More

    ಕಾಶಪ್ಪನವರ ವಿರುದ್ಧ ಹರಿಹಾಯ್ದ ಮಾಜಿ ಎಂಎಲ್‌ಎ ದೊಡ್ಡನಗೌಡ ಪಾಟೀಲ

    ಇಳಕಲ್ಲ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮೊದಲೇ ಹುನಗುಂದ ಮತಕ್ಷೇತ್ರದಲ್ಲಿ ಮಾಜಿ, ಹಾಲಿ ಶಾಸಕರ ಮಾತಿನ ಚಕಮಕಿ ತಾರಕಕ್ಕೇರಿದೆ.

    ಬಿಜೆಪಿಯ ಗ್ರಾಮ ಚಲೋ ಅಭಿಯಾನಕ್ಕೆ ನಗರದ ಆರ್.ವೀರಮಣಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಶಾಸಕ ಕಾಶಪ್ಪನವರ ಒಂದು ಕಾರ್ಯಕ್ರಮದಲ್ಲಿ ನನ್ನನ್ನು ದಡ್ಡ ಎಂದು ಸಂಬೋಧಿಸಿದ್ದು, ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ತಂದ ಯೋಜನೆಗಳಿಗೆ ಮತ್ತೆ ಪೂಜೆ ಮಾಡುತ್ತಿರುವ ಆತ ನಾಲಾಯಕ್ ಶಾಸಕ ಎಂದು ಜರಿದರು.

    ಹುನಗುಂದ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಲ್ಲಿ ಅನುದಾನ ತಂದು ಕೆಲಸಗಳನ್ನು ಮಾಡಿದ್ದೇನೆ. ನಾನು ತಂದ ಯೋಜನೆಗಳಲ್ಲಿ ದುಡ್ಡು ಹೊಡೆಯುತ್ತಿದ್ದೀಯಲ್ಲ ನೀನು ನಿಜವಾದ ಜಾಣ ಎಂದು ಕಾಶಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಎಷ್ಟು ಮನೆ ತಂದಿದ್ದೀಯಾ ಎಂದು ಹಾಲಿ ಶಾಸಕರಿಗೆ ಪ್ರಶ್ನಿಸಿದ ದೊಡ್ಡನಗೌಡ ಪಾಟೀಲ, ಈ ಕ್ಷೇತ್ರದಲ್ಲಿ ಬಡವರಿಗಾಗಿ ಮನೆಗಳನ್ನು ಕಟ್ಟಿಸಿದವರು ಯಾರು? ನನ್ನ ಅಧಿಕಾರ ಅವಧಿಯಲ್ಲಿ 1400 ಮನೆಗಳನ್ನು ಮಂಜೂರು ಮಾಡಿಸಿ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಹಕ್ಕುಪತ್ರಗಳನ್ನು ಕೊಡಿಸಲು ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ, ಹಕ್ಕು ಪತ್ರಗಳನ್ನು ಕೊಡದಂತೆ ಬೇರೆಯವರಿಂದ ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದು ಯಾರು ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿಲ್ಲವೇ? ನಾಯಿ ಕೊಡೆಗಳಂತೆ ಇಸ್ಪೇಟ್ ಅಡ್ಡೆಗಳು ಹುಟ್ಟಿಕೊಂಡಿದ್ದೇಕೆ? ಇಸ್ಪೇಟ್ ಅಡ್ಡೆಗಳಿಂದ ನೇರವಾಗಿ ನಿಮ್ಮ ಮನೆಗೆ ದುಡ್ಡು ಹೋಗುತ್ತದೆ. ಯಾವೊಬ್ಬ ಶಾಸಕ ಮರಳು ಗಣಿಗಾರಿಕೆ ಪಾಯಿಂಟ್‌ಗೆ ಹೋದ ಉದಾಹರಣೆ ಇದೆಯಾ? ಆದರೆ ನಮ್ಮ ಕ್ಷೇತ್ರದ ಶಾಸಕ ಮರಳು ಪಾಯಿಂಟ್‌ಗೆ ಹೋಗಿ ನಿಲ್ಲುತ್ತಾನೆ. ಮರಳು ಪಾಯಿಂಟ್‌ನಲ್ಲಿ ಎಷ್ಟು ದುಡ್ಡು ಬರುತ್ತೆ ಎಂದು ಲೆಕ್ಕ ಹಾಕುತ್ತಾನೆ ಎಂದು ಹರಿಹಾಯ್ದರು.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮೆಲ್ಲರ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಬಾಗಲಕೋಟೆ ಲೋಕಸಭೆ ಅಭ್ಯರ್ಥಿಗೆ ಹುನಗುಂದ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಿಂತ 15ಸಾವಿರಕ್ಕೂ ಹೆಚ್ಚು ಮತ ಲಭಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ಇಂದಿನಿಂದ ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕರ್ತರು ಚುನಾವಣೆ ಕಾರ್ಯದಲ್ಲಿ ತೊಡಗಬೇಕು ಎಂದರು.

    ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವ ಹಿನ್ನೆಲೆಯಲ್ಲಿ ಹುನಗುಂದ ಮತಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರು, ಶಕ್ತಿ ಕೇಂದ್ರದ ಪ್ರಮುಖರಿಗೆ ಕಾರ್ಯಗಾರ ನಡೆಸಲಾಯಿತು.

    ಬಿಜೆಪಿ ನಗರಮಂಡಲ ಅಧ್ಯಕ್ಷ ಅರವಿಂದ ಮಂಗಳೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿರೇಶ ಉಂಡೋಡಿ, ಮಹಾಂತೇಶ ಕಡಪಟ್ಟಿ, ಮಲ್ಲಯ್ಯ ಮೂಗನೂರಮಠ, ಜ್ಯೋತಿ ಕಾಟಾಪುರ, ಮಲ್ಲಿಕಾರ್ಜುನ ಚೂರಿ, ನಂದು ಗಾಯಕವಾಡ, ವೆಂಕಟೇಶ ರಂಗಣ್ಣನವರ, ವೀರಣ್ಣ ಹಳೇಗೌಡರ, ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ವಿಸ್ತಾರಕರಾಗಿ ಆಗಮಿಸಿರುವ ಉಲ್ಲಾಸ ಪೊಂಡೆಕಾರ, ಬಿಜೆಪಿ ಗ್ರಾಮೀಣ ಮಂಡಲದ ಕಾರ್ಯದರ್ಶಿ ಬಸವರಾಜ ಹುನಕುಂಟಿ, ಇಳಕಲ್ಲ -ಹುನಗುಂದ ನಗರ ಸಭೆ ಹಾಗೂ ಪುರಸಭೆಯ ಬಿಜೆಪಿ ಸದಸ್ಯರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts