More

    ಕಿತ್ತೂರು ಕೋಟೆಯ ಮೃತ್ತಿಕೆ ಸಂಗ್ರಹ

    ಬೆಳಗಾವಿ: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ನಾಡ ಪ್ರಭುಕೆಂಪೇಗೌಡರ ಕಂಚಿನ ಪ್ರತಿಮೆ ನ.11 ರಂದು ಅನಾವರಣಗೊಳ್ಳಲಿದ್ದು, ಆ ಪ್ರಯುಕ್ತ ಶುಕ್ರವಾರ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿನ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು.

    ದೇಶದಲ್ಲೇ ಪ್ರಥಮವಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರೃಹೋರಾಟದ ಕಹಳೆಯೂದಿದ್ದ ಕಿತ್ತೂರು ರಾಣಿ ಚನ್ನಮ್ಮಳ ಕೋಟೆಯಿಂದ ಮಣ್ಣು ಪಡೆಯಲು ಸಚಿವರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚನ್ನಮ್ಮನ ಕೋಟೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಸೇರಿದ್ದರು. ಸಚಿವರು ಆಗಮಿಸುತ್ತಿದ್ದಂತೆಯೇ, ಶಿಥಿಲಗೊಂಡಿರುವ ಅರಮನೆ ಭಾಗದಲ್ಲಿ ಮಣ್ಣು ಸಂಗ್ರಹಿಸಿ, ಮಡಕೆಯಲ್ಲಿ ತುಂಬಿ ಪೂಜೆ ಸಲ್ಲಿಸಲಾಯಿತು.

    ಬಳಿಕ ಕಿತ್ತೂರು ಸಂಸ್ಥಾನ ಕಲ್ಮಠದ ಶ್ರೀಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್.ಅಶೋಕ, ಯುವಜನ ಹಾಗೂ ಕ್ರೀಡಾ ಸಚಿವ ಎ.ನಾರಾಯಣ ಗೌಡ, ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಅಶ್ವತ್ಥ ನಾರಾಯಣ ಮಣ್ಣು ತುಂಬಿದ ಮಡಕೆ ನೀಡಿದರು. ಕೋಟೆ ಆವರಣಕ್ಕೆ ಆಗಮಿಸಿದ ಕೇವಲ 15 ನಿಮಿಷದಲ್ಲೇ ಪವಿತ್ರ ಮಣ್ಣು ಪಡೆದು ಸಚಿವರು ಹಿಂದಿರುಗಿದರು. ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಶಾಸಕರಾದ ಮಹಾಂತೇಶ ದೊಡಗೌಡರ, ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಇದ್ದರು.

    ಮಣ್ಣು ಸಂಗ್ರಹ ಏಕೆ?

    ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನ.11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಪ್ರತಿಮೆ ಅನಾವರಣಕ್ಕೆ ಐತಿಹಾಸಿಕ ಮಹತ್ವ ಹೊಂದಿರುವ ಹಾಗೂ ಧಾರ್ಮಿಕ ಕ್ಷೇತ್ರಗಳಾದ ವಿಜಯನಗರ ಜಿಲ್ಲೆಯ ಹಂಪಿ, ಕೂಡಲ ಸಂಗಮ, ಬೆಳಗಾವಿಯ ಕಿತ್ತೂರು ನಾಡಿನಿಂದ ಮೃತ್ತಿಕೆ ಸಂಗ್ರಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts