಆಧುನಿಕ ಜೀವನ ಶೈಲಿಯಿಂದ ಮಣ್ಣಿನ ಹಣತೆಯ ಬಳಕೆ ಕಡಿಮೆಯಾಗಿದೆ. ಇದರಿಂದ ಹಣತೆ ಮಾರಿ ಆದಾಯ ಗಳಿಸುತ್ತಿದ್ದ ಕುಂಬಾರರು ಉಪಜೀವನ ನಡೆಸಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಬದಲಾಗುತ್ತಿರುವ ದಿನಮಾನಗಳಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನೇಕ ಕುಂಬಾರ ಕುಟುಂಬಗಳು ಕುಂಬಾರಿಕೆ ಬಿಟ್ಟು, ಉದ್ಯೋಗ ಹುಡುಕುತ್ತ ಪಟ್ಟಣ ಸೇರುತ್ತಿದ್ದಾರೆ. ಕುಂಬಾರಿಕೆಗೆ ಪ್ರಸಿದ್ಧವಾಗಿದ್ದ ಚಿಕ್ಕೋಡಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಂಬಾರಿಕೆಯ ಕುರುಹುಗಳು ಮಾಸುತ್ತಿವೆ. ಆದಾಗ್ಯೂ ನಮ್ಮ ಭಾಗದ ಕುಂಬಾರರು ದೀಪಾವಳಿಯಲ್ಲಿ ತಯಾರಿಸುವ ಮಣ್ಣಿನ ಹಣತೆ, ಮಕರ ಸಂಕ್ರಮಣ ಮತ್ತು ದಸರೆಗಳಲ್ಲಿ ಪೂಜಿಸುವ ಕುಡಿಕೆ ಮತ್ತು ಮಡಿಕೆಗಳಿಗೆ ರಾಜ್ಯ ಸೇರಿ ದಕ್ಷಿಣ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಇದೆ. ಯಕ್ಸಂಬಾ, ಸದಲಗಾ, ಕಾರದಗಾ, ಕೋಥಳಿ, ಗಳತಗಾ, ಖಡಕಲಾಟ ಮುಂತಾದ ಗ್ರಾಮಗಳಲ್ಲಿ ಕುಂಬಾರದಿಂದ ತಯಾರಾಗುವ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣತೆಗಳು ರಾಜ್ಯ ಸೇರಿ ಮಹಾರಾಷ್ಟ್ರದ ಕೆಲ ಜಿಲ್ಲೆಗೆಳಿಗೆ ಸರಬರಾಜು ಆಗುತ್ತಿವೆ.

    ಪ್ರಸಕ್ತ ಸಾಲಿನಲ್ಲಿ ಸಾದಾ ಮಣ್ಣಿನ ಒಂದು ಡಜನ್ ಹಣತೆಗೆ 36 ರೂ.ಗೆ ಮಾರಾಟವಾದರೆ, ಚಿಲ್ಲರೆಯಲ್ಲಿ ಒಂದು ಹಣತೆಗೆ 5 ರೂ. ಬೆಲೆಯಿದೆ. ಅದರಂತೆ ಚೀನಿ ಮಣ್ಣಿನ ಹಣತೆಗಳು 5ರಿಂದ 10 ರೂ.ಗೆ ಮಾರಾಟವಾಗುತ್ತಿದೆ. ದೊಡ್ಡ ದೊಡ್ಡ ಅಲಂಕಾರಿಕ ಹಣತೆಗಳು 50 ರಿಂದ 250 ರೂ. ವರೆಗೆ ಮಾರಾಟವಾಗುತ್ತಿದೆ ಎಂದು ಪಟ್ಟಣದ ಲತಾ ಗುರುಲಿಂಗ ಕುಂಬಾರ ಹೇಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರಕುತ್ತಿಲ್ಲ ಎಂದು ಕುಂಬಾರರು ಕೊರಗುತ್ತಿದ್ದಾರೆ. ಜತೆಗೆ ಉತ್ಪಾದನಾ ವೆಚ್ಚವೂ ದುಬಾರಿಯಾಗಿದ್ದು, ಮಣ್ಣಿನ ಉತ್ಪನ್ನಗಳನ್ನು ಸುಡಲು ಸೌಧೆ, ಮಣ್ಣು ಮತ್ತು ಸಾರಿಗೆ ವೆಚ್ಚ ಕಳೆದು ಬರುವ ಆದಾಯ ಅಷ್ಟಕಷ್ಟೇ ಎಂದು ಅನೇಕ ಕುಂಬಾರರು ಬೇಸರ ವ್ಯಕ್ತಪಡಿಸುತ್ತಾರೆ. ಅಂಧಕಾರ ಅಳಿಸಿ, ಬೆಳಕು ಹರಿಸುವ ಹಣತೆಗಳನ್ನು ತಯಾರಿಸುವ ಕುಂಬಾರರ ಬದುಕು ಮಾತ್ರ ಅಕ್ಷರಶಃ ಕತ್ತಲೆಯಿಂದ ಕೂಡಿದೆ. ಕುಂಬಾರರು ತಯಾರಿಸುವ ವಸ್ತುಗಳಿಗೆ ಅನುದಾನ ಕಲ್ಪಿಸುವ ಜತೆಗೆ ಅವುಗಳನ್ನು ಖರೀದಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಕುಂಬಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts