More

    ಕಿಡಿಗೇಡಿಗಳ ತಾಣ ಶಿಗ್ಗಾಂವಿ ಶಾಲೆ ಆವರಣ

    ಐ.ಎಸ್. ಕರಿಗೌಡ್ರ ಶಿಗ್ಗಾಂವಿ

    ಪಟ್ಟಣದ 1 ಮತ್ತು 2ನೇ ನಂಬರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಉತ್ತಮ ಶಿಕ್ಷಣಕ್ಕಾಗಿ ಹೆಸರು ಗಳಿಸಿವೆ. ಇಲ್ಲಿ ಓದಿದವರು ವಿವಿಧೆಡೆ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂಥ ಹೆಸರುಗಳಿಸಿದ ಶಾಲೆಯಲ್ಲಿ ಈಗ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

    ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ಪುಂಡ-ಪೋಕರಿಗಳು ಮದ್ಯ ಸೇವಿಸಿ, ಗುಟ್ಖಾ ಮತ್ತು ಮದ್ಯದ ಪ್ಯಾಕೆಟ್​ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಪ್ರತಿದಿನವೂ ಶಾಲೆಯ ಶಿಕ್ಷಕರು ಶಾಲೆಗೆ ಬಂದ ಕೂಡಲೇ ಅವುಗಳನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸವಾಗಿದೆ. ಈ ಬಗ್ಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಹಲವು ಬಾರಿ ಸ್ಥಳೀಯ ಪೊಲೀಸ್ ಠಾಣೆಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್​ಡಿಎಂಸಿ ಸದಸ್ಯರು ತಿಳಿಸುತ್ತಾರೆ.

    ಶಾಲೆಯ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ. ಶಾಲೆಯ ಆವರಣ ವಿಶಾಲವಾಗಿದೆ. ಆದರೆ, ಮಳೆ ನೀರು ನಿಲ್ಲುತ್ತಿರುವುದರಿಂದ ಮಕ್ಕಳಿಗೆ ಆಟವಾಡಲು ಆಗುತ್ತಿಲ್ಲ. ಕೂಡಲೇ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕಿದೆ.

    ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಆವರಣದಲ್ಲಿ ಶುಚಿತ್ವ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲೆಯ ಸುತ್ತಲೂ ಕಾಂಪೌಂಡ್ ಗೋಡೆ ನಿರ್ವಿುಸಿ ಅನವಶ್ಯಕವಾಗಿ ಯಾರೂ ಒಳ ಪ್ರವೇಶಿಸದಂತೆ ತಡೆಯಬೇಕು. ಶಿಥಿಲಗೊಂಡ ಕೊಠಡಿಗಳನ್ನು ಪುನರ್ ನಿರ್ವಿುಸಬೇಕು ಹಾಗೂ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಪಾಲಕರು, ಊರಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ರಾತ್ರಿ ವೇಳೆ ಕೆಲವರು ಶಾಲೆ ಆವರಣದಲ್ಲಿ ಗಲೀಜು ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ನಾವು ರಾತ್ರಿ ಗಸ್ತು ಕಾದೆವು. ಆಗ ಕೆಲ ಕಿಡಿಗೇಡಿಗಳ ಜತೆಗೆ ಜಗಳವಾಡಿದ್ದುಂಟು. ಶಾಲಾ ಸಮಿತಿ ಸದಸ್ಯರೊಂದಿಗೆ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕಿಡಿಗೇಡಿಗಳ ಹಾವಳಿ ತಡೆಯಬೇಕು.
    | ಬಸವಂತಪ್ಪ ಬೈಲವಾಳ ಎಸ್​ಡಿಎಂಸಿ ಅಧ್ಯಕ್ಷ

    ಪ್ರತಿ ಶಾಲೆ ಆವರಣದಲ್ಲಿ ತಂಬಾಕು ಮುಕ್ತ ಶಾಲೆ ಎಂಬ ನಾಮಫಲಕ ಅಳವಡಿಸಲಾಗುತ್ತದೆ. ಆದರೆ, ನಮ್ಮ ಶಾಲೆ ಅಂಗಳದಲ್ಲಿ ಕಿಡಿಗೇಡಿಗಳು ಗುಟ್ಖಾ ಚೀಟು, ಮದ್ಯದ ಖಾಲಿ ಪ್ಯಾಕೆಟ್​ಗಳನ್ನು ಬಿಸಾಡುತ್ತಾರೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಶಿಕ್ಷಕರ ನೆಮ್ಮದಿ ಕೂಡ ಹಾಳಾಗುವಂತಾಗಿದೆ.
    | ಬಸವರಾಜ ಕಮ್ಮಾರ ಮುಖ್ಯೋಪಾಧ್ಯಾಯ

    ಶಾಲೆ ಕಟ್ಟಡಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 15 ಕೋಟಿ ರೂ. ವೆಚ್ಚದಲ್ಲಿ ಎರಡು ಹೊಸ ಕೊಠಡಿ ನಿರ್ವಣಕ್ಕೆ ಮಂಜೂರಾತಿ ನೀಡಲಾಗಿದೆ. ಶಿಥಿಲಗೊಂಡ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಶಾಲೆ ಆವರಣದಲ್ಲಿ ರಾತ್ರಿ ವೇಳೆ ನಡೆಯುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಂಪೌಂಡ್ ನಿರ್ವಿುಸಲು ಶಾಲೆಯ ಪೂರ್ಣ ಜಾಗ ಸರ್ವೆ ಮಾಡಲು ಪುರಸಭೆಗೆ ತಿಳಿಸಲಾಗಿದೆ. ಸರ್ವೆ ಬಳಿಕ ಕಾಂಪೌಂಡ್ ನಿರ್ವಿುಸಲಾಗುವುದು.
    | ಎಂ.ಬಿ. ಅಂಬಿಗರ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts