More

    ಕೀಳರಿಮೆ ಬಿಟ್ಟು ಉತ್ತಮ ಶಿಕ್ಷಣ ನೀಡಿ

    ಇಂಡಿ: ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಶಿಕ್ಷಕರಿಗೆ ಶೇ.30 ವೇತನ ಹೆಚ್ಚಳ ಮಾಡುವ ಮೂಲಕ ಪ್ರತಿವರ್ಷ ಹತ್ತು ಸಾವಿರ ಕೋಟಿ ರೂ. ಹೆಚ್ಚಿನ ಅನುದಾನವನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಪ್ರಾಥಮಿಕ ಸಹಕಾರಿ ಪತ್ತಿನ ಸಂಘ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶನಿವಾರ ಅವರು ಮಾತನಾಡಿದರು.

    ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಶ್ರೇಷ್ಠವಾಗಿದೆ. ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಬಿಟ್ಟು ಒಳ್ಳೆಯ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದರು.

    ಕಾತ್ರಾಳ ಆಶ್ರಮದ ಅಮೃತಾನಂದ ಶ್ರೀಗಳು ಮಾತನಾಡಿ, ಶಿಕ್ಷಕರ ಸ್ಥಾನ ದೊಡ್ಡದು. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

    ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ಕೂಲಿ ಕಾರ್ಮಿಕರ ಮಕ್ಕಳು, ಗಾರೆ ಕೆಲಸ ಮಾಡುವವರ ಮಕ್ಕಳು, ದೀನ-ದಲಿತರು, ಶೋಷಿತರು, ಹಿಂದುಳಿದವರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

    ಉಪನ್ಯಾಸಕ ಮಂಜುನಾಥ ಜುನಗೊಂಡ ಉಪನ್ಯಾಸ ನೀಡಿದರು. ಎಐಪಿಟಿಎ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಇಂಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ಚಾಂದಕವಠೆ, ಡಾ. ಕಾಂತು ಇಂಡಿ ಮಾತನಾಡಿದರು.

    ಬಿಇಒ ಟಿ.ಎಸ್. ಅಲಗೂರ, ಎಸ್.ಆರ್. ನಡಗಡ್ಡಿ, ಎ.ಎಸ್. ಲಾಳಸೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಇಂಡಿ ಘಟಕದ ಅಧ್ಯಕ್ಷ ಎಸ್.ವಿ. ಹರಳಯ್ಯ, ಜೆಒಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರ, ಡಿ.ಜಿ. ರಾಠೋಡ, ಎಂ.ಎಂ. ನೇದಲಗಿ, ಪಿ.ಎ. ಎಲಗಾರ, ಪಿ.ಜಿ. ಕಲ್ಮನಿ ಮತ್ತಿತರಿದ್ದರು.

    ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ಶಿಕ್ಷಕರಾದ ಸುರೇಶ ಅವರಾದಿ, ರವೀಂದ್ರ ಆಳುರ, ಜಯರಾಮ ಚವ್ಹಾಣ, ಹಿರಿಯ ಶಿಕ್ಷಕರಾದ ಎಂ.ಕೆ. ಲಿಗಾಡೆ, ಚನಮಲ್ಲಪ್ಪ ಚನಗೊಂಡ, ಕೆ.ವಿ. ಪಾಟೀಲ, ಆರ್.ವಿ. ಮೋಮಿನ್, ಎಸ್.ಬಿ. ಗೌರಿ, ಅಂಬಣ್ಣ ಸುಣಗಾರ, ಪ್ರಭು ಹೊಸಮನಿ, ಎಸ್.ಆರ್. ಗಿಡಗಂಟಿ, ಜೆ.ಡಿ. ಕೊಟ್ನಾಳ ಇತರರನ್ನು ಸನ್ಮಾನಿಸಲಾಯಿತು.

    ಸಚಿವರಿಗಾಗಿ ಕಾಯ್ದ ಶಿಕ್ಷಕರು
    ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕಾಗಿತ್ತು. ಆದರೆ ಯಾವುದೋ ಕಾರ್ಯ ನಿಮಿತ್ತ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರಿಂದ ಶಿಕ್ಷಕರಿಗೆ ಅಸಮಾಧಾನವಾಯಿತು. ಶಿಕ್ಷಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು. ಅವರು ಬಾರದ ಕಾರಣ ಮನವಿ ನೀಡುವುದು ಅಸಾಧ್ಯವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts