More

    ಕುಂದಾನಗರಿಯಲ್ಲಿ ಕಾಂಗ್ರೆಸ್ ರಣಕಹಳೆ

    ಬೆಳಗಾವಿ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಯುವ ಕ್ರಾಂತಿ ಸಮಾವೇಶನಕ್ಕೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಜನಸಾಗರ ಹರಿಬಂದಿತ್ತು. ಮೈದಾನ ಭರ್ತಿಯಾಗಿ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತುಕೊಂಡು ನಾಯಕರ ಭಾಷಣ ಆಲಿಸಿದರು.

    ನಗರದ ಸಿಪಿಇಡಿ ಮೈದಾನದಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳ ವ್ಯಾಪ್ತಿಯ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಟಿಕೆಟ್ ಆಕಾಂಕ್ಷಿಗಳು, ಯುವ ಘಟಕದ ಪದಾಧಿಕಾರಿಗಳು ಆಸೀನರಾಗಿದ್ದರು. ಮೈದಾನದಲ್ಲಿ ಹಾಕಲಾಗಿದ್ದ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಕ್ಕೂ ಅಧಿಕ ಯುವ ಕಾರ್ಯಕರ್ತರು ಸಮಾವೇಶದುದ್ದಕ್ಕೂ ನಾಯಕರ ಘೋಷಣೆ ಕೂಗಿ ಎಲ್ಲರ ಗಮನ ಸೆಳೆದರು.

    ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ವಿಜಯಪುರ, ಹಾವೇರಿ ಸೇರಿ ದೂರದೂರುಗಳಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಭಾನುವಾರ ರಾತ್ರಿಯೇ ಆಗಮಿಸಿದ್ದರು. ಇನ್ನೂ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ವಿವಿಧ ಭಾಗಗಳಿಂದ ಸಾವಿರಾರು ಜನರು ಖಾಸಗಿ ವಾಹನಗಳ ಮೂಲಕ ಸೋಮವಾರ ಬೆಳಗ್ಗೆ ಮೈದಾನಕ್ಕೆ ಆಗಮಿಸಿದ್ದರು. ಲಕ್ಷಕ್ಕೂ ಅಧಿಕ ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದ ಮಧ್ಯದಲ್ಲಿ ಅಲ್ಲಲ್ಲಿ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವೇದಿಕೆಗೆ ಬರುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ಘೋಷಣೆಗಳನ್ನು ಕೂಗುತ್ತ ಬರಮಾಡಿಕೊಂಡರು. ಕೆಲ ಕಾರ್ಯಕರ್ತರು ತಮ್ಮ ನಾಯಕರ ಭಾವಚಿತ್ರರುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಸಮಾವೇಶದಲ್ಲಿ ವಿಶೇಷವಾಗಿ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts