More

    ಕಾವೇರಿ ನೀರು ಹಂಚಿಕೆ ಪಿಎಂ ಪ್ರವೇಶಕ್ಕೆ ಆಗ್ರಹ  -ಸಂಸದರ ಕಚೇರಿಗೆ ಕರವೇ ಮುತ್ತಿಗೆ 

    ದಾವಣಗೆರೆ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು. ರಾಜ್ಯದ ಸಂಸದರು ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
    ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯದ ಎಷ್ಟು ಸಂಸದರು ಭಾಗಿಯಾಗಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. ರಾಜ್ಯದ ಬಗೆಗಿರುವ ಕಾಳಜಿ ಕುರಿತಂತೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸ್ಪಷ್ಟೀಕರಿಸಬೇಕೆಂದು ಒತ್ತಾಯಿಸಿದರು. ನಂತರ ಅಲ್ಲಿನ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಿದರು.
    ರಾಜ್ಯದ ಸಂಸದರು ಸಂಸತ್ತಿನಲ್ಲಿ ನೀರಾವರಿ ವಿಚಾರದಲ್ಲಿ ಧ್ವನಿ ಎತ್ತದ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಅಭಿವೃದ್ಧಿ ಪ್ರಾಧಿಕಾರ ಎರಡೂ ಸಂಸ್ಥೆಗಳು ಕರ್ನಾಟಕಕ್ಕೆ ದ್ರೋಹ ಎಸಗಿವೆ.
    ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ವಕೀಲರು ಕಾವೇರಿ ನೀರಿನ ಪ್ರಮಾಣದ ಕುರಿತು ಸಮರ್ಪಕ ವಾದ ಮಂಡಿಸದ್ದರಿಂದಾಗಿ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರೈತರು ಮತ್ತು ಕನ್ನಡಪರ ಸಂಘಟನೆಗಳ ಹೋರಾಟ ತೀವ್ರಗೊಂಡಾಗ ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಕಾವೇರಿ ತೀರದಲ್ಲಿ ನೀರಿನ ಪ್ರಮಾಣ ಕುರಿತು ಪರಿಶೀಲಿಸದೆಯೇ ಹಾಗೂ ಅಧಿಕಾರಿಗಳನ್ನು ನೇಮಕ ಮಾಡದೆಯೇ ಸುಪ್ರೀಂ ಕೋರ್ಟ್ ಕೂಡ ಪ್ರಾಧಿಕಾರದ ಆದೇಶವನ್ನೇ ಎತ್ತಿ ಹಿಡಿದಿರುವುದು ರಾಜ್ಯದ ಪಾಲಿಗೆ ಕಹಿಯಾಗಿದೆ. ಕೂಡಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
    ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ದುರ್ಗಾಶ್ರೀ ಅವರ ಮೂಲಕ ಸರ್ಕಾರಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಗಿರೀಶ್‌ಕುಮಾರ್, ಮಂಜುಶ್ರೀ ಗೌಡ, ಜಿ.ಎಸ್.ಸಂತೋಷ್, ರವಿಕುಮಾರ್, ಜಬೀ ಉಲ್ಲಾ, ಎನ್.ಡಿ.ಲೋಕೇಶ್, ಗೋಪಾಲ ದೇವರಮನಿ, ಜಬೀ ಉಲ್ಲಾ ಖಾನ್ ಪೈಲ್ವಾನ್, ತನ್ವೀರ್, ಬಸಮ್ಮ, ಶಾಂತಮ್ಮ ಬೆಳಗಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts