More

    ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ನಿಶ್ಚಿತ; ಪ್ರಧಾನಿ ನರೇಂದ್ರ ಮೋದಿ, ಸಂಬಂಧಿಸಿದವರ ಮೇಲೆ ಒತ್ತಡ: ಬಿ.ಎಸ್.ಯಡಿಯೂರಪ್ಪ

    ಶಿಕಾರಿಪುರ: ಸಹೃದಯಿ, ಸ್ವಾಭಿಮಾನಿಗಳಾಗಿರುವ ಕುಂಚಿಟಿಗ ಸಮಾಜವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿದವರನ್ನು ಭೇಟಿ ಮಾಡಿ ಒತ್ತಡ ಹೇರುತ್ತೇನೆ. ಕುಂಚಿಟಿಗ ಸಮುದಾಯದಕ್ಕೆ ನಿಶ್ಚಿತವಾಗಿ ಒಬಿಸಿ ಮೀಸಲಾತಿ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕುಂಚಿಟಿಗರ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಕುಂಚಿಟಿಗ ಸಮಾಜದಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಬಡವರು, ಹಿಂದುಳಿದವರು, ಅನಕ್ಷರಸ್ಥರು, ಅವಕಾಶ ವಂಚಿತರಿದ್ದಾರೆ. ಕುಂಚಿಟಿಗರು ಇನ್ನೂ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಈ ಸಮಾಜ ಇನ್ನೂ ಸದೃಢವಾಗಲು ಒಬಿಸಿ ಮೀಸಲಾತಿ ಅಗತ್ಯವಿದೆ ಎಂದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕಾರಿಪುರದಿಂದ ನಿಮ್ಮ ಹಕ್ಕೊತ್ತಾಯ ಪ್ರಾರಂಭವಾಗಿರುವುದು ಶುಭ ಸೂಚನೆಯಾಗಿದೆ. ಕಾರಣ ನಿಮ್ಮೆಲ್ಲರ ಆರಾಧ್ಯ ದೈವ ಆಂಜನೇಯ ಸ್ವಾಮಿಯ ಅನುಗ್ರಹ. ರಾಜ್ಯದ 17 ಜಿಲ್ಲೆಗಳಲ್ಲಿ 26 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುಂಚಿಟಿಗ ಸಮಾಜದ ಬಂಧುಗಳಿದ್ದಾರೆ. ತಂದೆಯವರ ಸಹಕಾರದ ಜತೆಗೆ ನಾನು ನಿಮಗೆ ಒಬಿಸಿ ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ದೇವರು ಮೆಚ್ಚುವ ರೀತಿಯಲ್ಲಿ ಪ್ರಯತ್ನ ಮಾಡುತ್ತೇನೆ. ಇದರಿಂದ ನಿಮ್ಮ ಸಮಾಜದ ಯುವಕ, ಯುವತಿಯರಿಗೆ ಔದ್ಯೋಗಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಸಹಕಾರಿಯಾಗಲಿದೆ ಎಂದರು.
    ಕೇಳುತ್ತಿರುವುದು ಭಿಕ್ಷೆಯಲ್ಲ: ಪ್ರೀತಿ-ವಿಶ್ವಾಸ-ನಂಬಿಕೆಗೆ ಮತ್ತೊಂದು ಹೆಸರೇ ಕುಂಚಿಟಿಗ ಸಮಾಜ. ನಿಮ್ಮ ಹಕ್ಕಿಗಾಗಿ ನೀವು ರಾಜ್ಯದ ವಿವಿಧ ಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ನೀವು ಕೇಳುತ್ತಿರುವುದು ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕೊತ್ತಾಯವಾಗಿದೆ. ನಿಮ್ಮ ಬೇಡಿಕೆ ಸಮಂಜಸವಾಗಿದೆ ಎಂದು ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಹಿರಿಯರಾದ ಟಿ.ಬಿ.ಜಯಚಂದ್ರ ಅವರಂತಹ ನಾಯಕರನ್ನು ಕೊಟ್ಟ ಸಮಾಜವಿದು. ಈ ಸಮಾಜಕ್ಕೆ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ ಎಂದು ಹೇಳಿದರು.
    ಶಿಕಾರಿಪುರದ ಅಳಿಯಂದಿರು: ಯಡಿಯೂರಪ್ಪ ಅವರು ಮೋದಿ ಅವರ ನಂತರದ ಸ್ಥಾನದಲ್ಲಿದ್ದಾರೆ. ಅವರು ಮನಸ್ಸು ಮಾಡಿದರೆ ನಮ್ಮ ಸಮುದಾಯಕ್ಕೆ ಒಬಿಸಿ ಮೀಸಲಾತಿ ದೊರೆಯಲಿದೆ. ಪ್ರಧಾನಿ ಮೇಲೆ ಒತ್ತಡ ತಂದು ವಾಸ್ತವ ಸ್ಥಿತಿಯನ್ನು ಮನನ ಮಾಡಿಸಿ ಅವಕಾಶ ವಂಚಿತ ಕುಂಚಿಟಿಗ ಸಮಾಜಕ್ಕೆ ಮೀಸಲಾತಿ ದೊರೆಯುವಂತೆ ಮಾಡಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಹನ್ನೆರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ಈ ಸಮಸ್ಯೆಗೆ ಯಡಿಯೂರಪ್ಪ ತಮ್ಮ ಉನ್ನತ ಸಂಪರ್ಕದ ಪ್ರಭಾವದಿಂದ ಇತಿಶ್ರೀ ಹಾಡಬೇಕು. ನಮ್ಮೆಲ್ಲರ ಕನಸನ್ನು ನನಸು ಮಾಡಬೇಕು. ನಾವಿಬ್ಬರೂ ಶಿಕಾರಿಪುರದ ಅಳಿಯಂದಿರು. ನಮ್ಮಿಬ್ಬರಲ್ಲಿ ಪಕ್ಷ, ಸಿದ್ಧಾಂತದ ಹೊರತಾಗಿ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts