More

    ಕಾಲ ಕೂಡಿ ಬಂದಾಗ ಮುಂದಿನ ನಡೆ ಬಹಿರಂಗ

    ಹಳಿಯಾಳ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮತದಾರರು ಹಾಗೂ ಜನಪ್ರತಿನಿಧಿಗಳೊಂದಿಗೆ ನಾನು ನಿತ್ಯ ಸಂಪರ್ಕದಲ್ಲಿರುವುದರಿಂದ ಹಾಗೂ ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ. ಸಂಘಟನೆಗೆ ಬಲ ತುಂಬಿದ್ದೇನೆ. ಕಾಲ ಕೂಡಿ ಬಂದಾಗ ನನ್ನ ರಾಜಕೀಯ ಭವಿಷ್ಯದ ನಡೆಯನ್ನು ಬಹಿರಂಗಪಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕರ್ತರಿಗೆ ಯಾವತ್ತೂ ಲಭ್ಯವಾಗುತ್ತಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನಗೆ ಸಹಕಾರ, ಬೆಂಬಲ ನೀಡಲಿಲ್ಲ. ನಾನು ಮಾತ್ರ ನನ್ನ ಕಾರ್ಯಕರ್ತರ ಹಾಗೂ ಬೆಂಬಲಿಗರ ಅಪಾರ ಪಡೆಯೊಂದಿಗೆ ಪಕ್ಷವನ್ನು ಬಲಿಷ್ಠವಾಗಿಸುತ್ತಿದ್ದೇನೆ ಹೊರತು ಪಕ್ಷಕ್ಕೆ ಯಾವತ್ತೂ ದ್ರೋಹ ಎಸಗಿಲ್ಲ ಎಂದರು.

    ಬಿಜಿನೆಸ್ ಮುಖ್ಯ: ರಾಜಕಾರಣಕ್ಕಿಂತ ಬಿಜಿನೆಸ್​ಗೆ ನಾನು ಮೊದಲ ಆದ್ಯತೆ ನೀಡಿದ್ದೇನೆ. ಸಮಾಜ ಸೇವೆ ಹಾಗೂ ರಾಜಕಾರಣ ಮಾಡಲು ನಾವು ಮೊದಲು ಆರ್ಥಿಕವಾಗಿ ಸಬಲರಾಗಿರಬೇಕು ಎಂಬ ವಿಚಾರದಲ್ಲಿ ವಿಶ್ವಾಸವಿರಿಸಿಕೊಂಡಿದ್ದೇನೆ. ನನ್ನ ಬಿಜಿನೆಸ್​ಗೆ

    ಯಾರೂ ಗಾಡ್ ಫಾದರ್ ಇಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದ ನನ್ನ ಬಿಜಿನೆಸ್ ಸಾಮ್ರಾಜ್ಯವನ್ನು ಬೆಳೆಸಿದ್ದೇನೆ ಹೊರತು ಯಾರ ಕೃಪಾಕಟಾಕ್ಷದಿಂದಲ್ಲ. ಬಿಜಿನೆಸ್ ಮೂಲಕ ಬಂದ ಆರ್ಥಿಕ ಲಾಭವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಸಿಕೊಂಡಿದ್ದು, ನನ್ನ ಬಳಿ ನೆರವು ಯಾಚಿಸಿ ಬರುವವರಿಗೆ, ಸಂಕಟದಲ್ಲಿರುವವರಿಗೆ ನೆರವು ನೀಡಿದ್ದೇನೆ ಎಂದು ಹೇಳಿದರು.

    ಹಿಡಿತ ತಪ್ಪಿದೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸುನೀಲ ಹೆಗಡೆ ತಾವೇ ಹಾಲಿ ಶಾಸಕರೆಂಬ ಭ್ರಮೆಯಲ್ಲಿದ್ದು, ತಾಲೂಕಿನ ಅನುಷ್ಠಾನ ಅಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಇತ್ತ ಶಾಸಕ ಆರ್.ವಿ. ದೇಶಪಾಂಡೆ ಆಡಳಿತದಲ್ಲಿ ಹಿಡಿತವನ್ನು ಸಡಿಲಗೊಳಿಸಿರುವಂತೆ ಕಂಡು ಬರುತ್ತಿದ್ದು, ಅವರು ಈಗಲಾದರೂ ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಬೇಕು ಎಂದು ಆಗ್ರಹಿಸಿದರು. ತಮ್ಮ ಭವಿಷ್ಯವನ್ನು ಊಹಿಸಿ ಹತಾಶರಾಗಿರುವ ಸುನೀಲ ಹೆಗಡೆ ಮರಾಠ ಸಮಾಜವನ್ನು ಒಡೆಯುವ ಕಾರ್ಯ ಮುಂದುವರಿಸಿದ್ದು, ಕ್ಷೇತ್ರದ ಪ್ರಜ್ಞಾವಂತ ಮತದಾರರು ಮಾತ್ರ ಪ್ರತಿಯೊಂದನ್ನು ಪರಾಮಶಿಸಿಯೇ ನಮಗೆ ಆಶೀರ್ವಾದಿಸುತ್ತಿದ್ದಾರೆ. ಇದರ ಪರಿಣಾಮವನ್ನು ಎಪಿಎಂಸಿ ಚುನಾವಣೆಯಲ್ಲಿ ಸುನೀಲ ಹೆಗಡೆ ಅನುಭವಿಸಿದ್ದಾರೆ. ನನ್ನ ಪುತ್ರ ಶ್ರೀನಿವಾಸ ಘೊಟ್ನೇಕರ ಎಪಿಎಂಸಿ ಅಧ್ಯಕ್ಷರಾದ ನಂತರ ಎಪಿಎಂಸಿ ಅಭಿವೃದ್ಧಿ ಕಾಲವೇ ಆರಂಭಗೊಂಡಿತು. ಅದನ್ನು ನೋಡಿಯೇ ಎಲ್ಲರೂ ಪಕ್ಷಾತೀತವಾಗಿ ನನ್ನ ಮಗನನ್ನು ಪುನರಾಯ್ಕೆ ಮಾಡಿದರು ಎಂದರು. ಕಾಂಗ್ರೆಸ್ ಸಹಕಾರಿ ಮುಖಂಡ ಶಿವಪುತ್ರಪ್ಪ ನುಚ್ಛಂಬ್ಲಿ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಸದಸ್ಯ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ, ಬಾಳಕೃಷ್ಣ ಶಹಾಪುರಕರ ಉಪಸ್ಥಿತರಿದ್ದರು.

    ಬಿಜೆಪಿ ಆಡಳಿತದಿಂದ ನಿರುದ್ಯೋಗ, ಬೆಲೆ ಏರಿಕೆ ಬಿಸಿ
    ಹಳಿಯಾಳ:
    ದೇಶದಲ್ಲಿ ಬಿಜೆಪಿ ಆಡಳಿತದಿಂದ ಬಡ ಹಾಗೂ ಮಧ್ಯಮ ವರ್ಗದ ಜನ ಹತಾಶರಾಗಿದ್ದು, ನಿರುದ್ಯೋಗ, ಬೆಲೆ ಏರಿಕೆ ಬಿಸಿ ತಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೊಷಿಸಿದ ಪ್ಯಾಕೇಜ್​ಗಳು ಇನ್ನೂ ಅರ್ಹರಿಗೆ ದೊರೆಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಹೇಳಿದರು. ಕೆಸರೊಳ್ಳಿ ಗ್ರಾಮದ ರಾಜಶೇಖರ ರೆಸಾರ್ಟ್​ನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಡಿಕೆಶಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ ಮಾತನಾಡಿ, ಜುಲೈ 2ರಂದು ನಡೆಯುವ ಪದಗ್ರಹಣದ ಸಮಯದಲ್ಲಿ ನಾವೆಲ್ಲರೂ ಪಕ್ಷ ಬಲಪಡಿಸುವ, ಬಡವರಿಗೆ ನ್ಯಾಯ ನೀಡುವ ಪ್ರಮಾಣ ಮಾಡೋಣ. ತಾಲೂಕಿನಲ್ಲಿ ಪದಗ್ರಹಣ ಸಮಾರಂಭ ವೀಕ್ಷಿಸಲು 7 ಸಾವಿರ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರಾಧ್ಯ, ಕ್ಷೇತ್ರ ವೀಕ್ಷಕ ಶಿವಯೋಗಿ ಹಿರೇಮಠ, ಸಾಮಾಜಿಕ ಜಾಲತಾಣ ಸಂಯೋಜಕ ವೀರೇಶ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷ್ಣ ಪಾಟೀಲ, ಬಿ.ಡಿ. ಚೌಗಲೆ, ಅಜರ ಬಸರಿಕಟ್ಟಿ, ಸತ್ಯಜಿತ ಗಿರಿ, ಗುಲಾಭಷ್ಯಾ ಲತೀಪಣ್ಣನವರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹನೋರಿಯಾ ಬೃಗಾಂಜಾ, ರವಿ ತೋರಣಗಟ್ಟಿ, ಸಂಜು ಮಿಶಾಳೆ, ಅಶೋಕ ಅಂಗ್ರೋಳ್ಳಿ, ನಂದಾ ಕೊರ್ವೆಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts